Delhi flood: ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಯಮುನಾ ನದಿ- ರಾಷ್ಟ್ರ ರಾಜಧಾನಿಗೆ ಜಲಪ್ರಳಯದ ಭೀತಿ
ನವದೆಹಲಿ, ಜುಲೈ 12: ಕಳೆದ ಕೆಲ ದಿನಗಳಿಂದ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ನದಿಗಳೆಲ್ಲವೂ ಉಕ್ಕಿ ಹರಿಯುತ್ತಿವೆ. ಪ್ರವಾಹದ ಹೊಡೆತಕ್ಕೆ ರಸ್ತೆ ಸೇತುವೆಗಳು ಕೊಚ್ಚಿ ಹೋಗುತ್ತಿವೆ. ಯಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ರಾಷ್ಟ್ರ ರಾಜಧಾಣಿ ದೆಹಲಿಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಈಗ ಯಮುನಾ ನದಿಯ ನೀರಿನ ಮಟ್ಟವು 207.55 ಮೀಟರ್‌ಗೆ ತಲುಪಿದೆ. ಕಳೆದ ಕೆಲ ದಿನಗಳ ನಿರಂತರ ಮಳೆಯಿಂದಾಗಿ ನದಿಯು ಅಪಾಯದ ಹಂತ ಮೀರಿದೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ಇದು ಗರಿಷ್ಠ ಮಟ್ಟವನ್ನು ತಲುಪಿದೆ.

ಹಿಂದಿನ ದಾಖಲೆಯು ಪ್ರಕಾರ. 1978 ರಲ್ಲಿ ಯಮುನಾ ನದಿಯು 207.49 ಮೀಟರ್‌ಗೆ ತಲುಪಿತ್ತು. ರಾಷ್ಟ್ರ ರಾಜಧಾನಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದೆಹಲಿ ಪೊಲೀಸರು ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಪ್ರವಾಹ ಕುರಿತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಸಭೆಯನ್ನು ಕರೆದಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ನೀರಿನ ಮಟ್ಟ ವ್ಯಾಪಕವಾಗಿ ಏರುತ್ತಿದೆ. ಕೇಂದ್ರ ಜಲ ಆಯೋಗದ ಪ್ರಕಾರ, ಹಳೆಯ ರೈಲ್ವೆ ಸೇತುವೆಯ ನೀರಿನ ಮಟ್ಟವು 207 ಮೀಟರ್ ಗಡಿಯನ್ನು ದಾಟಿದೆ. ಮಧ್ಯಾಹ್ನ 1 ಗಂಟೆಗೆ 207.55 ಮೀಟರ್‌ಗೆ ಏರಿದೆ.
ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಮಧ್ಯರಾತ್ರಿ ವೇಳೆಗೆ ಯಮುನಾದಲ್ಲಿ ನೀರಿನ ಮಟ್ಟ 207.72 ಮೀಟರ್ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ದೆಹಲಿಯ ಲೋಕೋಪಯೋಗಿ ಸಚಿವೆ ಅತಿಶಿ ಹೇಳಿದ್ದಾರೆ.
'ನಾವು ನಿಯಮಿತವಾಗಿ ಯಮುನಾ ನದಿಯ ಬಳಿ ಇರುವ ಜನರನ್ನು ತೆರವು ಮಾಡುತ್ತಿದ್ದೇವೆ. ಉಕ್ಕಿ ಹರಿಯುತ್ತಿರುವ ತಡೆಯಲು ಹಲವಾರು ಒಡ್ಡುಗಳನ್ನು ಹಾಕಲಾಗಿದೆ' ಎಂದು ಅತಿಶಿ ಹೇಳಿದ್ದಾರೆ.
1978ರಲ್ಲಿ ಹತ್ನಿಕುಂಡ್ ಬ್ಯಾರೇಜ್ ಮೂಲಕ 7 ಲಕ್ಷ ಕ್ಯೂಸೆಕ್ ನೀರು ಬಿಟ್ಟಾಗ ದೆಹಲಿಯಲ್ಲಿ ಪ್ರವಾಹ ಉಂಟಾಗಿತ್ತು. ಹಳೆ ರೈಲ್ವೆ ಸೇತುವೆಯಲ್ಲಿ ಆಗ ಯಮುನಾ ನದಿಯ ಮಟ್ಟ 204.79 ಮೀಟರ್‌ಗಳಷ್ಟಿತ್ತು.
ಇತ್ತೀಚಿನ ವರ್ಷಗಳಲ್ಲಿ ಯಮುನಾ ನದಿಯು ಅಪಾಯದ ಮಟ್ಟವನ್ನು ಮೀರಿದ್ದರೂ ದೆಹಲಿಯಲ್ಲಿ ಯಾವುದೇ ಪ್ರವಾಹ ಉಂಟಾಗಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

