Atishi: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ದೆಹಲಿ ಮುಖ್ಯಮಂತ್ರಿವರೆಗೆ: ಅತಿಶಿ ರಾಜಕೀಯ ಹಾದಿ
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮಂಗಳವಾರ) ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ. ಅವರ ಬದಲಾಗಿ ಅತಿಶಿ ಅವರನ್ನು ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ನಡೆದ ಆಮ್ ಆದ್ಮಿ ಪಕ್ಷದ ನಾಯಕರ ಸಭೆಯಲ್ಲಿ ಅತಿಶಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
43 ವರ್ಷದ ಅತಿಶಿ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆ (PWD) ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ಹಿರಿಯ ನಾಯಕರು ಸಹಮತ ವ್ಯಕ್ತಪಡಿಸಿದ ಕಾರಣ, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಮುಂದಿನ ಸಿಎಂ ಆಯ್ಕೆ ಮಾಡಲಾಯಿತು.

ಹಿರಿಯ ನಾಯಕರಾದ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಇಬ್ಬರೂ ಕೂಡ ಬಂಧನವಾದ ಬಳಿಕ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಅತಿಷಿ ಆಯ್ಕೆ ಸುಲಭವಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನಿರೀಕ್ಷೆ
ರೋಡ್ಸ್ ಸ್ಕಾಲರ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿರುವ ಅತಿಶಿ, ಮುಖ್ಯಮಂತ್ರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸದಲ್ಲಿದ್ದಾರೆ. ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯಾಗಿರುವ ಹಿಂದಿರುವ ಪ್ರಮುಖ ವ್ಯಕ್ತಿ ಇವರೇ ಆಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಮಹತ್ವಾಕಾಂಕ್ಷೆ ಕೂಡ ಅವರಲ್ಲಿದೆ. ಇಂದು ದೆಹಲಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆಯಾಗಿದ್ದರೆ ಅರದಲ್ಲಿ ಅತಿಶಿಯವರ ಪಾತ್ರ ಪ್ರಮುಖವಾಗಿದೆ.
ಮಾರ್ಚ್ 2023 ರಲ್ಲಿ ದೆಹಲಿಯ ಮದ್ಯ ನೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ಸಿಸೋಡಿಯಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಲ್ಕಾಜಿ ಕ್ಷೇತ್ರದ ಶಾಸಕಿಯಾಗಿರುವ ಅತಿಶಿ ಸಚಿವ ಸ್ಥಾನ ಪಡೆದುಕೊಂಡರು. ಅಂದಿನಿಂದ ಅವರು ಸರ್ಕಾರದ ಪ್ರಮುಖ ಯೋಜನೆಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ವೇಳೆ ಕೇಜ್ರಿವಾಲ್ ಕಾನೂನು ಹೋರಾಟದಲ್ಲಿದ್ದಾಗ, ದೆಹಲಿ ಸರ್ಕಾರದ ಅಧಿಕೃತ ಸಮಾರಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಅತಿಶಿ ಅವರನ್ನು ಆಯ್ಕೆ ಮಾಡಲಾಗಿತ್ತು, ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸಮಾರಂಭಕ್ಕೆ ಅವಕಾಶ ನೀಡಲಿಲ್ಲ.
ಆಮ್ ಆದ್ಮಿ ಪಕ್ಷ ಸೇರುವ ಮೊದಲು ಹಲವು ಸಂಸ್ಥೆಗಳ ಜೊತೆ ಕೆಲಸ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ದೆಹಲಿಯ ನೀರಿನ ಬಿಕ್ಕಟ್ಟು ಮತ್ತು ಮಹಿಳಾ ಸುರಕ್ಷತೆಯಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೂಡ ಅವರು ಕೆಲಸ ಮಾಡಿದ್ದಾರೆ.












Click it and Unblock the Notifications