ಸಮುದ್ರದಾಳದಲ್ಲಿ ಪತ್ತೆಯಾಯ್ತು ಗುಪ್ತ ಚಿನ್ನದ ಕಾರ್ಖಾನೆ : ರೋಚಕ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು!
ಬಂಗಾರಕ್ಕೆ ಇಡೀ ಜಗತ್ತಿನಲ್ಲಿ ಭಾರೀ ಬೇಡಿಕೆ ಇದೆ. ಅದರ ಅಪರೂಪದ ಲಭ್ಯತೆಯೇ ಅದಕ್ಕೆ ಅಷ್ಟೊಂದು ಮೌಲ್ಯ ತಂದುಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಆಗಸದೆತ್ತರಕ್ಕೆ ಏರಿದ್ದು, ಬಂಗಾರ ಖರೀದಿ ಕನಸು ಎನ್ನುವಂತೆ ಆಗಿದೆ. ಚಿನ್ನ ಎಲ್ಲಿ ಬೇಕೋ ಅಲ್ಲಿ ಸಿಗುವುದಿಲ್ಲ. ಚಿನ್ನದ ಗಣಿಗಾರಿಕೆಗಾಗಿ ಭೂಮಿಯನ್ನು ಆಳವಾಗಿ ಅಗೆಯಬೇಕಾಗುತ್ತದೆ. ಭೂಮಿಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಚಿನ್ನ ಏಕೆ ಹೆಚ್ಚಾಗಿ ಸಿಗುತ್ತದೆ, ಉಳಿದೆಡೆ ಏಕೆ ಸಿಗುವುದಿಲ್ಲ ಎಂಬ ಪ್ರಶ್ನೆ ದಶಕಗಳಿಂದ ವಿಜ್ಞಾನಿಗಳನ್ನು ಕಾಡುತ್ತಿತ್ತು. ಸದ್ಯ ಈ ನಿಗೂಢ ಪ್ರಶ್ನೆಗೆ ಸಮುದ್ರದಾಳದಲ್ಲಿ ಉತ್ತರ ಸಿಕ್ಕಿದೆ. ಕೋಟ್ಯಂತರ ವರ್ಷಗಳಿಂದ ನಡೆಯುತ್ತಿರುವ ಪ್ರಕೃತಿಯ ರಹಸ್ಯವೊಂದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಖ್ಯಾತ ಅಂತಾರಾಷ್ಟ್ರೀಯ ನಿಯತಕಾಲಿಕೆ 'ಕಮ್ಯುನಿಕೇಷನ್ಸ್ ಅರ್ಥ್ ಅಂಡ್ ಎನ್ವಿರಾನ್‌ಮೆಂಟ್'ನಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನದ ಪ್ರಕಾರ, ಸಮುದ್ರದಾಳದ ಕೆಲವು ನಿರ್ದಿಷ್ಟ ಪ್ರದೇಶಗಳು ನೈಸರ್ಗಿಕವಾಗಿ 'ಚಿನ್ನದ ಕಾರ್ಖಾನೆ'ಗಳಂತೆ ಕೆಲಸ ಮಾಡುತ್ತಿವೆ. ಇಲ್ಲಿನ ಸೂಕ್ತ ವಾತಾವರಣವು ಕಾಲಕ್ರಮೇಣ ಚಿನ್ನದ ಶೇಖರಣೆಗೆ ಕಾರಣವಾಗುತ್ತಿದೆ.

ನ್ಯೂಜಿಲೆಂಡ್ ಸಮುದ್ರದಾಳದಲ್ಲಿ ಸಂಶೋಧನೆ:
ಜರ್ಮನಿಯ 'ಜಿಯೋಮಾರ್ ಹೆಲ್ಮ್‌ಹೋಲ್ಟ್ಜ್ ಸೆಂಟರ್ ಫಾರ್ ಓಷನ್ ರಿಸರ್ಚ್ ಕೀಲ್' ಸಂಸ್ಥೆಯ ವಿಜ್ಞಾನಿ ಕ್ರಿಶ್ಚಿಯನ್ ಟಿಮ್ ನೇತೃತ್ವದ ತಂಡವು ಈ ಸಂಶೋಧನೆ ನಡೆಸಿದೆ. ನ್ಯೂಜಿಲೆಂಡ್‌ನ ಈಶಾನ್ಯ ಭಾಗದಲ್ಲಿರುವ 'ಕೆರ್ಮಾಡೆಕ್ ದ್ವೀಪಸಮೂಹ'ದ ಸಮುದ್ರದಾಳದಲ್ಲಿರುವ ಜ್ವಾಲಾಮುಖಿ ಪ್ರದೇಶಗಳನ್ನು ವಿಜ್ಞಾನಿಗಳು ಅಧ್ಯಯನಕ್ಕೆ ಒಳಪಡಿಸಿದ್ದರು.
