Delhi Manoj Tomar: ನಮಾಜ್ ಮಾಡುವವರಿಗೆ ಒದ್ದ ಪೊಲೀಸ್ ಅಮಾನತು: Video
ನವದೆಹಲಿ, ಮಾರ್ಚ್ 09: ರಾಷ್ಟ್ರ ರಾಜಧಾನಿ ದೆಹಲಿಯ ಇಂದರ್‌ಲೋಕ್ ಪ್ರದೇಶದಲ್ಲಿ ಜನನಿಬಿಡ ರಸ್ತೆಯ ಪಕ್ಕದಲ್ಲೇ ಮುಸ್ಲಿಮರ ಗುಂಪು ನಮಾಜ್ ಮಾಡುತ್ತಿತ್ತು. ಈ ಮುಸ್ಲಿಂ ಪುರುಷರನ್ನು ಪೊಲೀಸ್ ಅಧಿಕಾರಿಯೊಬ್ಬರು ಒದ್ದ ವಿಡಿಯೋ ಶನಿವಾರ ವೈರಲ್ ಆದ ಬೆನ್ನಲ್ಲೆ ಆ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಮಾಜ್ ಮಾಡುತ್ತಿದ್ದವರನ್ನು ಪೊಲೀಸ್ ಒದ್ದ ವಿಡಿಯೋ ಹರಿದಾಡುತಿದ್ದಂತೆ ಜನಾಕ್ರೋಶ ವ್ಯಕ್ತವಾಗಿದೆ. ನಮಾಜ್ ಮಾಡಿದ ಪ್ರದೇಶದಲ್ಲಿ ಪೊಲೀಸ್ ಉಸ್ತುವಾರಿಯಾಗಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮನೋಜ್ ತೋಮರ್ ಕಾರ್ಯ ನಿರ್ವಹಿಸುತ್ತಿದ್ದರು.

ಒದ್ದಿರುವುದು ವಿಡಿಯೋದಲ್ಲಿ ಸೆರೆ: ವೈರಲ್
ಮಸೀದಿಯು ಅದರ ಸಾಮರ್ಥ್ಯಕ್ಕೆ ತಕ್ಕಂತೆ ತುಂಬಿದ್ದರಿಂದ ಪುರುಷರು ರಸ್ತೆಯ ಮೇಲೆ ನಮಾಜ್ ಮಾಡಿದರು ಎನ್ನಲಾಗಿದೆ. ಈ ವೇಳೆ ರಸ್ತೆ ಪಕ್ಕ ಇಬ್ಬರು ವ್ಯಕ್ತಿಗಳು ನಮಾಜ್ ಮಾಡುವಾಗ ಅಲ್ಲಿಗೆ ಬಂದ ಪೊಲೀಸ್ ಮನೋಜ್ ತೋಮರ್ ಒದೆಯುವುದು ವಿಡಿಯೋದಲ್ಲಿ ರೇಕಾರ್ಡ್ ಆಗಿದೆ. ಈ ವೇಳೆ ಪೋಲೀಸರ ಜೊತೆ ಮಾತನಾಡಲು ಪ್ರಯತ್ನಿಸಿದ ಇತರ ಪುರುಷರನ್ನು ದೂಡಲಾಗಿದೆ.
ಸದ್ಯ ಮನೋಜ್ ತೋಮರ್ ವಿರುದ್ಧ ದೆಹಲಿ ಪೊಲೀಸ್ ಇಲಾಖೆ ಶಿಸ್ತು ಕ್ರಮ ಜರುಗಿಸಿದ್ದು, ಮನೋಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಈ ಕುರಿತು ಖುದ್ದು ಉಪ ಪೊಲೀಸ್ ಆಯುಕ್ತ (ಉತ್ತರ) ಮನೋಜ್ ಮೀನಾ ಮಾಹಿತಿ ಪ್ರಕಟಿಸಿದ್ದಾರೆ.
ನಮಾಜ್ ಸ್ಥಳದಲ್ಲಿ ಪರಿಸ್ಥಿತಿ ಹತೋಟಿ
ಘಟನೆ ಬಳಿಕ ಆ ಪ್ರದೇಶದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಸ್ಥಳೀಯರೊಂದಿಗೆ ಮಾತನಾಡಿದ್ದು, ಮಸೀದಿ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಪೊಲೀಸರಿಗೆ ಸಹಕರಿಸುವಂತೆ ಕೋರಿದ್ದಾರೆ ಎಂದರು.

ಪೊಲೀಸರು ನಮಾಜ್‌ಗೆ ಅಡ್ಡಿ ಪಡಿಸಿದ ಬಳಿಕ ಅಲ್ಲಿಯೇ ಇದ್ದ ಕೆಲವರು ತಕ್ಷಣವೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಅವರಲ್ಲಿ ಕೆಲವರು ಪ್ರತಿಭಟನೆ ನಡೆಸಲು ಇಂದರ್‌ಲೋಕ್ ಮೆಟ್ರೋ ನಿಲ್ದಾಣದ ಕಡೆಗೆ ತೆರಳಿದರು. ಘಟನೆ ಬಳಿಕ ಡಿಸಿಪಿ (ಈಶಾನ್ಯ) ದೆಹಲಿ ಜಾಯ್ ಟಿರ್ಕಿ ಜನರು ಕೋಮು ಸೌಹಾರ್ದತೆಯನ್ನು ಕಾಪಾಡುವಂತೆ ಒತ್ತಾಯಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಿದರು. ಅಲ್ಲದೇ ಭದ್ರತೆ ಹೆಚ್ಚಿಸುವಂತೆ ಸಲಹೆ ನೀಡಿದರು.
ಐ ಸ್ಟ್ಯಾಂಡ್ ವಿತ್ ಮನೋಜ್ ತೂಮರ್
ಒಂದು ಕಡೆ ಪೊಲೀಸ್ ಒದಿದ್ದಾರೆ ಎಂದು ಅವರನ್ನು ಅಮಾನತು ಮಾಡಲಾಗಿದೆ. ಮತ್ತೊಂದೆಡೆ ಮನೋಜ್ ತೋಮರ್ ಅವರ ಪರ ಅಭಿಯಾನವೇ ಆರಂಭಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ಟ್ಯಾಗ್ ಹಾಕಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. #IStandWithManojTomar ಎಂಬ ಹ್ಯಾಷ್‌ಟ್ಯಾಗ್ ಎಕ್ಸ್‌ನಲ್ಲಿ ಟ್ರೆಂಡಿಂಗ್ ಮಾಡಲಾಗಿದೆ.












Click it and Unblock the Notifications