ಲಂಡನ್ ಮಾದರಿ ಉಗ್ರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಕಟ್ಟೆಚ್ಚರ!
ನವದೆಹಲಿ, ಜೂನ್ 21 : ಸುಮಾರು ಆರೇಳು ಉಗ್ರರು ದೆಹಲಿ ಪ್ರವೇಶಿಸಿದ್ದು, ಲಂಡನ್ ನ ಮ್ಯಾಂಚೆಸ್ಟರ್ ಮಾದರಿಯಲ್ಲಿ ಉಗ್ರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಸುಳಿವು ನೀಡಿದೆ.
ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ದೇಶದಾದ್ಯಂತ ಹೈ ಅಲರ್ಟ್ ಘೋಷಿಸಲು ಕೂಡ ಸಲಹೆ ನೀಡಲಾಗಿದೆ. ಭಯೋತ್ಪಾದಕರ ದಾಳಿಯ ಸಮಯ, ಸ್ಥಳ, ಗುರುತು, ಯೋಜನೆ ಮತ್ತಿತರ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ.

ಮೂಲಗಳ ಪ್ರಕಾರ ರಂಜಾನ್ ಹಬ್ಬದ ವೇಳೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವುದೇ ಕ್ಷಣದಲ್ಲೂ ಜನಸಂದಣಿ ಇರುವ ಸ್ಥಳಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಹೀಗಾಗಿ ದೇಶದ ಎಲ್ಲ ಭದ್ರತಾ ಪಡೆಗಳಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ದೆಹಲಿ ವಿಶೇಷ ಪೊಲೀಸ್ ಪಡೆ ಸೂಚನೆ ನೀಡಿದೆ.
ಬಸ್ ನಿಲ್ದಾಣ, ರೈಲು ನಿಲ್ದಾಣ, ಪಂಚತಾರಾ ಹೊಟೆಲ್ ಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಮಾರುಕಟ್ಟೆಗಳು, ಧಾರ್ಮಿಕ ಕೇಂದ್ರಗಳು, ವಿದೇಶಿ ರಾಯಭಾರಿ ಕಚೇರಿಗಳು, ಮೆಟ್ರೋ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಕ್ರೀಡಾಂಗಣಗಳು ಮತ್ತು ಪ್ರವಾಸಿ ತಾಣಗಳು ಸೇರಿಸಿದಂತೆ ಪ್ರಮುಖ ಸ್ಥಳಗಳಿಗೆ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಗಿದೆ.












Click it and Unblock the Notifications