Delhi Election 2025 Result: ಕೇಜ್ರಿವಾಲ್ 4ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ
ನವದೆಹಲಿ, ಫೆಬ್ರವರಿ 08: ದೆಹಲಿ ವಿಧಾನಸಭೆ ಚುನಾವಣೆ 2025ರ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. 699 ಅಭ್ಯರ್ಥಿಗಳು ಕಣದಲ್ಲಿದ್ದು, 8.30ಕ್ಕೆ ಮತ ಎಣಿಕೆ ಆರಂಭವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದ ಆಡಳಿತ ಪಕ್ಷ ಎಎಪಿ.
ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭಕ್ಕೂ ಮೊದಲು ಮುಖ್ಯಮಂತ್ರಿ ಅತಿಶಿ ಮರ್ಲೆನಾ ಮಾತನಾಡಿದ್ದು, "ಎಎಪಿ ರಾಜ್ಯದಲ್ಲಿಅಧಿಕಾರ ಉಳಿಸಿಕೊಳ್ಳಲಿದೆ. ಅರವಿಂದ ಕೇಜ್ರಿವಾಲ್ 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಳಗ್ಗೆ 19 ಎಣಿಕಾ ಕೇಂದ್ರದಲ್ಲಿ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬಳಿಕ 8.30ರಿಂದ ಇವಿಎಂ ಮತಗಳ ಎಣಿಕಾ ಕಾರ್ಯ ಆರಂಭವಾಗಲಿದೆ. 11 ಗಂಟೆಯ ವೇಳೆಗೆ ಯಾವ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲಿದೆ? ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.
"ಇದು ಸಾಮಾನ್ಯವಾದ ಚುನಾವಣೆಯಲ್ಲ. ಈ ಬಾರಿ ಒಳ್ಳೆಯದು ಮತ್ತು ಕೆಟ್ಟದರ ನಡುವೆ ಹೋರಾಟ ನಡೆದಿದೆ. ನನಗೆ ಭರವಸೆ ಇದೆ ದೆಹಲಿಯ ಜನರು ಒಳ್ಳೆಯದಕ್ಕೆ ಬೆಂಬಲ ನೀಡಲಿದ್ದಾರೆ" ಎಂದು ಅತಿಶಿ ಮರ್ಲೆನಾ ಭರವಸೆ ವ್ಯಕ್ತಪಡಿಸಿದ್ದಾರೆ.
"ಎಎಪಿ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಜನರು ಬೆಂಬಲ ನೀಡಲಿದ್ದಾರೆ. ಅರವಿಂದ ಕೇಜ್ರಿವಾಲ್ 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಅತಿಶಿ ಮರ್ಲೆನಾ ಹೇಳಿದರು.
2020ರಲ್ಲಿ ಪಕ್ಷ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದರು. ಆದರೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅವರನ್ನು ಸಿಬಿಐ ಬಂಧಿಸಿತ್ತು. ಜೈಲಿಗೆ ಹೋದರೂ ಸಹ ಅವರು ಮುಖ್ಯಮಂತ್ರಿಯಾಗಿಯೇ ಮುಂದುವರೆದಿದ್ದರು. ಸುಪ್ರೀಂಕೋರ್ಟ್ ಜಾಮೀನು ನೀಡಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ಅತಿಶಿ ಮರ್ಲೆನಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಮತ ಎಣಿಕೆ ಆರಂಭವಾಗಿದ್ದು ಬಿಜೆಪಿ 16, ಎಎಪಿ 14 ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ರಾಜ್ಯದಲ್ಲಿ ಅಧಿಕಾರವನ್ನು ಪಡೆಯಲಿದೆ ಎಂದು ಅಂದಾಜಿಸಿವೆ. ಆದ್ದರಿಂದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಕಾಂಗ್ರೆಸ್ ಚುನಾವಣೆಯ ಪ್ರಚಾರದಲ್ಲಿಯೇ ಮಂಕಾಗಿತ್ತು. ಆದ್ದರಿಂದ ಈ ಬಾರಿ 0-1 ಸೀಟು ಗೆಲ್ಲಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು.
2013, 2015 ಮತ್ತು 2020ರ ಚುನಾವಣೆಯಲ್ಲಿ ಎಎಪಿ ರಾಜ್ಯದಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡಿತ್ತು. ಈ ಬಾರಿಯೂ ಎಎಪಿ ಸರ್ಕಾರ ರಚನೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಪಕ್ಷದ ನಾಯಕರು ಇದ್ದಾರೆ. ಆದರೆ ಆಡಳಿತ ವಿರೋಧಿ ಅಲೆ ಇದ್ದು, ಎಎಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.












Click it and Unblock the Notifications