ಅಕ್ರಮ ಆಸ್ತಿ ಗಳಿಕೆ ಕೇಸ್: ಪಕ್ಷದಿಂದ ಉಚ್ಚಾಟಿತ ಶಾಸಕನ ಬಂಧನ
ಭುವೇಶ್ವರ, ಡಿ.4: ಜನ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬಿಜು ಜನತಾದಳ(ಬಿಜೆಡಿ)ಯಿಂದ ಉಚ್ಚಾಟನೆಗೊಂಡಿರುವ ಶಾಸಕ ಪ್ರದೀಪ್ ಪಾಣಿಗ್ರಾಹಿ ಅವರನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಇದೇ ಮೊದಲ ಬಾರಿಗೆ ಜನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಉಚ್ಚಾಟನೆಗೊಂಡ ಶಾಸಕರು ಎಂಬ ಅಪವಾದಕ್ಕೆ ಗೋಪಾಲ್ ಪುರ್ ಕ್ಷೇತ್ರದ ಶಾಸಕ ಪ್ರದೀಪ್ ಪ್ರಾಣಿಗ್ರಾಹಿ ಗುರಿಯಾಗಿದ್ದರು. ನವೆಂಬರ್ 29ರಂದು ಬಿಜು ಜನತಾದಳದಿಂದ ಅವರನ್ನು ಉಚ್ಚಾಟನೆ ಮಾಡಿ ನವೀನ್ ಪಟ್ನಾಯಕ್ ಆದೇಶ ಹೊರಡಿಸಿದ್ದರು.
ಜನ ವಿರೋಧಿ ಚಟುವಟಿಕೆ ಆರೋಪ, ಬಿಜೆಡಿಯಿಂದ ಶಾಸಕ ಉಚ್ಚಾಟನೆ
ಇತ್ತೀಚೆಗೆ ಅಮಾನತುಗೊಂಡ ಅರಣ್ಯ ಸೇವಾ ಅಧಿಕಾರಿ(IFS) ಅಭಯ್ ಕಾಂತ್ ಪಾಠಕ್ ಹಾಗೂ ಅವರ ಪುತ್ರ ಆಕಾಶ್ ಕುಮಾರ್ ಪಾಠಕ್ ಅವರ ಜೊತೆ ಭ್ರಷ್ಟಾಚಾರದಲ್ಲಿ ಶಾಸಕ ಪ್ರದೀಪ್ ತೊಡಗಿದ್ದರು ಎಂದು ಭ್ರಷ್ಟಾಚಾರ ನಿಗ್ರಹ ದಳ ಪುರಾವೆ ಒದಗಿಸಿತ್ತು. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಅಭಯ್ ಕಾಂತ್ ಹಾಗೂ ಆಕಾಶ್ ಕುಮಾರ್ ಇಬ್ಬರು ಸದ್ಯ ಜೈಲಿನಲ್ಲಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ್ ಪುರ್ ಕ್ಷೇತ್ರದ ಶಾಸಕ ಪ್ರದೀಪ್ ಪ್ರಾಣಿಗ್ರಾಹಿ ಅವರನ್ನು ಕ್ರೈಂ ವಿಭಾಗದ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.