ಹಿಂದೂ ದೇವರುಗಳ ಅವಹೇಳನ ಮಾಡಿದ್ದ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ
ನವದೆಹಲಿ, ಅ. 9: ಬೌದ್ಧ ಧರ್ಮಕ್ಕೆ ದಲಿತರ ಮತಾಂತರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದೂ ದೇವರುಗಳ ಅವಹೇಳನವೂ ಮಾಡಿದ್ದ ದೆಹಲಿ ಸರಕಾರದ ಸಚಿವ ರಾಜೇಂದ್ರ ಪಾಲ್ ಗೌತಂ ರಾಜೀನಾಮೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ನಡೆದ ಈ ಮತಾಂತರ ಕಾರ್ಯಕ್ರಮ ಭಾರೀ ವಿವಾದಕ್ಕೆ ಒಳಗಾಗಿತ್ತು. ಸಮಾಜ ಕಲ್ಯಾಣ ಸಚಿವರಾಗಿದ್ದ ಆಮ್ ಆದ್ಮಿ ಮುಖಂಡ ರಾಜೇಂದ್ರ ಪಾಲ್ ಗೌತಮ್ ಆ ಕಾರ್ಯಕ್ರಮದಲ್ಲಿ ಹಿಂದು ಧರ್ಮ ಮತ್ತು ದೇವರ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಬಿಜೆಪಿ ಈ ವಿಚಾರವನ್ನು ಇಟ್ಟುಕೊಂಡು ಟೀಕಾ ಪ್ರಹಾರವನ್ನೇ ಮಾಡಿತ್ತು.
ಇದೇ ಕಾರಣಕ್ಕೆ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ ಕೊಟ್ಟಿರುವ ಸಾಧ್ಯತೆ ಇದೆ. ಭಾನುವಾರ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಂದ್ರ ಪಾಲ್ ಗೌತಮ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯಿಂದ ತನಗೆ ಹಾಗೂ ತನ್ನ ಪಕ್ಷಕ್ಕೆ ಅವಮಾನವಾಗಿದೆ ಎಂದು ಆರೋಪಿಸಿದರು.
"ಈ ವಿಚಾರವನ್ನು ಸುಮ್ಮನೆ ವಿವಾದ ಮಾಡಲಾಗುತ್ತಿದೆ. ಬಿಜೆಪಿಯವರು ನನಗೆ ಮತ್ತು ನನ್ನ ಪಕ್ಷಕ್ಕೆ ಅಪಮಾನಿಸುತ್ತಿದ್ದಾರೆ ಎಂದು ರಾಜೇಂದ್ರ ಪಾಲ್ ಗೌತಮ್ ಹೇಳಿದರು.

"ಇವತ್ತು ಮಹರ್ಷಿ ವಾಲ್ಮೀಕಿ ಜಯಂತಿ ದಿನ. ಕಾನ್ಷಿ ರಾಮ್ ಸಾಹೇಬ್ ಅವರ ಜಯಂತಿಯೂ ಹೌದು. ಇಂಥ ಸಂದರ್ಭದಲ್ಲಿ ನಾನು ಹಲವು ಸಂಕೋಲೆಗಳಿಂದ ಬಿಡಿಸಿಕೊಂಡಿದ್ದೇನೆ. ಇವತ್ತು ಮತ್ತೊಮ್ಮೆ ಹುಟ್ಟಿ ಬಂದಿದ್ದೇನೆ. ಇನ್ನು ಮುಂದೆ ನಮ್ಮ ಸಮಾಜದಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ಹಾಗೂ ನಮ್ಮ ಹಕ್ಕುಗಳಿಗಾಗಿ ಹೆಚ್ಚು ಆಗ್ರಹಪೂರ್ವಕವಾಗಿ ಮತ್ತು ಯಾವ ತಡೆಯೂ ಇಲ್ಲದೇ ಹೋರಾಡುವುದನ್ನು ಮುಂದುವರಿಸುತ್ತೇನೆ" ಎಂದು ಆಮ್ ಮುಖಂಡ ರಾಜೇಂದ್ರ ಪಾಲ್ ಗೌತಂ ಟ್ವೀಟ್ ಮಾಡಿದ್ದಾರೆ.
ಮತಾಂತರ ಕಾರ್ಯಕ್ರಮದಲ್ಲಿ ಗೌತಮ್ ಹೇಳಿದ್ದೇನು?
ಅಕ್ಟೋಬರ್ 5ರಂದು ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರು ಬೌದ್ಧ ಧರ್ಮದ ದೀಕ್ಷೆ ಪಡೆದಿದ್ದರು. ಈ ವೇಳೆ, "ನಾವು ಬ್ರಹ್ಮ, ವಿಷ್ಣು, ಮಹೇಶ್ವರ, ಗೌರಿ ಗಣೇಶರನ್ನು ದೇವರೆಂದು ನಂಬುವುದಿಲ್ಲ. ಅವರನ್ನು ಯಾವತ್ತೂ ಪ್ರಾರ್ಥಿಸುವುದಿಲ್ಲ. ರಾಮ ಮತ್ತು ಕೃಷ್ಣರನ್ನು ದೇವರೆಂದು ಪರಿಗಣಿಸುವುದಿಲ್ಲ. ಗೌರಿ ಗಣಪತಿ ಮತ್ತಿತರ ಹಿಂದೂ ದೇವ ದೇವತೆಯರಿಗೆ ಪ್ರಾರ್ಥನೆ ಸಲ್ಲಿಸುವುದಿಲ್ಲ" ಎಂದು ಪ್ರಮಾಣ ವಚನ ಬೋಧಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಸಚಿವ ರಾಜೇಂದ್ರ ಪಾಲ್ ಗೌತಮ್ ಕೂಡ ಇದ್ದರು.
