ಯಾಸ್ ಚಂಡಮಾರುತ: ಮಹತ್ವದ ಸಭೆ ನಡೆಸಿದ ಗೃಹಸಚಿವ ಅಮಿತ್ ಶಾ
ನವದೆಹಲಿ, ಮೇ 24: ಯಾಸ್ ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮಹತ್ವದ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಒಡಿಶಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್ ಭಾಗಿಯಾಗಿದ್ದರು. ಯಾಸ್ ಚಂಡಮಾರುತವನ್ನು ಎದುರಿಸಲು ಕೈಗೊಂಡಿರುವ ಪೂರ್ವ ಸಿದ್ಧತೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ.
ಇದಕ್ಕೂ ಮುನ್ನ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕೂಡ ಸಭೆಯನ್ನು ನಡೆಸಿದ್ದರು. ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದ ಈ ಸಭೆಯಲ್ಲಿ ಕೆಲ ಸಲಹೆ ಸೂಚನೆಗಳನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಸಹಿತ ಸರಕಾರದ ಹಿರಿಯ ಅಧಿಕಾರಿಗಳು ಹಾಗೂ ಎನ್‌ಡಿಆರ್‌ಎಫ್‌ನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ದೇಶಾದ್ಯಂತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 950 ಸಿಬ್ಬಂದಿಗಳನ್ನು ವಿವಿಧ ಭಾಗಗಳಿಗೆ ಕಳುಹಿಸುವ ಮೂಲಕ ಸಶಸ್ತ್ರಪಡೆಗಳು ಚಂಡಮಾರುತದ ಪರಿಣಾಮವನ್ನು ತಗ್ಗಿಸಲು ಸಜ್ಜಾಗಿದೆ. 26 ಹೆಲಿಕಾಪ್ಟರ್‌ಗಳನ್ನು ತುರ್ತುಪರಿಸ್ಥಿತಿಗಾಗಿ ಮೀಸಲಿರಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ಪ್ರಕಾರ ಯಾಸ್ ಚಂಡಮಾರುತ ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿ ಪ್ರದೇಶಕ್ಕೆ ಮೇ 26ರಂದು ಅಪ್ಪಳಿಸುವ ಸಾಧ್ಯತೆಯಿದೆ.
ಇನ್ನು ಹವಾಮಾನ ಇಲಾಖೆ ಇಂದು ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದ್ದು ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಫೋರ್ಟ್‌ಬ್ಲೇರ್‌ನಿಂದ 600 ಕಿಮೀ ದೂರದಲ್ಲಿ ಭಾರೀ ಒತ್ತಡದೊಂದಿಗೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಮುಂದಿನ 24 ಗಂಟೆಯಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications