CBSE ಮೌಲ್ಯಮಾಪನ ದೋಷ : ಕೇಂದ್ರ ಸರ್ಕಾರ ಮತ್ತು ಮಂಡಳಿಗೆ ದೆಹಲಿ ಹೈಕೋರ್ಟ್ ನೋಟಿಸ್

ನವದೆಹಲಿ: ಕೇಂದ್ರೀಯ ಫ್ರೌಡಶಿಕ್ಷಣ ಮಂಡಳಿಯು (ಸಿಬಿಎಸ್‌ಸಿ) ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 'ಆನ್-ಸ್ಕ್ರೀನ್ ಮಾರ್ಕಿಂಗ್' ವ್ಯವಸ್ಥೆಯನ್ನು ಬಳಸಿದ್ದರಿಂದ ಉಂಟಾಗಿರುವ ಗೊಂದಲಗಳು ಮತ್ತು ಅಂಕಗಳಲ್ಲಿನ ಲೋಪಗಳ ಕುರಿತು ದೆಹಲಿ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದು, ತುರ್ತಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಈ ಮಹತ್ವದ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಇದೇ ಜೂನ್ 12ಕ್ಕೆ ನಿಗದಿಪಡಿಸಿದೆ.

ಎನ್‌ಎಸ್‌ಯುಐ ಬೇಡಿಕೆಗಳೇನು?

ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ವಿದ್ಯಾರ್ಥಿಗಳ ಪರವಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಒಎಸ್‌ಎಂ ವಿಧಾನದಲ್ಲಿ ಸ್ಕ್ಯಾನ್ ಮಾಡಲಾದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಸರಿಯಾಗಿ ಓದಲು ಸಾಧ್ಯವಾಗದ ಸ್ಥಿತಿಯಲ್ಲಿವೆ ಮತ್ತು ಮೌಲ್ಯಮಾಪಕರು ಸರಿಯಾಗಿ ಅಂಕಗಳನ್ನು ನಮೂದಿಸಿಲ್ಲ ಎಂದು ಅರ್ಜಿಯಲ್ಲಿ ಗಂಭೀರವಾಗಿ ದೂರಲಾಗಿದೆ.

ಇಂತಹ ದೋಷಪೂರಿತ ಮೌಲ್ಯಮಾಪನದಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಎಲ್ಲಿ ಉತ್ತರ ಪತ್ರಿಕೆಗಳನ್ನು ಓದಲು ಸಾಧ್ಯವಾಗಿಲ್ಲವೋ ಅಲ್ಲಿ ವಿದ್ಯಾರ್ಥಿಗಳಿಗೆ 'ಪರಿಹಾರ ಅಂಕಗಳನ್ನು' ನೀಡುವಂತೆ ಸಿಬಿಎಸ್‌ಇಗೆ ನಿರ್ದೇಶನ ನೀಡಬೇಕೆಂದು ಎನ್‌ಎಸ್‌ಯುಐ ಒತ್ತಾಯಿಸಿದೆ. ಅಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರುಮೌಲ್ಯಮಾಪನ ಪೋರ್ಟಲ್ ಅನ್ನು ಮುಂದಿನ ಒಂದು ತಿಂಗಳ ಕಾಲ ಸಂಪೂರ್ಣವಾಗಿ ತೆರೆದಿಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

Delhi

ಮಂಡಳಿಯ ಸ್ಪಷ್ಟನೆ ಏನು?

ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಹಾಜರಾಗಿದ್ದ ಸಿಬಿಎಸ್‌ಇ ಪರ ವಕೀಲರು, ಮಂಡಳಿಯು ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸುತ್ತಿದೆ ಮತ್ತು ಬಗೆಹರಿಸಲು ಸಿದ್ಧವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಮೌಲ್ಯಮಾಪನದಲ್ಲಿ ತೊಂದರೆಗೀಡಾದ ಅಥವಾ ಅನ್ಯಾಯವಾಗಿದೆ ಎಂದು ಭಾವಿಸುವ ವಿದ್ಯಾರ್ಥಿಗಳು ನೇರವಾಗಿ ಕೇಂದ್ರೀಯ ಫ್ರೌಡಶಿಕ್ಷಣ ಮಂಡಳಿಗೆ ಪತ್ರ ಬರೆಯಬಹುದು ಎಂದು ಮಂಡಳಿ ಸ್ಪಷ್ಟನೆ ನೀಡಿದೆ.

ಆನ್-ಸ್ಟ್ರೀನ್ ಮಾರ್ಕಿಂಗ್ ಎಂದರೇನು?

ಸಿಬಿಎಸ್‌ಇ ಜಾರಿಗೆ ತಂದ ಈ ಆನ್-ಸ್ಟ್ರೀನ್ ಮಾರ್ಕಿಂಗ್ ಪದ್ಧತಿಯಲ್ಲಿ, ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಭೌತಿಕ ಉತ್ತರ ಪತ್ರಿಕೆಗಳನ್ನು ಮೊದಲು ಸ್ಕ್ಯಾನ್ ಮಾಡಿ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಬಳಿಕ ಮೌಲ್ಯಮಾಪಕರು ಕಂಪ್ಯೂಟರ್ ಪರದೆಯ ಮೇಲೆಯೇ ಆ ಉತ್ತರಗಳನ್ನು ಪರಿಶೀಲಿಸಿ ಅಂಕಗಳನ್ನು ನಮೂದಿಸುತ್ತಾರೆ. ನಂತರ ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಒಟ್ಟು ಅಂಕಗಳನ್ನು ಲೆಕ್ಕಾಚಾರ ಮಾಡುತ್ತದೆ. ಮೌಲ್ಯಮಾಪನದಲ್ಲಿ ಮಾನವ ಸಹಜ ತಪ್ಪುಗಳನ್ನು ತಡೆಯಲು, ಶಿಕ್ಷಕರ ಭೌತಿಕ ಶ್ರಮ ಕಡಿಮೆ ಮಾಡಲು ಹಾಗೂ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಇದನ್ನು ತರಲಾಗಿದೆ ಎನ್ನುವುದು ಮಂಡಳಿಯ ವಾದವಾಗಿತ್ತು.

ಕರ್ನಾಟಕದಲ್ಲಿ ಯಶಸ್ವಿಯಾದದ್ದು ಸಿಬಿಎಸ್‌ಇಯಲ್ಲಿ ಏಕಾಗಲಿಲ್ಲ?

ಇದೇ ವ್ಯವಸ್ಥೆಯನ್ನು ನಮ್ಮ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನದಲ್ಲಿ ಅತ್ಯಂತ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಯಾವುದೇ ದೊಡ್ಡ ತಾಂತ್ರಿಕ ದೋಷಗಳಿಲ್ಲದೆ ಒಎಸ್‌ಎಂ ಅನ್ನು ಜಾರಿಗೆ ತಂದು, ಶೀಘ್ರವಾಗಿ ಮತ್ತು ನಿಖರವಾಗಿ ಫಲಿತಾಂಶ ಪ್ರಕಟಿಸುತ್ತಾ ಬರುತ್ತಿದೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಪನ್ಮೂಲಗಳನ್ನು ಹೊಂದಿರುವ ರಾಷ್ಟ್ರೀಯ ಮಟ್ಟದ ಸಿಬಿಎಸ್‌ಇ ಮಂಡಳಿಯಲ್ಲಿ ಈ ವ್ಯವಸ್ಥೆ ಇಷ್ಟೊಂದು ಗೊಂದಲಗಳಿಗೆ ಕಾರಣವಾಗಿದ್ದು ಏಕೆ ಎಂಬ ಪ್ರಶ್ನೆ ಈಗ ಶಿಕ್ಷಣ ತಜ್ಞರನ್ನು ಕಾಡುತ್ತಿದೆ. ಶಿಸ್ತು ಬದ್ಧವಾಗಿದ್ದ ಸಿಬಿಎಸ್‌ಸಿಗೆ ಒಎಸ್‌ಎಮ್‌ ಮೌಲ್ಯಮಾಪನ ಕಾರಣದಿಂದ ಒಂದು ರೀತಿಯಲ್ಲಿ ಗ್ರಹಣ ಹಿಡಿದಂತಾಗಿದೆ.

ಸರಿಯಾಗಿ ಸ್ಕ್ಯಾನ್ ಆಗದ ಪ್ರತಿಗಳು, ತಾಂತ್ರಿಕ ನಿರ್ವಹಣೆಯ ಕೊರತೆ ಈ ಎಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗುತ್ತಿದ್ದು, ಮುಂದಿನ ವಿಚಾರಣೆಯಲ್ಲಿ ಹೈಕೋರ್ಟ್ ಯಾವ ನಿರ್ಧಾರ ಪ್ರಕಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+