ಸಮುದ್ರದಾಳದ ಜ್ವಾಲಾಮುಖಿ ಗಾಜಿನ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿರುವ ಚಿನ್ನದ ಪ್ರಮಾಣವು ಸಾಮಾನ್ಯ ಸಮುದ್ರದ ತಳಭಾಗದಲ್ಲಿ ಸಿಗುವ ಮ್ಯಾಗ್ಮಾಗಳಿಗಿಂತ ಹಲವು ಪಟ್ಟು ಹೆಚ್ಚಿರುವುದು ಈ ಪರೀಕ್ಷೆಯಲ್ಲಿ ಕಂಡುಬಂದಿದೆ. ಇದು ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ ಎಂದು ಮುಖ್ಯ ಸಂಶೋಧಕ ಕ್ರಿಶ್ಚಿಯನ್ ಟಿಮ್ ತಿಳಿಸಿದ್ದಾರೆ.
ಚಿನ್ನ ಇಷ್ಟೊಂದು ಅಪರೂಪ ಏಕೆ?:
ಪರಮಾಣು ಮಟ್ಟದಲ್ಲಿ ಚಿನ್ನವು ಭೂಮಿಯ ಇತರ ಧಾತುಗಳಿಗಿಂತ ಅತ್ಯಂತ ಭಾರವಾಗಿದೆ. ಹಾಗಾಗಿಯೇ ಭೂಮಿಯ ಮೇಲ್ಪದರದಲ್ಲಿ ಇದರ ಲಭ್ಯತೆ ತುಂಬಾ ಕಡಿಮೆ. ಆದರೆ, ಕೆಲವು ಕಡೆ ಮಾತ್ರ ಇದು ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಲು ಭೂಮಿಯ ಆಳದಲ್ಲಿ ನಡೆಯುವ ಆಂತರಿಕ ಪ್ರಕ್ರಿಯೆಯೇ ಕಾರಣ ಎಂದು ಈ ಅಧ್ಯಯನ ಸ್ಪಷ್ಟಪಡಿಸಿದೆ.
'ಹೈಡ್ರಸ್ ಮೆಲ್ಟಿಂಗ್' ಎಂಬ ಮ್ಯಾಜಿಕ್:
ಸಮುದ್ರದಾಳದಲ್ಲಿ ಒಂದು ಟೆಕ್ಟಾನಿಕ್ ಪ್ಲೇಟ್ ಮತ್ತೊಂದರ ಕೆಳಗೆ ಚಲಿಸಿದಾಗ ಜ್ವಾಲಾಮುಖಿ ಪ್ರಕ್ರಿಯೆಗಳು ಆರಂಭವಾಗುತ್ತವೆ. ಈ ವೇಳೆ ನೀರು ಭೂಮಿಯ ಅತ್ಯಂತ ಆಳಕ್ಕೆ ತಳ್ಳಲ್ಪಡುತ್ತದೆ. ಅಲ್ಲಿನ ಅತಿ ಹೆಚ್ಚಿನ ತಾಪಮಾನದಲ್ಲಿ 'ಹೈಡ್ರಸ್ ಮೆಲ್ಟಿಂಗ್' ಎಂಬ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯು ಚಿನ್ನವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ 'ಸಲ್ಫೈಡ್' ಖನಿಜಗಳನ್ನು ಒಡೆಯುತ್ತದೆ.
ಖನಿಜಗಳು ಒಡೆದ ತಕ್ಷಣ ಚಿನ್ನವು ಕರಗಿದ ಬಂಡೆಗಳ ಜೊತೆ ಸೇರಿಕೊಳ್ಳುತ್ತದೆ.
ಈ ಪ್ರಕ್ರಿಯೆಯು ಕೋಟ್ಯಂತರ ವರ್ಷಗಳಿಂದ ನಿರಂತರವಾಗಿ ಮರುಕಳಿಸುವುದರಿಂದ, ಆ ಮ್ಯಾಗ್ಮಾದಲ್ಲಿ ಚಿನ್ನದ ಪ್ರಮಾಣ ದಟ್ಟವಾಗುತ್ತಾ ಹೋಗುತ್ತದೆ.
ಆದರೆ, ಇಲ್ಲಿಂದ ಚಿನ್ನ ತೆಗೆಯಲು ಸಾಧ್ಯವಿಲ್ಲ:
ಈ ಆವಿಷ್ಕಾರವು ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದ್ದರೂ, ಈ ಜ್ವಾಲಾಮುಖಿ ವಲಯಗಳಿಂದ ಸದ್ಯಕ್ಕೆ ಚಿನ್ನವನ್ನು ಗಣಿಗಾರಿಕೆ ಮಾಡಲು ಸಾಧ್ಯವಿಲ್ಲ ಎಂದು ವರದಿಗಳು ಹೇಳಿವೆ. ಏಕೆಂದರೆ, ಈ ಚಿನ್ನವು ಸಮುದ್ರದ ಅತ್ಯಂತ ಆಳದಲ್ಲಿದೆ ಮತ್ತು ವಾಣಿಜ್ಯ ಬಳಕೆಗೆ ಯೋಗ್ಯವಾಗುವಷ್ಟು ದೊಡ್ಡ ಪ್ರಮಾಣದಲ್ಲಿ ಒಂದೇ ಕಡೆ ಸಿಗುತ್ತಿಲ್ಲ. ಆದರೆ, ಭೂಮಿಯ ಆಳದಿಂದ ಚಿನ್ನವು ಮೇಲ್ಮೈಗೆ ಹೇಗೆ ಪ್ರಯಾಣಿಸುತ್ತದೆ ಮತ್ತು ಭೂಮಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆ ದಾರಿದೀಪವಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications