Delhi Elections 2025: ದೆಹಲಿ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್
ನವದೆಹಲಿ, ಫೆಬ್ರವರಿ 1 : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕಾಂಗ್ರೆಸ್ ಹೈಕಮಾಂಡ್ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನ ದೆಹಲಿಗೆ ಕರೆಸಿಕೊಂಡಿದೆ. ಹೈಕಮಾಂಡ್ ಸೂಚನೆಯಂತೆ ಡಿಸಿಎಂ ಡಿ ಕೆ ಶಿವಕುಮಾರ್ ದೆಹಲಿಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಸ್ತೂರನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಪರವಾಗಿ ಶನಿವಾರ ಪ್ರಚಾರ ನಡೆಸಿದರು. ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಕರ್ನಾಟಕ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ದೆಹಲಿಗೆ ಬದಲಾವಣೆ ಬೇಕು, ಅದನ್ನು ಉಳಿಸಲು ಕಾಂಗ್ರೆಸ್ ಬೇಕು.

ಮುಂಬರುವ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದು, ಪಕ್ಷದ ಬಲವು ದೇಶದ ಬಲಕ್ಕೆ ಸಮಾನಾರ್ಥಕವಾಗಿದೆ. ದೆಹಲಿಯ ಜನರು ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಅಡಿಯಲ್ಲಿ ಆಡಳಿತವನ್ನು ಅನುಭವಿಸಿದ್ದಾರೆ ಮತ್ತು ಅವರ ನಡುವಿನ ವ್ಯತ್ಯಾಸಗಳ ಬಗ್ಗೆಯೂ ಸಹ ಜನರಿಗೆ ತಿಳಿದಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಬಲವು ದೇಶದ ಬಲ ಎಂದು ಎಲ್ಲರಿಗೂ ತಿಳಿದಿದೆ. ದೆಹಲಿಯ ಜನರು ಎಲ್ಲಾ ಪಕ್ಷಗಳಿಗೂ ಅವಕಾಶ ನೀಡಿದ್ದಾರೆ. ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದ ನಡುವಿನ ವ್ಯತ್ಯಾಸವನ್ನು ಅವರು ತಿಳಿದಿದ್ದಾರೆ. ದೆಹಲಿಗೆ ಬದಲಾವಣೆಯ ಅಗತ್ಯವಿದೆ ಮತ್ತು ಕಾಂಗ್ರೆಸ್ ಮಾತ್ರ ನಗರವನ್ನು ಉಳಿಸಬಲ್ಲದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ನಮ್ಮ ಪಕ್ಷ ಸಂವಿಧಾನ ರಕ್ಷಣೆಗೆ ಹೋರಾಟ ಮಾಡುತ್ತಿದ್ದು, ದೇಶದ ಸಂವಿಧಾನವೂ ಉಳಿಯಬೇಕು ಹಾಗೂ ನಿಮ್ಮೆಲ್ಲರ ಹಕ್ಕುಗಳೂ ಉಳಿಯಬೇಕು. 40 ವರ್ಷಗಳ ಹಿಂದೆ ದೆಹಲಿಯಲ್ಲಿ ಕೇವಲ ಮೇಯರ್ ಅವರನ್ನು ಮಾತ್ರ ಆಯ್ಕೆ ಮಾಡಲಾಗುತ್ತಿತ್ತು. ಆದರೆ ರಾಜೀವ್ ಗಾಂಧಿ ಅವರು ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಿ ಶಕ್ತಿ ತುಂಬಿದರು. ಆನಂತರ ದಿವಂಗತ ಶೀಲಾ ದೀಕ್ಷಿತ್ ಅವರ ಅವಧಿಯಲ್ಲಿ ಕಂಡ ಪ್ರಗತಿಯನ್ನು ನಂತರದ 10 ವರ್ಷಗಳಲ್ಲಿ ದೆಹಲಿ ಕಾಣಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಈ ಹಿಂದೆ ಏನಾಗಿದೆ ಎಂಬ ಚರ್ಚೆ ಈಗ ಬೇಡ. ನೀವೆಲ್ಲರೂ ಭವಿಷ್ಯದತ್ತ ಗಮನಹರಿಸಬೇಕು. ಇದಕ್ಕಾಗಿ ನಿಮ್ಮ ಕೈಯಲ್ಲಿ ಅತ್ಯುತ್ತಮ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ನೀವು ಬಳಸಿಕೊಳ್ಳಬೇಕು. ನಾವು ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಇತಿಹಾಸ ಸಂರಕ್ಷಣೆಗೆ ಹೋರಾಟ ಮಾಡುತ್ತಿದ್ದೇವೆ. ಸಂವಿಧಾನ ಉಳಿಯಬೇಕು, ನಿಮ್ಮ ಹಕ್ಕುಗಳೂ ಉಳಿಯಬೇಕು. ನೀವು ಆಯ್ಕೆ ಮಾಡುವ ಸರ್ಕಾರ ಜನ ಸಾಮಾನ್ಯರ ರಕ್ಷಣೆ ಮಾಡಬೇಕೇ ಹೊರತು ದೊಡ್ಡ ಉದ್ಯಮಿಗಳ ರಕ್ಷಣೆಯನ್ನಷ್ಟೇ ಮಾಡುವುದಲ್ಲ ಎಂದು ತಿಳಿಸಿದರು.
ಇಡೀ ದೇಶ ದೆಹಲಿ ಚುನಾವಣೆಯತ್ತ ನೋಡುತ್ತಿದೆ. ದೆಹಲಿ ಜನರ ತೀರ್ಮಾನ ದೇಶದ ಪ್ರಗತಿಯ ಮೇಲೆ ಅವಲಂಬಿತವಾಗಿದೆ. ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಗೆ ಆಗಮಿಸಿದ್ದರು. ಆಗ ಅವರು ಇಷ್ಟು ದಿನಗಳ ಕಾಲ ವಿದೇಶದ ನಾಯಕರು ಮೊದಲು ದೆಹಲಿಗೆ ಬಂದು ನಂತರ, ದೇಶದ ಇತರ ಭಾಗಗಳಿಗೆ ಹೋಗುತ್ತಿದ್ದರು. ಆದರೆ ಈಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಆಗಮಿಸಿ ನಂತರ ದೇಶದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದ್ದರು ಎಂದರು.












Click it and Unblock the Notifications