Breaking: 5 ತಿಂಗಳ ಬಳಿಕ ಜಾಮೀನು ಪಡೆದ ಬಿಆರ್‌ಎಸ್ ನಾಯಕಿ ಕೆ. ಕವಿತಾ
ನವದೆಹಲಿ, ಆಗಸ್ಟ್ 27: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನವಾಗಿದ್ದ ಭಾರತ್ ರಾಷ್ಟ್ರ ಸಮಿತಿಯ ನಾಯಕಿ ಕೆ. ಕವಿತಾಗೆ ಜಾಮೀನು ಸಿಕ್ಕಿದೆ. ಜಾರಿ ನಿರ್ದೇಶನಾಲಯ ಅವರನ್ನು ಮಾರ್ಚ್ 15ರಂದು ಹೈದರಾಬಾದ್‌ನಲ್ಲಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದ ವಿರೋಧ ಪಕ್ಷಕ್ಕೆ ಸೇರಿದ 2ನೇ ಆರೋಪಿ ಕವಿತಾ ಆಗಿದ್ದಾರೆ. ಈ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ ತನಿಖೆಯನ್ನು ನಡೆಸುತ್ತಿದ್ದು, ತನಿಖೆ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದೆ.
ಸುಪ್ರೀಂಕೋರ್ಟ್ ಮಂಗಳವಾರ ಕೆ. ಕವಿತಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಮನೀಷ್ ಸಿಸೋಡಿಯಾ ಬಳಿಕ ಜಾಮೀನು ಪಡೆದ 2ನೇ ಆರೋಪಿ ಕೆ. ಕವಿತಾ ಆಗಿದ್ದಾರೆ. ಇದೇ ಪ್ರಕರಣದಲ್ಲಿ 2024ರ ಫೆಬ್ರವರಿಯಲ್ಲಿ ಬಂಧಿತರಾಗಿದ್ದ ಮನೀಷ್ ಸಿಸೋಡಿಯಾ ಈ ತಿಂಗಳು ಜಾಮೀನು ಪಡೆದು, ಜೈಲಿನಿಂದ ಬಿಡುಗಡೆಯಾಗಿದ್ದರು.

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ ಅವರನ್ನು ಹೈದರಾಬಾದ್ ನಿವಾಸದಿಂದ ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದ ಬಗ್ಗೆ ಆರೋಪಗಳಿವೆ. ಆದ್ದರಿಂದ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೊಂಡಿತ್ತು.
ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೆ. ಕವಿತಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಹಲವು ಆರೋಪಿಗಳನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಮಂಗಳವಾರ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಬಿಆರ್ ಗವಿ, ಕೆವಿ ವಿಶ್ವನಾಥನ್ ನೇತೃತ್ವದ ಪೀಠ ಕೆ. ಕವಿತಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕೆ. ಕವಿತಾ 5 ತಿಂಗಳ ಜೈಲು ವಾಸ ಅನುಭವಿಸಿದ್ದಾರೆ. ಈಗಾಗಲೇ ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಬಹುತೇಕ ಪೂರ್ಣಗೊಂಡಿದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಆದ್ದರಿಂದ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ.
ಕೆ. ಕವಿತಾ ಜಾಮೀನು ಅರ್ಜಿಯ ವಿಚಾರಣೆ ನಡೆಸುವಾಗ ಕೋರ್ಟ್ ಮಹಿಳಾ ಆರೋಪಿಗಳ ಅರ್ಜಿಯ ವಿಚಾರಣೆ ವೇಳೆ ವಿಶೇಷ ಗಮನ ಹರಿಸಬೇಕಾಗುತ್ತದೆ ಎಂದು ಹೇಳಿದ್ದು, ಜುಲೈನಲ್ಲಿ ಕೆ. ಕವಿತಾ ಜಾಮೀನು ಅರ್ಜಿ ತಿರಸ್ಕಾರ ಮಾಡಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ದೆಹಲಿ ಮದ್ಯ ನೀತಿ ಹಗರಣದಲ್ಲಿ 1,100 ಕೋಟಿ ರೂ. ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಜಾಮೀನು ಸಿಕ್ಕಿಲ್ಲ. ಅವರ ಜಾಮೀನು ಅರ್ಜಿ ವಜಾಗೊಂಡಿದ್ದು, ಲೋಕಸಭೆ ಚುನಾವಣೆ 2024ರ ಸಂದರ್ಭದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಲು ಮಾತ್ರ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲು ವಿಶೇಷ ಅವಕಾಶ ನೀಡಲಾಗಿತ್ತು.
ಸಿಬಿಐ ದೆಹಲಿ ಮದ್ಯ ನೀತಿ ಹಗರಣದ ತನಿಖೆ ಕೈಗೊಂಡಿತ್ತು. ಆಗ ಹಗರಣದಲ್ಲಿ ಕೆ. ಕವಿತಾ ಭಾಗಿಯಾಗಿರುವ ಕುರಿತು ಉಲ್ಲೇಖಿಸಿತ್ತು. ಅಲ್ಲದೇ ಅಕ್ರಮವಾಗಿ ಹಣವನ್ನು ಗೋವಾಕ್ಕೆ ಸಾಗಿಸಲಾದ ಆರೋಪವಿದೆ. ಆದ್ದರಿಂದ ಜಾರಿ ನಿರ್ದೇಶನಾಲಯ ತನಿಖೆಯನ್ನು ಕೈಗೊಂಡಿತ್ತು.












Click it and Unblock the Notifications