ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಪ್ರಯೋಗಕ್ಕೆ ಕೊನೆಗೂ ಅನುಮತಿ
ನವದೆಹಲಿ, ಅಕ್ಟೋಬರ್ 17: ರಷ್ಯಾ ನಿರ್ಮಿತ ಸ್ಪುಟ್ನಿಕ್-5 ಲಸಿಕೆಯ ವ್ಯಾಪಕ ಪ್ರಯೋಗ ನಡೆಸಲು ಮೊದಲ ಪ್ರಸ್ತಾವಕ್ಕೆ ನಿರಾಕರಿಸಿದ್ದ ಭಾರತದ ಔಷಧ ನಿಯಂತ್ರಕ ಸಂಸ್ಥೆ, ಲಸಿಕೆಯ 2/3 ಕ್ಲಿನಿಕಲ್ ಮಾನವ ಪ್ರಯೋಗವನ್ನು ನಡೆಸಲು ಡಾ. ರೆಡ್ಡೀಸ್ ಲ್ಯಾಬೋರೇಟರಿಗೆ ಕೊನೆಗೂ ಅನುಮತಿ ನೀಡಿದೆ.
ಸ್ಪುಟ್ನಿಕ್ 5 ರಷ್ಯಾ ಅನುಮೋದನೆ ನೋಡಿರುವ ಜಗತ್ತಿನ ಮೊದಲ ಕೊರೊನಾ ವೈರಸ್ ಲಸಿಕೆ ಎನಿಸಿದೆ. 'ಇದು ಬಹು ಕೇಂದ್ರಿತ ಮತ್ತು ಯಾದೃಚ್ಛಿಕ ನಿಯಂತ್ರಿತ ಅಧ್ಯಯನವಾಗಿರಲಿದೆ. ಇದರಲ್ಲಿ ಸುರಕ್ಷತೆ ಮತ್ತು ಪ್ರತಿರಕ್ಷಕತೆಯನ್ನು ಒಳಗೊಂಡಿರುತ್ತದೆ' ಎಂದು ಡಾ. ರೆಡ್ಡೀಸ್ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಜಂಟಿ ಹೇಳಿಕೆ ತಿಳಿಸಿದೆ.
ರಷ್ಯಾದಲ್ಲಿ ಸಣ್ಣ ಪ್ರಮಾಣದಲ್ಲಿ ಸ್ಪುಟ್ನಿಕ್ ಲಸಿಕೆ ಪ್ರಯೋಗ ನಡೆದು ವ್ಯಾಪಕ ಪ್ರಯೋಗಕ್ಕೂ ಮುನ್ನವೇ ಲಸಿಕೆಯನ್ನು ನೋಂದಣಿ ಮಾಡಲಾಗಿತ್ತು. ಅದನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗ ಮಾಡುವ ಡಾ. ರೆಡ್ಡೀಸ್‌ನ ಆರಂಭದ ಪ್ರಸ್ತಾವವನ್ನು ಡಿಸಿಜಿಐ ನಿರಾಕರಿಸಿತ್ತು. ಪ್ರಸ್ತುತ ಸ್ಪುಟ್ನಿಕ್ ಲಸಿಕೆಯು ನೋಂದಣಿ ನಂತರದ ಮೂರನೇ ಹಂತದ ಪ್ರಯೋಗ ನಡೆಸುತ್ತಿದ್ದು, ಸುಮಾರು 40,000 ಸ್ವಯಂ ಸೇವಕರು ಪಾಲ್ಗೊಳ್ಳುತ್ತಿದ್ದಾರೆ.

ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಪ್ರಯೋಗ ಮತ್ತು ಹಂಚಿಕೆ ಸಂಬಂಧ ಆರ್‌ಡಿಐಎಫ್ ಮತ್ತು ಡಾ. ರೆಡ್ಡೀಸ್ ಲ್ಯಾಬ್ ಸೆಪ್ಟೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಒಪ್ಪಂದದ ಪ್ರಕಾರ ಭಾರತಕ್ಕೆ 100 ಮಿಲಿಯನ್ ಸ್ಪುಟ್ನಿಕ್ ಡೋಸ್‌ಗಳು ಸಿಗಲಿದೆ.












Click it and Unblock the Notifications