ದೆಹಲಿಯಲ್ಲಿ ಮತ್ತೆ ಅಪಾಯದ ಮಟ್ಟ ತಲುಪಿದ ಜೀವನದಿ ಯುಮುನಾ!
ನವದೆಹಲಿ: ರಾಷ್ಟ್ರ ರಾಜಧಾನಿಗೆ ಕಂಟಕ ತಪ್ಪುತ್ತಿಲ್ಲ. ಇನ್ನೇನು ಮಳೆ, ಪ್ರವಾಹ ಕಡಿಮೆ ಆಯ್ತು ಅನ್ನುವಷ್ಟರಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಮೂರು ದಿನದಿಂದ ಒಂದಷ್ಟು ಶಾಂತವಾಗಿದ್ದ ಜೀವನದಿ ಯುಮುನಾ ಮತ್ತೆ ಅಬ್ಬರಿಸುತ್ತಿದ್ದು, ನದಿ ದಡದಿಂದ ಮೇಲಕ್ಕೆ ಉಕ್ಕಿ ಹರಿಯುತ್ತಿದೆ. ಹೀಗಾಗಿ ಸ್ಥಳೀಯರು ಭಯಗೊಂಡಿದ್ದು ದೆಹಲಿ ಮತ್ತೊಮ್ಮೆ ಮುಳುಗಡೆ ಭೀತಿಯಲ್ಲಿದೆ.
ಪ್ರವಾಹದ ಜೊತೆ ದೆಹಲಿಯಲ್ಲಿ ಮಳೆ ಅಬ್ಬರ ಕೂಡ ಮುಂದುವರಿದಿದ್ದು, ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನೀರಿನ ಮಟ್ಟ ಸುಮಾರು 205 ಮೀಟರ್ ತಲುಪಿದೆ. ಹೀಗಾಗಿ ಇಲ್ಲಿನ ಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಕಳೆದ ಒಂದು ವಾರ ಪೂರ್ತಿ ಮಿತಿ ಮೀರಿದ್ದ ನದಿ ನೀರಿನ ಮಟ್ಟ, ಕಳೆದ ಒಂದರೆಡು ದಿನದಿಂದ ಹಿಡಿತಕ್ಕೆ ಸಿಕ್ಕಿತ್ತು. ಆದರೆ ಇಂದು ಬೆಳಗ್ಗೆ ಮತ್ತೆ ನದಿ ಉಗ್ರ ರೂಪ ತಾಳಿದೆ. ಹತ್ನಿಕುಂಡ್ ಬ್ಯಾರೇಜ್‌ನಲ್ಲಿ ಒಳ ಹರಿವಿನ ಪ್ರಮಾಣವು ಒಂದಷ್ಟು ಕಡಿಮೆಯಾಗಿದೆ. ಇದೀಗ ದೆಹಲಿಯ ತಗ್ಗು ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ. ಜೀವ ಉಳಿಸಿಕೊಳ್ಳಲು ಮತ್ತೆ ಜಾಗ ಖಾಲಿ ಮಾಡಬೇಕಿದೆ. ಸಾವಿರಾರು ಜನರು ತಮ್ಮ ನೆಲೆ ಕಳೆದುಕೊಂಡು ದೆಹಲಿ ಹೊರಗೆ ಹೋಗಿದ್ದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ.

