Missed Call ಕೊಟ್ಟು 50 ಲಕ್ಷ ರೂ. ದೋಚಿದ ಖದೀಮರು!
ನವದೆಹಲಿ, ಡಿಸೆಂಬರ್ 12: ಜಾರ್ಖಂಡ್‌ನ ಬುಡಕಟ್ಟು ಜಿಲ್ಲೆ ಜಮ್ತಾರಾ, ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ 18 ವರ್ಷಗಳ ಕಾಲ ದುಡಿದಿದ್ದು, ಇದೀಗ ಸೈಬರ್‌ಕ್ರೈಮ್‌ನ ಕುಖ್ಯಾತ ಕೇಂದ್ರವಾಗಿ ಸುದ್ದಿ ಆಗುತ್ತಿದೆ.
ಈ ಬಾರಿ ಭದ್ರತಾ ಸೇವಾ ಸಂಸ್ಥೆಯೊಂದರ ನಿರ್ದೇಶಕರ ಬ್ಯಾಂಕ್ ಖಾತೆಯಿಂದ ವಂಚನೆಯ ಖದೀಮರ ಗುಂಪೊಂದು ಬರೋಬ್ಬರಿ 50 ಲಕ್ಷ ರೂಪಾಯಿ ಮಕ್ಮಲ್ ಟೋಪಿ ಹಾಕುವಲ್ಲಿ ಯಶಸ್ವಿಯಾಗಿದೆ. ಸೈಬರ್ ಕಳ್ಳರು ಒನ್ ಟೈಮ್ ಪಾಸ್‌ವರ್ಡ್ (OTP) ಕೇಳದೆಯೇ ಜಸ್ಟ್ ಮಿಸ್ ಕಾಲ್ ಮೂಲಕ ಹಣ ಎಗರಿಸಿರುವುದು ಪತ್ತೆಯಾಗಿದೆ. ಪದೇ ಪದೇ ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟು 50 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಈ ವಂಚನೆಯ ಮಾಸ್ಟರ್‌ಮೈಂಡ್‌ಗಳು ಜಾರ್ಖಂಡ್‌ನ ಜಮ್ತಾರಾ ಪ್ರದೇಶದಲ್ಲಿ ನೆಲೆಸಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ. ಮಿಸ್ ಕಾಲ್ ಮೂಲಕ ವಂಚಕರು 50 ಲಕ್ಷ ರೂಪಾಯಿ ಎಗರಿಸಿದ್ದು ಹೇಗೆ? ಸೈಬರ್ ಕಳ್ಳರ ಆ ಸ್ಕೆಚ್ ಹೇಗಿತ್ತು? ಸೈಬರ್ ಕ್ರೈಂ ಬಗ್ಗೆ ಸಾರ್ವಜನಿಕರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

50 ಲಕ್ಷ ರೂಪಾಯಿ ಹಣವನ್ನು ಕದ್ದಿದ್ದು ಹೇಗೆ?
* ಕಳೆದ ಅಕ್ಟೋಬರ್ 10 ರಂದು ಈ ಘಟನೆ ನಡೆದಿದೆ.
* ಭದ್ರತಾ ಸೇವೆಗಳ ಸಂಸ್ಥೆಯ ನಿರ್ದೇಶಕರು ರಾತ್ರಿ 7 ರಿಂದ 8:44 ರ ನಡುವೆ ಮೇಲಿಂದ ಮೇಲೆ ಮಿಸ್ಡ್ ಕಾಲ್‌ಗಳನ್ನು ಸ್ವೀಕರಿಸಿದ್ದಾರೆ.
* ಅವರು ಕೆಲವು ಕರೆಗಳಿಗೆ ಪ್ರತಿಕ್ರಿಯಿಸಿದ್ದು, ಇತರ ಕೆಲವು ಕರೆಗಳನ್ನು ನಿರ್ಲಕ್ಷಿಸಿದರು.
* ಸುಮಾರು 50 ಲಕ್ಷ ಮೌಲ್ಯದ ಆರ್‌ಟಿಜಿಎಸ್ ವಹಿವಾಟಿನ ಸಂದೇಶಗಳನ್ನು ಪರಿಶೀಲಿಸಲು ಅವರು ತಮ್ಮ ಫೋನ್ ಪರಿಶೀಲಿಸಿದರು.
* ಈ ವಹಿವಾಟುಗಳ ಕುರಿತು ತಿಳಿಸುವ ಸಂದೇಶಗಳು ಬ್ಯಾಂಕ್‌ನಿಂದ ಬಂದಿರುವುದನ್ನು ಪತ್ತೆ ಮಾಡಿದರು.
* 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಹಲವಾರು RTGS ವಹಿವಾಟುಗಳನ್ನು ವಂಚಕರು ವ್ಯಕ್ತಿಗೆ ಸಂಬಂಧಿಸಿದ ಕಂಪನಿಯ ಚಾಲ್ತಿ ಖಾತೆಯಿಂದ ನಡೆಸಿದ್ದಾರೆ.

