ಎಎಪಿ ಅಭ್ಯರ್ಥಿ & ದೆಹಲಿ ಸಿಎಂ ಆತಿಶಿ ಸಿಂಗ್‌ಗೆ ಭರ್ಜರಿ ಗೆಲುವು
Delhi Election Resulsts 2025: ರಾಷ್ಟ್ರ ರಾಜಧಾನಿ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಮತದಾನ ನಡೆದಿತ್ತು. ಇಂದು (ಫೆಬ್ರವರಿ 08) ಮತ ಎಣಿಕೆ ನಡೆಯುತ್ತಿದ್ದು, ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿ ಅಭ್ಯರ್ಥಿ ಹಾಗೂ ದೆಹಲಿ ಸಿಎಂ ಆತಿಶಿ ಮರ್ಲೆನಾ ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಆರಂಭದಲ್ಲಿ ಅಂದರೆ 10ನೇ ಸುತ್ತಿನ ಮತ ಎಣಿಕೆವರೆಗೆ ಭಾರೀ ಹಿನ್ನಡೆಯಲ್ಲಿದ್ದ ಇದೀಗ ದೆಹಲಿ ಸಿಎಂ ಆತಿಶಿ ಅವರು ಭಾರೀ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 3,500 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತ ತಲುಪಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ದೆಹಲಿಯ ಸಿಎಂ ಹಾಗೂ ಕಲ್ಕಾಜಿ ಕ್ಷೇತ್ರ ಎಎಪಿ ಅಭ್ಯರ್ಥಿ ಅತಿಶಿ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಅತಿಶಿ ಸ್ಪರ್ಧಿಸಿದ್ದ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 32 ವರ್ಷಗಳಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಆಗಿರಲಿಲ್ಲ. ಆದ್ದರಿಂದ ಈ ಕ್ಷೇತ್ರದ ಕಡೆಗೆ ಬಿಜೆಪಿ ಹೈಕಮಾಂಡ್ ಹೆಚ್ಚು ಗಮನ ಹರಿಸಿತ್ತು. ಕಲ್ಕಾಜಿ 2025ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಮತ್ತು ಕುತೂಹಲ ಕೆರಳಿಸಿದ್ದ ಸ್ಥಾನಗಳಲ್ಲಿ ಒಂದಾಗಿತ್ತು. 1993ರ ಬಳಿಕ ಕಲ್ಕಾಜಿ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದರು. ನಂತರ 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಅವರು ಅಚ್ಚರಿಯ ನಿರ್ಧಾರ ತೆಗೆದುಕೊಂಡು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ 2024ರ ಸೆಪ್ಟೆಂಬರ್ 21ರಂದು ಅತಿಶಿ ದೆಹಲಿಯ ಸಿಎಂ ಅಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರು ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಬಳಿಕ ದೆಹಲಿಯ 3ನೇ ಮಹಿಳಾ ಸಿಎಂ ಅಗಿದ್ದಾರೆ.
ಈ ವಿಧಾನಸಭಾ ಚುನಾವಣೆಯವರೆಗೆ ಮಾತ್ರ ನಾನು ಸಿಎಂ ಆಗಿರುತ್ತೇನೆ ಎಂದು ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲೇ ಅತಿಶಿ ಘೋಷಣೆ ಮಾಡಿದ್ದರು. ಆದ್ದರಿಂದ ಆಮ್ ಆದ್ಮಿ ಪಕ್ಷದಿಂದ ಅರವಿಂದ್ ಕೇಜ್ರಿವಾಲ್ ಅವರೇ ಈ ಬಾರಿಯ ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದರು. ಇದೀಗ ಪ್ರಸ್ತುತ ಸಿಎಂ ಅತಿಶಿ ಮರ್ಲೇನಾ ಸಿಂಗ್ ಅವರು ಭಾರೀ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಜಯಗಳಿಸಿದ್ದಾರೆ.
ಅತಿಶಿ ಕಳೆದ 2020ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅದಕ್ಕೂ ಮುಂಚೆ ಎಎಪಿ ಅಭ್ಯರ್ಥಿ ಅವತಾರ್ ಸಿಂಗ್ ಈ ಕ್ಷೇತ್ರವನ್ನು ಗೆದ್ದಿದ್ದರು. 2013ರಲ್ಲಿ ಹರ್ಮೀತ್ ಸಿಂಗ್ ಕಲ್ಕಾ ಶಿರೋಮಣಿ ಅಕಾಲಿ ದಳದಿಂದ ಗೆದ್ದಿದ್ದರು. 1998ರಿಂದ 2008ರವರೆಗೆ ಈ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ಚೋಪ್ರಾ ತಮ್ಮದಾಗಿಸಿಕೊಂಡಿದ್ದರು.












Click it and Unblock the Notifications