'ಮಿಷನ್ ಜೈ ಭೀಮ್' ಬ್ಯಾನರ್ ಅಡಿಯಲ್ಲಿ ನಡೆದ 'ಬೌದ್ಧ ಧರ್ಮಕ್ಕೆ ಘರ್ ವಾಪಸಿ' ಕಾರ್ಯಕ್ರಮವದ ವಿಡಿಯೋವನ್ನು ರಾಜೇಂದ್ರ ಪಾಲ್ ಗೌತಮ್ ಅವರ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಲಾಗಿತ್ತು.

ಪಾಲ್ ಸಮರ್ಥನೆ
ಹಿಂದೂ ದೇವರುಗಳನ್ನು ಪ್ರಾರ್ಥಿಸಬಾರದೆಂದು ಪ್ರಮಾಣ ವಚನ ಬೋಧಿಸಿದ ಕ್ರಮವನ್ನು ಆಮ್ ಆದ್ಮಿ ಮುಖಂಡ ರಾಜೇಂದ್ರ ಪಾಲ್ ಗೌತಮ್ ಸಮರ್ಥಿಸಿಕೊಂಡಿದ್ದಾರೆ.
"ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರ ಆಗುವಾಗ ಇದೇ ಪ್ರಮಾಣವಚನ ಸ್ವೀಕರಿಸಿದ್ದರು. ನಾವೂ ಕೂಡ ಅದೇ ಪ್ರಮಾಣವಚನ ಪಡೆದಿದ್ದೇವೆ. 1956, ಅಕ್ಟೋಬರ್ 14ರಂದು ಬಾಬಾಸಾಹೇಬರು ಬೌದ್ಧ ಧರ್ಮ ಸ್ವೀಕರಿಸುವಾಗ 22 ಪ್ರಮಾಣವಚನ ಮಾಡಿದ್ದರು. ಅವನ್ನೇ ನಾವೂ ಮಾಡಿದ್ದೇವೆ. ಪೂರ್ಣ ವಿಡಿಯೋ ನೋಡಿದರೆ ಅರ್ಥವಾಗುತ್ತದೆ. ಆದರೆ, ಬಿಜೆಪಿ ತನಗೆ ಬೇಕಾದ ಭಾಗವನ್ನು ಮಾತ್ರ ಕತ್ತರಿಸಿ ಶೇರ್ ಮಾಡುತ್ತಿದೆ. ವೋಟಿಗಾಗಿ ಬಿಜೆಪಿ ಏನು ಬೇಕಾದರೂ ಮಾಡುತ್ತದೆ" ಎಂದು ರಾಜೇಂದ್ರ ಪಾಲ್ ಗೌತಮ್ ಹೇಳಿದ್ದಾರೆ.
ತನ್ನ ಮೇಲೆ ಬಿಜೆಪಿ ದೇಶದ್ರೋಹ ಆರೋಪ ಮಾಡಿರುವ ಬಗ್ಗೆ ರಾಜೇಂದ್ರಪಾಲ್ ಕಿಡಿಕಾರಿದರು. "ಇವರು ಮಾನವತೆಯ ಶತ್ರುಗಳಾಗಿದ್ದಾರೆ. ಧರ್ಮಾಧಾರಿತವಾಗಿ ರಾಜಕೀಯ ಮಾಡುತ್ತಾರೆ. ಜಾತಿ ಧರ್ಮದ ಹೆಸರಿನಲ್ಲಿ ಹುಚ್ಚಾಟ ಮೆರೆಯುತ್ತಾರೆ. ನಿಜವಾದ ಅರ್ಥದಲ್ಲಿ ಇವರೆಯೇ ದೇಶದ್ರೋಹಿಗಳು" ಎಂದು ಸಮಾಜ ಕಲ್ಯಾಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ತಿಳಿಸಿದ್ದಾರೆ.
"ಮತಾಂತರ ವಿಚಾರದಲ್ಲಿ ಬಿಜೆಪಿ ಬೇಕಾದರೆ ದೂರು ಕೊಡಲಿ. ನಾವು ಯಾವ ಧರ್ಮ ಅಥವಾ ಮತವನ್ನು ಅನುಸರಿಸಬೇಕೆಂಬ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ. ನಮ್ಮ ವಿರುದ್ಧ ಬೇಕಾದರೆ ಮೊಕದ್ದಮೆ ಹಾಕಲಿ, ಸುಳ್ಳು ಪ್ರಕರಣ ದಾಖಲಿಸಲಿ, ನಮ್ಮನ್ನು ಜೈಲಿಗೆ ಹಾಕಲಿ. ನಾವಿದಕ್ಕೆ ಸಿದ್ಧರಿದ್ದೇವೆ," ಎಂದು ರಾಜೇಂದ್ರಪಾಲ್ ಗೌತಮ್ ಅಬ್ಬರಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications