Delhi AQI: ಸತ್ತು ಬದುಕುತ್ತಿರುವ ದೆಹಲಿ, ವಾಯು ಮಾಲಿನ್ಯ ಭೀಕರ...
ದೆಹಲಿ ವಾಯು ಮಾಲಿನ್ಯ ಮಟ್ಟ ಮತ್ತಷ್ಟು ಹದಗೆಟ್ಟು ಹೋಗಿದೆ, ರಾಷ್ಟ್ರ ರಾಜಧಾನಿಯಲ್ಲಿನ ಈ ಪರಿಸ್ಥಿತಿ ಭೀಕರವಾಗುತ್ತಿದ್ದು ಜನರು ಉಸಿರಾಡುವುದೇ ದುಸ್ತರವಾಗಿದೆ. ಅದರಲ್ಲೂ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಗಾಳಿ ಗುಣಮಟ್ಟ ಹಾಳಾಗಿರುವ ಕಾರಣ ಜನರು ಹೊರಗೆ ಬರುವುದಕ್ಕೂ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಏರ್ ಕ್ವಾಲಿಟಿ 400 ಮೀರಿದ್ದು, ಹಲವು ಪ್ರದೇಶಗಳಲ್ಲಿ ಜನರಿಗೆ ನೂರಾರು ಸಮಸ್ಯೆ ಎದುರಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಈಗ ಮಾಲಿನ್ಯದ ಆಟ ಜೋರಾಗಿದೆ. ಮತ್ತೊಂದು ಕಡೆ ಸಾವಿರಾರು ಜನರು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ ಈಗ ಮತ್ತೊಮ್ಮೆ ವಿಷ ಗಾಳಿಯ ಸುಳಿಯಲ್ಲಿ ಸಿಲುಕಿ ನರಳಿ ಹೋಗ್ತಿದೆ. ಅಂದಹಾಗೆ ಶನಿವಾರ ದೆಹಲಿ ನಗರದ ಗಾಳಿ ಗುಣಮಟ್ಟ ಮತ್ತಷ್ಟು ಹಾಳಾಗಿ ಹೋಗಿದ್ದು, ಇಡೀ ದಿನ ಜನರು ವಿಷದ ಗಾಳಿಯನ್ನೇ ಕುಡಿದು ಜೀವಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೀಗೆ ಸರಾಸರಿ ಏರ್ ಕ್ವಾಲಿಟಿ ಇಂಡೆಕ್ಸ್ 400 ಮೀರಿ ಹೋಗಿದ್ದು ಭಾರಿ ದೊಡ್ಡ ಅವಾಂತರ ಸೃಷ್ಟಿಸಿತ್ತು. ದೆಹಲಿ ಜನರಿಗೆ ಚಳಿಗಾಲ ಬಂತು ಎಂದರೆ ಸಾಕು ಮಾಲಿನ್ಯದ ಸಮಸ್ಯೆ ವಿಪರೀತ ಕಾಡುತ್ತದೆ, ಈ ಮೂಲಕ ನೂರಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದ್ದು, ಭಾನುವಾರ ಕೂಡ ವಿಷಗಾಳಿ ಹಾವಳಿ ಹೆಚ್ಚಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ವಿಷಗಾಳಿ ಅಬ್ಬರ
ದೆಹಲಿಯ 39 ಮಾನಿಟರಿಂಗ್ ಕೇಂದ್ರಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಅಲೀಪುರದಲ್ಲಿ ವಿಷಗಾಳಿ ಪ್ರಮಾಣ 417, ಐಟಿಓ ಭಾಗದಲ್ಲಿ ವಿಷಗಾಳಿ ಪ್ರಮಾಣ 408, ಪಂಜಾಬಿ ಬಾಗ್ ಪ್ರದೇಶದಲ್ಲಿ ವಿಷ ಗಾಳಿ ಪ್ರಮಾಣ 404, ಪತ್ರಪರ್ಗಂಜ್ ಭಾಗದಲ್ಲಿ ವಿಷಗಾಳಿ ಪ್ರಮಾಣವು 403 ಹಾಗೂ ಅಶೋಕ್ ವಿಹಾರ್ 402 ಇದ್ದರೆ ವಿವೇಕ ವಿಹಾರ್ 415, ನರೆಲಾ ಭಾಗದಲ್ಲಿ 412, ವಜೀರ್ಪುರ ಭಾಗದಲ್ಲಿ ಅತಿ ಹೆಚ್ಚು ಎಂದರೆ 424 ಪ್ರಮಾಣದಲ್ಲಿ ವಿಷಗಾಳಿ ಪತ್ತೆಯಾಗಿತ್ತು. ಬವಾನಾ 424, ಚಾಂದಿನಿ ಚೌಕ್ 400 & ಬುರಾರಿ ಕ್ರಾಸಿಂಗ್ ಭಾಗದಲ್ಲೂ 420 ರಷ್ಟು ವಿಷಗಾಳಿ ಅಬ್ಬರಿಸಿತ್ತು.
ಮಳೆ ಬರದೇ ಇದ್ದರೆ ಪರಿಸ್ಥಿತಿ ಘೋರ...
ಒಟ್ನಲ್ಲಿ ದೆಹಲಿಯ ಹಲವು ಪ್ರದೇಶಗಳಲ್ಲಿ ವಾಯು ಮಾಲಿನ್ಯ ಮಿತಿಮೀರಿ ಹೋಗಿದೆ. ಅಲ್ಲದೆ, ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡ ವಿಷಗಾಳಿ ಅಬ್ಬರ ಹೆಚ್ಚಾಗಿದೆ. ಎನ್‌ಸಿಆರ್ ಪ್ರದೇಶ, ನೊಯ್ಡಾ ಸೇರಿದಂತೆ ಗ್ರೇಟರ್ ನೊಯ್ಡಾ ಭಾಗ ಹಾಗೂ ಗಾಜಿಯಾಬಾದ್‌ನಲ್ಲಿ ಕೂಡ ಅತಿ ಕೆಟ್ಟ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲಿ ಮಳೆ ಬರಲಿ ಅಂತಾ ಜನರು ಬೇಡುವ ಪರಿಸ್ಥಿತಿ ಇದೆ.
ಮಾಲಿನ್ಯದ ಪರಿಣಾಮ ದೆಹಲಿ ಮತ್ತೊಮ್ಮೆ 'ಗ್ಯಾಸ್ ಚೇಂಬರ್' ಎಂಬ ಅಪಖ್ಯಾತಿಗೆ ಗುರಿ ಆಗಿದೆ. ಮಳೆ ಬರದ ಹೊರತು ದೆಹಲಿ ಜನರು ಬದುಕುವುದೇ ಕಷ್ಟ ಎಂಬಂತಾಗಿದೆ. ದೆಹಲಿಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ, ಏನೇ ಮಾಡಿದರೂ ಪ್ರಕೃತಿ ಮಾತೆಯ ಮುನಿಸು ಮನುಷ್ಯರನ್ನು ಅಪಾಯದ ಅಂಚಿಗೆ ತಳ್ಳುತ್ತಿದೆ. ಈಗಾಗಲೇ ಸಾವಿರಾರು ಜನರು ದೆಹಲಿ ನಗರದ ಆಸ್ಪತ್ರೆಗಳಿಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications