ಮಹಿಳೆಯೊಂದಿಗೆ ಸೆಕ್ಸ್ ಬಳಿಕ ಜಾತಕದ ನೆಪವೊಡ್ಡಿ ಮದುವೆಯಾಗದಿರುವುದು ಶಿಕ್ಷಾರ್ಹ ಅಪರಾಧ: ದೆಹಲಿ ಹೈಕೋರ್ಟ್ ಮಹತ್ವದ ಆದೇಶ
Delhi High Court: ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಬಳಿಕ ಜಾತಕ ಸೇರಿದಂತೆ ಹಲವು ನೆಪಗಳನ್ನೊಡ್ಡಿ ವಿವಾಹ ಮುರಿದುಕೊಂಡ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಅದರಲ್ಲೂ ಉತ್ತರ ಭಾರತದ ಭಾಗದಲ್ಲೇ ಇಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರೀತಿ ಮತ್ತು ಮದುವೆಯ ಭರವಸೆ ನೀಡಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ನಂತರ, ಜಾತಕ ಸೇರಿದಂತೆ ಹಲವು ವಿಚಾರಗಳಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ಮದುವೆಯಿಂದ ಹಿಂದೆ ಸರಿಯುವುದು ಇನ್ಮುಂದೆ ಕೇವಲ ನೈತಿಕ ತಪ್ಪಲ್ಲ, ಅದು ಶಿಕ್ಷಾರ್ಹ ಕ್ರಿಮಿನಲ್ ಅಪರಾಧ ಎಂದು ದೆಹಲಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 69ರ ಅಡಿಯಲ್ಲಿ ಇಂತಹ ಕೃತ್ಯಗಳು ವಂಚನೆಯಿಂದ ಕೂಡಿದ ಮದುವೆ ಭರವಸೆ ಎಂಬ ಗಂಭೀರ ಅಪರಾಧದ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ
ಮಹಿಳೆಯೊಬ್ಬರ ಜೊತೆ ದೈಹಿಕ ಸಂಬಂಧ ಬೆಳೆಸಿ, ನಂತರ ಜಾತಕ ಸರಿ ಇಲ್ಲ ಎನ್ನುವ ಕಾರಣ ನೀಡಿ ವಿವಾಹವಾಗಲು ನಿರಾಕರಿಸಿದ ವ್ಯಕ್ತಿಯೊಬ್ಬನ ಜಾಮೀನು ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರಿದ್ದ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ ಎಂದು ವರದಿಯಾಗಿದೆ.
ಸಂತ್ರಸ್ತ ಮಹಿಳೆ ಮೊದಲು 2025ರ ನವೆಂಬರ್‌ನಲ್ಲಿ ದೂರು ನೀಡಿದ್ದರು. ಆಗ ಮದುವೆ ಆಗುವುದಾಗಿ ಭರವಸೆ ನೀಡಿ ದೂರು ಹಿಂಪಡೆಯುವಂತೆ ಆರೋಪಿ ಹೇಳಿದ್ದ. ಬಳಿಕ ಮತ್ತೆ ಅದೇ ಆಡಿದ್ದೇ ಆಟ ಎಂಬಂತೆ ಜಾತಕದ ನೆಪವೊಡ್ಡಿದ್ದ. ಈ ಹಿನ್ನೆಲೆ ಜನವರಿ 2026 ರಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಬಿಎನ್‌ಎಸ್ ಸೆಕ್ಷನ್ 69ರ ಅಡಿಯಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಿಸಲಾಗಿತ್ತು.
ನ್ಯಾಯಾಲಯದ ಪ್ರಮುಖ ಅಂಶಗಳ ವಿವರ
* ಇದು ಕೇವಲ ಸಂಬಂಧ ಮುರಿದ ಪ್ರಕರಣವಲ್ಲ, ಆರೋಪಿಯ ಕುಟುಂಬಕ್ಕೆ ಜಾತಕ ಹೊಂದಾಣಿಕೆ ಮುಖ್ಯ ಎಂಬುದು ಆತನಿಗೆ ಮೊದಲೇ ತಿಳಿದಿತ್ತು. ಆದರೂ, ಆತ ಮಹಿಳೆಗೆ ವಿವಾಹದ ಸುಳ್ಳು ಭರವಸೆ ನೀಡುತ್ತಾ ಲೈಂಗಿಕವಾಗಿ ಬಳಸಿಕೊಂಡಿರುವುದು ವಂಚನೆಯಾಗಿದೆ ಎಂದು ಕೋರ್ಟ್ ಹೇಳಿದೆ.
* ಬಿಎನ್‌ಎಸ್ ಸೆಕ್ಷನ್ 69 ಅನ್ವಯ ಮದುವೆಯಾಗುವ ಪ್ರಾಮಾಣಿಕ ಉದ್ದೇಶವಿಲ್ಲದೆ, ಕೇವಲ ದೈಹಿಕ ಸುಖಕ್ಕಾಗಿ ಸುಳ್ಳು ಭರವಸೆ ನೀಡುವುದು ಈ ಸೆಕ್ಷನ್ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ.
* ಜಾತಕದ ಅಡೆತಡೆಗಳಿಲ್ಲ ಎಂದು ಪದೇ ಪದೇ ನಂಬಿಸಿ ಸಂಬಂಧ ಬೆಳೆಸುವುದು ಅತ್ಯಾಚಾರದಷ್ಟೇ ಗಂಭೀರವಾದ ವಂಚನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಲಯದ ಖಡಕ್ ಆದೇಶದಲ್ಲಿ ಏನಿದೆ?
"ಕೇವಲ ಪ್ರೇಮ ಸಂಬಂಧ ವಿಫಲವಾಯಿತು ಅಥವಾ ಮದುವೆ ನಡೆಯಲಿಲ್ಲ ಎಂಬ ಕಾರಣಕ್ಕೆ ಕ್ರಿಮಿನಲ್ ಕಾನೂನನ್ನು ಬಳಸಲಾಗದು. ಆದರೆ, ಇಲ್ಲಿ ಮದುವೆ ಆಗುವುದಾಗಿ ಭರವಸೆ ನೀಡಿ, ಬಳಿಕ ಜಾತಕದ ನೆಪ ಹೇಳಿರುವುದು ಆ ಭರವಸೆಯ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ," ಎಂದು ಹೇಳಿದ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.












Click it and Unblock the Notifications