ಸೈಬರ್ ಅಪರಾಧದ ಕುರಿತು ಪೊಲೀಸರ ಶಂಕೆಯೇನು?
* ಈ ವಂಚನೆಯಲ್ಲಿ ವಂಚಕರು 'ಸಿಮ್ ಸ್ವಾಪ್' ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
* ಆ ಮೂಲಕ ವಂಚಕರು RTGS ವರ್ಗಾವಣೆಯನ್ನು ಪ್ರಾರಂಭಿಸಿರಬಹುದು ಮತ್ತು ಫೋನ್ ಮೂಲಕ OTP ಅನ್ನು ಸಕ್ರಿಯಗೊಳಿಸಿರಬಹುದು.
* ಸಮಾನಾಂತರ ಕರೆ ಮೂಲಕ ಐವಿಆರ್ ಮೂಲಕ ಒಟಿಪಿ ನಮೂದಿಸುವುದನ್ನು ಅವರು ಕೇಳಿಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಿಮ್ ಸ್ವಾಪ್ ಹೇಗೆ ನಡೆಸುತ್ತಾರೆ?
* ವಂಚಕರು ಗ್ರಾಹಕರ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ (ಸಿಮ್) ಕಾರ್ಡ್‌ಗೆ ಪ್ರವೇಶ ಪಡೆಯುವ ಮೂಲಕ ಅಥವಾ ಗ್ರಾಹಕರ ಬ್ಯಾಂಕ್ ಖಾತೆಗೆ ಸಂಪರ್ಕಗೊಂಡಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಕಲಿ ಸಿಮ್ ಕಾರ್ಡ್ (ಎಲೆಕ್ಟ್ರಾನಿಕ್-ಸಿಮ್ ಸೇರಿದಂತೆ) ಪಡೆಯಬಹುದು.
* ಇಲ್ಲಿ ವಂಚಕರು ಅನಧಿಕೃತ ವಹಿವಾಟು ನಡೆಸಲು ಇಂತಹ ನಕಲಿ ಸಿಮ್‌ನಲ್ಲಿ ಪಡೆದ OTP ಅನ್ನು ಬಳಸುತ್ತಾರೆ.
* ವಂಚಕರು ಸಾಮಾನ್ಯವಾಗಿ ಟೆಲಿಫೋನ್/ಮೊಬೈಲ್ ನೆಟ್‌ವರ್ಕ್ ಸಿಬ್ಬಂದಿಯಂತೆ ನಟಿಸುವ ಮೂಲಕ ಗ್ರಾಹಕರಿಂದ ವೈಯಕ್ತಿಕ/ಗುರುತಿನ ವಿವರಗಳನ್ನು ಸಂಗ್ರಹಿಸುತ್ತಾರೆ.
* ಆಫರ್‌ಗಳ ಹೆಸರಿನಲ್ಲಿ ಗ್ರಾಹಕರ ವಿವರಗಳನ್ನು ಪಡೆದುಕೊಳ್ಳುತ್ತಾರೆ, 3G ಯಿಂದ 4G ಗೆ ಸಿಮ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಗ್ರೇಡ್ ಮಾಡಲು ಅಥವಾ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಲು SIM ಕಾರ್ಡ್ ಅನ್ನು ಪಡೆದಿರುತ್ತಾರೆ.

ಸಾರ್ವಜನಿಕರ ಮುನ್ನೆಚ್ಚರಿಕೆ ಹೇಗಿರಬೇಕು?
* ನಿಮ್ಮ ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಗುರುತಿನ ಚೀಟಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.
* ನಿಮ್ಮ ಫೋನ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಪ್ರವೇಶದ ಬಗ್ಗೆ ಜಾಗರೂಕರಾಗಿರಿ.
* ನಿಯಮಿತ ಪರಿಸರದಲ್ಲಿ ಸಾಕಷ್ಟು ಸಮಯದವರೆಗೆ ನಿಮ್ಮ ಫೋನ್‌ನಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಗೆ ಯಾವುದೇ ನಕಲಿ ಸಿಮ್ ನೀಡಲಾಗುತ್ತಿಲ್ಲ / ನೀಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಕ್ಷಣವೇ ಮೊಬೈಲ್ ಆಪರೇಟರ್ ಅನ್ನು ಸಂಪರ್ಕಿಸಿ.












Click it and Unblock the Notifications