2013ರಲ್ಲಿ ಹತ್ನಿಕುಂಡ್ ಬ್ಯಾರೇಜ್ ಮೂಲಕ 8 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಆಗ ಯಮುನಾ ನದಿಯ ನೀರಿನ ಮಟ್ಟವು 207.32 ಮೀಟರ್‌ಗೆ ಏರಿಕೆಯಾಗಿತ್ತು. 2019 ರಲ್ಲಿ, ಹತ್ನಿಕುಂಡ್ ಬ್ಯಾರೇಜ್‌ನಿಂದ 8.28 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿತ್ತು. ಯಮುನಾ ನದಿಯ ನೀರಿನ ಮಟ್ಟವು 206.6 ಮೀಟರ್ ತಲುಪಿತ್ತು.
ಯಮುನಾ ನದಿಯ ಮಟ್ಟ ಏರಿಕೆಯಾಗದಂತೆ ನೋಡಿಕೊಳ್ಳಲು ಹಾಗೂ ಪ್ರವಾಹವನ್ನು ತಡೆಯಲು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಕೋರಿದ್ದಾರೆ.
'ಕೇಂದ್ರ ಜಲ ಆಯೋಗವು ಯಮುನಾ ನದಿಯಲ್ಲಿ 207.72 ಮೀಟರ್ ನೀರಿನ ಮಟ್ಟವನ್ನು ಊಹಿಸಿದೆ. ಇದು ದೆಹಲಿಗೆ ಒಳ್ಳೆಯ ಸುದ್ದಿ ಅಲ್ಲ. ಕಳೆದ 2 ದಿನಗಳಿಂದ ದೆಹಲಿಯಲ್ಲಿ ಮಳೆಯಾಗುತ್ತಿಲ್ಲ, ಆದರೆ, ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ನೀರನ್ನು ಹರಿಬಿಡಲಾಗುತ್ತಿದೆ. ಹರಿಯಾಣ ಸರ್ಕಾರವು ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಯಮುನಾ ನದಿಯ ನೀರಿನ ಮಟ್ಟವು ಏರುತ್ತಿದೆ. ಕೇಂದ್ರವು ಮಧ್ಯಪ್ರವೇಶಿಸಿ ಯಮುನಾ ನದಿಯ ಮಟ್ಟವು ಹೆಚ್ಚಾಗದಂತೆ ನೋಡಿಕೊಳ್ಳಬೇಕು' ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ಯಮುನಾ ನದಿ ಬಳಿ ಇರುವ ಹಲವು ಪ್ರದೇಶಗಳು ಈಗಾಗಲೇ ಜಲಾವೃತವಾಗಿವೆ. ತಗ್ಗು ಪ್ರದೇಶಗಳಾದ ಯಮುನಾ ಬಜಾರ್, ವಿಜಯ್ ಘಾಟ್, ಟಿಬೆಟ್ ಮಾರುಕಟ್ಟೆ, ಮೆಟ್ಕಾಫ್ ಹೌಸ್, ಮೊನಾಸ್ಟರಿ ಮಾರ್ಕೆಟ್ ಇತ್ಯಾದಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.












Click it and Unblock the Notifications