Delhi Assembly Election 2025: ಅರವಿಂದ್ ಕೇಜ್ರಿವಾಲ್ ವಿರುದ್ಧ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ
ನವದೆಹಲಿ, ಜನವರಿ 20: ದೆಹಲಿ ವಿಧಾನಸಭೆ ಚುನಾವಣೆ 2025ರ ಕಣ ಕುತೂಹಲ ಮೂಡಿಸಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.
ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 70 ಕ್ಷೇತ್ರಗಳಿಗೆ 719 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಯೋಗ ಒಟ್ಟು 1040 ನಾಮಪತ್ರಗಳನ್ನು ಸ್ವೀಕಾರ ಮಾಡಿತ್ತು.

ಕೇಜ್ರಿವಾಲ್ ವಿರುದ್ಧ ಹೆಚ್ಚು ಅಭ್ಯರ್ಥಿಗಳು: ಎಎಪಿ ಮುಖ್ಯಸ್ಥ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್ ಸ್ಪರ್ಧೆ ಮಾಡುತ್ತಿದ್ದು, ಅವರ ವಿರುದ್ಧ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಅಚ್ಚರಿ ಎಂಬಂತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಅರವಿಂದ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಲ್ಲಿ ಎದುರಾಳಿಗಳು. ಬಿಜೆಪಿಯಿಂದ ಪರ್ವೇಶ್ ವರ್ಮಾ ಅಭ್ಯರ್ಥಿ ಇವರು ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಪುತ್ರ. ಕಾಂಗ್ರೆಸ್‌ನಿಂದ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ಅಭ್ಯರ್ಥಿ.
ಅತಿ ಕಡಿಮೆ ನಾಮಪತ್ರಗಳು (5) ಪಟೇಲ್ ನಗರ, ಕಸ್ತೂರ್ ಬಾ ನಗರದಲ್ಲಿ ಸಲ್ಲಿಕೆಯಾಗಿವೆ. ಕಸ್ತೂರ್ ಬಾ ನಗರ ಕ್ಷೇತ್ರದಲ್ಲಿ 6 ಅಭ್ಯರ್ಥಿಗಳು 9 ನಾಮಪತ್ರ ಸಲ್ಲಿಸಿದ್ದರು. 5 ನಾಮಪತ್ರ ಸ್ವೀಕಾರವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ನೀರಜ್ ಬಸೋಯಾ, ಎಎಪಿಯಿಂದ ರಮೇಶ್ ಪಹಲ್ವಾನ್ ಮತ್ತು ಕಾಂಗ್ರೆಸ್‌ನಿಂದ ಅಭಿಷೇಕ್ ದತ್ ಕಣದಲ್ಲಿದ್ದಾರೆ.
2025ರ ದೆಹಲಿ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. 2015, 2020ರಲ್ಲಿ ಸ್ಪಷ್ಟ ಬಹುಮತ ಪಡೆದು ಗೆದ್ದಿರುವ ಆಮ್ ಆದ್ಮಿ ಪಕ್ಷ ಈ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿದೆ. ಎಎಪಿಗೆ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳು.
15 ವರ್ಷಗಳ ಕಾಲ ದೆಹಲಿಯನ್ನು ಆಳಿದ್ದ ಕಾಂಗ್ರೆಸ್ ಪಕ್ಷ ಕಳೆದ ಎರಡು ಚುನಾವಣೆಗಳಲ್ಲಿ ಹಿನ್ನಡೆ ಕಂಡಿದೆ. 2020ರಲ್ಲಿ ರಾಜ್ಯದಲ್ಲಿ ಒಂದು ಸೀಟನ್ನು ಸಹ ಗೆಲ್ಲಲು ಪಕ್ಷ ವಿಫಲವಾಗಿತ್ತು. ಕಳೆದ ಚುನಾವಣೆಯಲ್ಲಿ ಎಎಪಿ 62, ಬಿಜೆಪಿ 8 ಸೀಟುಗಳಲ್ಲಿ ಜಯಗಳಿಸಿತ್ತು.
2024ರ ಲೋಕಸಭೆ ಚುನಾವಣೆಗೆ ಎಎಪಿ, ಕಾಂಗ್ರೆಸ್ 'ಇಂಡಿಯಾ' ಮೈತ್ರಿಕೂಟದಲ್ಲಿದ್ದವು. ಆದರೆ ದೆಹಲಿ ವಿಧಾನಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಏಕಾಂಗಿಯಾಗಿ ಎದುರಿಸುತ್ತಿವೆ. ಬಿಜೆಪಿ ಸಹ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ.
ಬಿಜೆಪಿ, ಕಾಂಗ್ರೆಸ್ ಪ್ರಕಾರ ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳು, ಅರವಿಂದ ಕೇಜ್ರಿವಾಲ್, ಮನೀಸ್ ಸಿಸೋಡಿಯಾ ಜೈಲುವಾಸ, ಮುಖ್ಯಮಂತ್ರಿ ಬದಲಾವಣೆ ಹಿನ್ನಲೆಯಲ್ಲಿ ಎಎಪಿ ಈ ಬಾರಿ ಚುನಾವಣೆಯಲ್ಲಿ ಹಲವು ಸವಾಲು ಎದುರಿಸುತ್ತಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿರುವ ಬಿಜೆಪಿ, ಅತಿ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರವನ್ನು ಪಡೆಯುವ ಉತ್ಸಾಹದಲ್ಲಿದೆ. ಎಎಪಿ ಅಧಿಕಾರಕ್ಕೆ ಬಂದರೆ ಮತ್ತೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಎಂದು ಈಗಾಗಲೇ ಘೋಷಣೆ ಮಾಡಿದೆ.












Click it and Unblock the Notifications