ರಾಜಧಾನಿಗೆ ಏನಿದು ಪ್ರವಾಹ ಕಂಟಕ?
ಉಕ್ಕಿ ಹರಿಯುತ್ತಿರುವ ಯಮುನಾ ನದಿ ಎಷ್ಟು ಭಯಾನಕವಾಗಿ ಕಾಣುತ್ತಿದೆ ಅಂದ್ರೆ, ಜೀವನದಿ ಎಂದು ಕರೆಸಿಕೊಳ್ಳುವ ಯಮುನೆಯ ರೌದ್ರವಾತಾರ ಕಂಡು ದೆಹಲಿ ಜನ ದೂರ ಓಡುತ್ತಿದ್ದಾರೆ. ಅಲ್ಲದೆ ಯಮುನೆಯ ನೀರಿನ ಹರಿವಿನ ಮಟ್ಟ ಸುಮಾರು 40 ವರ್ಷ ಹಿಂದಿನ ದಾಖಲೆಯನ್ನೂ ಧೂಳ್ ಮಾಡಿದೆ. ಹರಿಯಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕಾರಣ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಹೀಗಾಗಿ ಯಮುನೆ ನೀರಿನ ಮಟ್ಟ ಸತತ ಹಲವು ದಿನದಿಂದ ಕಡಿಮೆ ಆಗುತ್ತಿಲ್ಲ. ಈಗೀಗ ಒಂದಷ್ಟು ಹಿಡಿತಕ್ಕೆ ಬರುತ್ತಿದ್ದರೂ ಮತ್ತೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿರುವುದು ಆತಂಕ ಮೂಡಿಸಿದೆ.
ಹೊಸ ಇತಿಹಾಸ ನಿರ್ಮಿಸಿದ್ದ ಯಮುನಾ!
ಅಂದಹಾಗೆ ಯಮುನಾ ನದಿ ಇತಿಹಾಸದಲ್ಲೇ ಜುಲೈ 13 ಮರೆಯಲಾಗದ ದಿನ. ಏಕೆಂದರೆ ಅಂದು ಯಮುನಾ ನದಿ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟ ಅಂದ್ರೆ ಸುಮಾರು 208 ಮೀಟರ್‌ಗೆ ಏರಿತ್ತು. 8 ದಿನಗಳ ನಂತರದಲ್ಲಿ ನದಿ ನೀರಿನ ಮಟ್ಟ ಸ್ವಲ್ಪ ಇಳಿದಿತ್ತು. 1978ರಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಯಮುನಾ ನದಿ ಮಟ್ಟ 207.49 ಮೀಟರ್‌ಗೆ ತಲುಪಿತ್ತು. ಆ ಬಳಿಕ ಮತ್ತೊಮ್ಮೆ ಹೊಸ ದಾಖಲೆ ಬರೆದಿತ್ತು. ಈಗ ಎಲ್ಲಾ ಸರಿಹೋಯಿತು ಅಂತಾ ತಿಳಿಯುವುದರ ಒಳಗೆ ಮತ್ತೆ ಭಯ ಶುರುವಾಗಿದೆ. ನದಿ ನೀರಿನ ಮಟ್ಟ ಇನ್ನಷ್ಟು ಏರಿಕೆ ಕಾಣುವ ಭೀತಿ ಇದೆ. ಈಗಾಗಲೇ ಕೇಜ್ರಿವಾಲ್ ನೇತೃತ್ವದ ದೆಹಲಿಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ಘೋಷಣೆ ಮಾಡಿದೆ.

ಉತ್ತರ ಭಾರತದಲ್ಲಿ ನಿಲ್ಲುತ್ತಿಲ್ಲ ಮಳೆ
ಹಾಗೇ ಜುಲೈ 22 ರವರೆಗೂ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದದಲ್ಲಿ ಭಾರೀ ಮಳೆ ಮತ್ತು ದೆಹಲಿಯಲ್ಲಿಇಂದು ಸಾಧಾರಣ ಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದರೂ ಭಯ ಆವರಿಸಿದೆ. ಯಾವ ಕ್ಷಣ ಏನಾಗುತ್ತೋ ಗೊತ್ತಿಲ್ಲ, ನೀರು ಯಾವ ಜಾಗಕ್ಕೆ ನುಗ್ಗುತ್ತೋ ಗೊತ್ತಿಲ್ಲ. ಹೀಗಾಗಿ ದೆಹಲಿ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ಕೇಂದ್ರ ಸರ್ಕಾರದ ಪ್ರಮುಖ ಕಚೇರಿಗಳು ಸೇರಿ ಸುಪ್ರೀಂಕೋರ್ಟ್ ಕಟ್ಟಡ ಕೂಡ ಯಮುನಾ ನದಿಯ ಅಬ್ಬರಕ್ಕೆ ಬೆಚ್ಚಿ ಬೀಳುವಂತಾಗಿದೆ. ನದಿ ಮತ್ತೆ ಅಪಾಯದ ಮಟ್ಟ ಮೀರಿದ ಹಿನ್ನೆಲೆಯಲ್ಲಿ ನದಿ ಬಳಿ ಸುಳಿಯದಂತೆ ಸೂಚನೆ ನೀಡಲಾಗಿದೆ.












Click it and Unblock the Notifications