D.K.Shivakumar: ಎರಡು ದಿನ ರಾಜ್ಯ ಬಿಟ್ಟು ವಿಶೇಷ ಸ್ಥಳಕ್ಕೆ ತೆರಳಲಿರುವ ಡಿ.ಕೆ.ಶಿವಕುಮಾರ್, ಎಲ್ಲಿಗೆ?
ರಾಜ್ಯ ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಎಂಬ ವಿಚಾರ ಚರ್ಚೆಯಲ್ಲಿದೆ. ಇದೇ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಎರಡು ದಿನ ರಾಜ್ಯ ತೊರೆಯಲು ಮುಂದಾಗಿದ್ದಾರೆ. ಸಿಎಂ ಆಗುವ ತವಕದಲ್ಲಿರುವ ಅವರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಇದೇ ವಾರ ರಾಜ್ಯ ಬಿಟ್ಟು ಎರಡು ದಿನ ವಿಶೇಷ ಸ್ಥಳಕ್ಕೆ ಹೋಗಲಿದ್ದಾರೆ.
ಹೌದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಲು ಡಿಸಿಎಂ ಸಜ್ಜಾಗಿದ್ದಾರೆ. ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರೆ ಅದೃಷ್ಟ ಕುಲಾಯಿಸುತ್ತೆ, ಅಲ್ಲದೆ ಮಹಾಕುಂಭ ಮೇಳದ ವೇಳೆ ಸಂಗಮದ ಸ್ನಾನವು ಅತಿ ಪವಿತ್ರ ಹಾಗೂ ಪಾಪಗಳೆಲ್ಲವೂ ತೊಳೆಯುತ್ತದೆ ಎನ್ನುವ ನಂಬಿಕೆ ಇದೆ. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬ ಸಮೇತರಾಗಿ ಪ್ರಯಾಗ್‌ರಾಜ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಫೆಬ್ರವರಿ 9 ಹಾಗೂ 10ರಂದು ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ 9ರಂದು ಮುಂಜಾನೆ ಅವರು ಪ್ರಯಾಗ್‌ರಾಜ್ ತಲುಪಲಿದ್ದು, ಮರುದಿನ ಅಲ್ಲಿ ಪವಿತ್ರ ಸ್ನಾನ ಮಾಡಿ ವಾಪಸ್ ಆಗಲಿದ್ದಾರೆ. ಅಲ್ಲದೆ ಉತ್ತರಪ್ರದೇಶದ ರಾಜಕಾರಣಿಗಳೊಂದಿಗೆ ಡಿ.ಕೆ.ಶಿವಕುಮಾರ್ ಅವರು ಉತ್ತಮ ನಂಟು ಹೊಂದಿದ್ದಾರೆ. ಈ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರ ಸಚಿವರು ಬೆಂಗಳೂರಿಗೆ ಬಂದು ಡಿಕೆಶಿ ಅವರನ್ನು ಮಹಾಕುಂಭ ಮೇಳಕ್ಕೆ ಆಹ್ವಾನಿಸಿದ್ದರು.
ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ವಿಕಲಚೇತನರ ಸಬಲೀಕರಣ ಸಚಿವರಾದ ನರೇಂದ್ರ ಹಾಗೂ ಹಣಕಾಸು ಸಚಿವರಾದ ಸುರೇಶ್ ಖನ್ನಾ ಅವರು ಬೆಂಗಳೂರಿಗೆ ಬಂದು, ಡಿಕೆ ಶಿವಕುಮಾರ್ ಅವರನ್ನ ಗೃಹಕಚೇರಿಯಲ್ಲಿ ಭೇಟಿಯಾಗಿದ್ದರು. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ವಿಶೇಷ ಆಹ್ವಾನ ನೀಡಿದ್ದರು. ಈ ಹಿನ್ನೆಲೆ ಅವರು ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು. ಇದೀಗ ಅವರು ಸಮಯ ನಿಗದಿ ಮಾಡಿದ್ದಾರೆ.
ಅಶೋಕ್ ವ್ಯಂಗ್ಯ: ಇನ್ನು ಡಿಕೆ ಶಿವಕುಮಾರ್ ಅವರು ಪ್ರಯಾಗ್‌ರಾಜ್‌ಗೆ ಹೋಗುತ್ತಿರುವ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಗಂಗೆಯಲ್ಲಿ ಮುಳುಗಿದ ತಕ್ಷಣ ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾಪಗಳೆಲ್ಲ ಕಳೆದುಹೋಗುತ್ತಾ? ಕುಂಭ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷರು ಪುಣ್ಯಸ್ನಾನ ಮಾಡಿದ ತಕ್ಷಣ ಕರ್ನಾಟಕದಲ್ಲಿ ಬಡತನ ನಿರ್ಮೂಲನೆ ಆಗುತ್ತಾ? ಹೀಗಂತ ಈಗ ಮಲ್ಲಿಕಾರ್ಜುನ್ ಖರ್ಗೆ ಸಾಹೇಬರು ಪ್ರಶ್ನೆ ಮಾಡಲ್ವಾ? ಎಂದು ಕೌಂಟರ್ ಕೊಟ್ಟಿದ್ದಾರೆ.

ಮಹಾಕುಂಭ ಮೇಳದ ಇತಿಹಾಸವೇನು?: ಭೂಮಿಯಲ್ಲಿ ಈ ಹಿಂದೆ ದೇವತೆಗಳ ತಂಗುವ ಸ್ಥಳವಾಗಿದ್ದ ಈ ಜಾಗದಲ್ಲಿ ಅಮರರಾಗಲು ಅಮೃತವನ್ನು ಪಡೆಯಲು ದೇವತೆಗಳು ಮತ್ತು ರಾಕ್ಷಸರ ನಡುವೆ ಕಾಳಗ ನಡೆದಿತ್ತು. ಈ ವೇಳೆ ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯ ನದಿಗಳ ಮೇಲೆ ಆ ಅಮೃತವು ಬಿದ್ದಿತ್ತು ಎಂದು ನಂಬಲಾಗಿದೆ. ಹಾಗಾಗಿ ಇದನ್ನು ದೇವತೆಗಳ ಸ್ಥಳ ಎನ್ನುವ ಧಾರ್ಮಿಕ ನಂಬಿಕೆ ಇದೆ.
ಪ್ರಯಾಗ್‌ರಾಜ್ ಕುಂಭಮೇಳವು ಜಗತ್ತಿನಲ್ಲೇ ಅತಿ ಹೆಚ್ಚು ಜನ ಸೇರುವ ಸಮಾರಂಭಗಳಲ್ಲಿ ಒಂದಾಗಿದ್ದು, ಅಲ್ಲಿನ ಪವಿತ್ರ ನದಿಗಳ ನೀರು ಅಮೃತವಾಗಿ ಬದಲಾಗುತ್ತದೆ ಎನ್ನುವ ಐತಿಹ್ಯವಿದೆ. ಕುಂಭಮೇಳ ಪವಿತ್ರ ಸ್ನಾನವು ಮೋಕ್ಷಕ್ಕೆ ಇನ್ನೊಂದು ಮಾರ್ಗ ಎಂದೂ ನಂಬಲಾಗಿದೆ. ಹಾಗಾಗಿ ಈ ಕುಂಭಮೇಳಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಜನ ಆಗಮಿಸುತ್ತಾರೆ. ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭಮೇಳ, ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಹಾಗೂ 144 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ.












Click it and Unblock the Notifications