ಗುಜರಾತ್: ಕ್ರಿಕೆಟ್ ಚೆಂಡು ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿದ ಕಿರಾತಕರು
ಕ್ರಿಕೆಟ್ ಆಡುವ ಸಂದರ್ಭದಲ್ಲಿ ದಲಿತ ಹುಡುಗನೊಬ್ಬ ಚೆಂಡನ್ನು ಎತ್ತಿಕೊಂಡ ಕಾರಣಕ್ಕೆ ಜನರ ಗುಂಪೊಂದು ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಜನರ ಗುಂಪೊಂದು ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಹೆಬ್ಬೆರಳು ಕತ್ತರಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಗುಜರಾತ್‌ನ ಪಟಾನ್ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಫ್‌ಐಆರ್‌ನ ಪ್ರಕಾರ, ಗ್ರಾಮದ ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾಗ ಚೆಂಡನ್ನು ಎತ್ತಿಕೊಂಡ ಬಾಲಕನಿಗೆ ಆರೋಪಿ ಕೋಪಗೊಂಡು ಬೆದರಿಕೆ ಹಾಕಿದ್ದಾನೆ ಎಂದು ಅವರು ಹೇಳಿದ್ದಾರೆ.

ದಲಿತ ಸಮುದಾಯದ ಸದಸ್ಯರನ್ನು ಅವಮಾನಿಸುವ ಮತ್ತು ಬೆದರಿಸುವ ಉದ್ದೇಶದಿಂದ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದಕ್ಕೆ ಬಾಲಕನ ಚಿಕ್ಕಪ್ಪ ಧೀರಜ್ ಪರ್ಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ, ಅಂದು ಸಂಜೆ ಏಳು ಜನರ ಗುಂಪೊಂದು ಹರಿತವಾದ ಆಯುಧಗಳೊಂದಿಗೆ ಧೀರಜ್ ಮತ್ತು ಅವರ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೀರ್ತಿ ಅವರ ಹೆಬ್ಬೆರಳನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ ಎಂದು ಅಧಿಕಾರಿ ಘಟನೆಯ ವಿವರ ಬಿಚ್ಚಿಟ್ಟಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲು
ಭಾರತೀಯ ದಂಡ ಸಂಹಿತೆ ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಲವು ದಲಿತ ಸಂಘಟನೆಗಳು ಘಟನೆಯನ್ನು ಬಲವಾಗಿ ಖಂಡಿಸಿದ್ದು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿವೆ. ಇಲ್ಲವಾದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿವೆ.












Click it and Unblock the Notifications