Cyclone Fengal: ತಮಿಳುನಾಡಿನಲ್ಲಿ ರೈತರ ಕಣ್ಣಲ್ಲಿ ನೀರು ತರಿಸಿದ ಫೆಂಗಲ್ ಚಂಡಮಾರುತ!
ಫೆಂಗಲ್ ಚಂಡಮಾರುತ ತಮಿಳುನಾಡಿನಲ್ಲಿ ಅಪಾರ ಹಾನಿಯನ್ನುಂಟು ಮಾಡಿದೆ. ಮಳೆ ಹಾಗೂ ಗಾಳಿಯ ತೀವ್ರತೆಗೆ ಕಷ್ಟಪಟ್ಟು ಬೆಳೆದ ಬೆಳೆ ನೆಲಕ್ಕಚ್ಚಿದ್ದು ರೈತರು ಕಂಗಾಲಾಗಿದ್ದಾರೆ. ಇದರಿಂದಾಗಿ ಬೆಳೆ ಪರಿಹಾರಕ್ಕೆ ಅನ್ನದಾತರು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹೌದು... ಕಳೆದ ದಿನ ಫೆಂಗಲ್ ಚಂಡಮಾರುತ ಅರ್ಭಟಕ್ಕೆ ಸಾಕಷ್ಟು ಹಾನಿ ಸಂಭವಿಸಿದೆ. ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗೆ ಉರುಳಿವೆ. ಇದರಿಂದ ಜನ ಕತ್ತಲಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಫೆಂಗಲ್ ಚಂಡಮಾರುತದ ಪ್ರಭಾವ ಮುಂದಿನ ಎರಡು ಮೂರು ದಿನಗಳ ಕಾಲ ಮುಂದುವರೆಯಲಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

ಬೆಳೆ ನಾಶ
ನೈಋತ್ಯ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ರಾಮನಾಥಪುರಂನಲ್ಲಿರುವ ಪಂಬನ್ ಬಂದರಿನಲ್ಲಿ ಬುಧವಾರ ಬಲವಾದ ಗಾಳಿ ಬೀಸಿದೆ. ಇದರಿಂದಾಗಿ ತಿರುವರೂರ್, ತಿರುತುರೈಪೂಂಡಿ, ಮುತ್ತುಪೆಟ್ಟೈ, ಮೈಲಾಡುತುರೈ ಮತ್ತು ವೇದಾರಣ್ಯಂ ಸೇರಿದಂತೆ ಅನೇಕ ಸ್ಥಳಗಳಲ್ಲಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ರೈತರ ಅಂದಾಜಿನ ಪ್ರಕಾರ ಕನಿಷ್ಠ 2,000 ಎಕರೆಗಳಲ್ಲಿನ ಬೆಳೆ ಹಾನಿಗೊಳಗಾಗಿದೆ. ಇದರಿಂದಾಗಿ ಸರ್ಕಾರ ಬೆಳೆ ಪರಿಹಾರ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಫೆಂಗಲ್ ಚಂಡಮಾರುತದ ಸದ್ಯದ ಸ್ಥಿತಿಗತಿ
ಫೆಂಗಲ್ ಚಂಡಮಾರುತ ಮುಂದಿನ 12 ಗಂಟೆಗಳಲ್ಲಿ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ತಿಳಿಸಿದೆ. ಇದರಿಂದ ಮುಂದಿನ ಮೂರು ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಯಾನಂ, ಕರಾವಳಿ ಆಂಧ್ರಪ್ರದೇಶ ಮತ್ತು ಕಾರೈಕಲ್‌ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ಆಳವಾದ ಖಿನ್ನತೆಯು ವಾಯುವ್ಯಕ್ಕೆ ಚಲಿಸುವಾಗ ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುತ್ತದೆ. ಇದು ನವೆಂಬರ್ 30ರ ಬೆಳಿಗ್ಗೆ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯನ್ನು ದಾಟಲಿದ್ದು ಈ ವೇಳೆ ಗಾಳಿಯ ವೇಗ ಗಂಟೆಗೆ 50-60 ಕಿ.ಮೀ ನಿಂದ 70 ಕಿ.ಮೀ ವರೆಗೆ ಇರುತ್ತದೆ. ಫೆಂಗಲ್ ಚಂಡಮಾರುತದಿಂದಾಗಿ ಭಾರೀ ಮಳೆಯಾಗಲಿದ್ದು ಇಂದೂ ಕೂಡ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಕೇಂದ್ರಾಡಳಿತ ಪ್ರದೇಶದ ಶಿಕ್ಷಣ ಸಚಿವ ಅರುಮುಗಂ ನಮಸ್ಶಿವಾಯಂ ನಿರ್ದೇಶನ ನೀಡಿದ್ದಾರೆ.
ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ
ವರದಿಗಳ ಪ್ರಕಾರ ಪುದುಚೇರಿಯ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಇರಲಿದೆ. ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾದರೆ, ವಿಲ್ಲುಪುರಂ, ಕಡಲೂರು ಜಿಲ್ಲೆಗಳು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಹೀಗಾಗಿ ಇಂದೂ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇಂದು ಚೆನ್ನೈ ಹವಾಮಾನ:
ಜೊತೆಗೆ ಚೆನ್ನೈನಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು ಮುಂದಿನ ಕೆಲವು ಗಂಟೆಗಳಲ್ಲಿ ಗಂಟೆಗೆ 3 ಕಿ.ಮೀ ವೇಗದಲ್ಲಿ ಕ್ರಮೇಣ ವಾಯುವ್ಯಕ್ಕೆ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದರಿಂದಾಗಿ ಮುಂದಿನ 12 ಗಂಟೆಗಳಲ್ಲಿ ಇದು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇದ್ದು ಉತ್ತರ-ವಾಯುವ್ಯದ ಕಡೆಗೆ ಚಲಿಸುವುದನ್ನು ಮುಂದುವರೆಸುತ್ತದೆ. ಈ ವೇಳೆ ಬಲವಾದ ಗಾಳಿ ಬೀಸಲಿದ್ದು ಮಳೆ ಕೂಡ ಧಾರಾಕಾರವಾಗಿ ಸುರಿಯಲಿದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸೂಚನೆ ನೀಡಿದೆ. ಅಲ್ಲದೆ ಇದು ನವೆಂಬರ್ 30ರ ಬೆಳಿಗ್ಗೆ ಆಳವಾದ ಖಿನ್ನತೆಯಾಗಿ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯ ಬಳಿ ಭೂಕುಸಿತವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಆರ್‌ಎಂಸಿ ಚೆನ್ನೈ ಪ್ರಕಾರ, ಕಾಂಚೀಪುರಂ, ಚೆಂಗಲ್‌ಪಟ್ಟು, ವಿಲ್ಲುಪುರಂ ಮತ್ತು ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚೆನ್ನೈ, ತಿರುವಳ್ಳೂರು, ರಾಣಿಪೇಟ್, ತಿರುವಣ್ಣಾಮಲೈ, ಕಲ್ಲಕುರಿಚಿ, ಪೆರಂಬಲೂರ್, ಅರಿಯಲೂರ್, ಪುದುಕ್ಕೊಟ್ಟೈ, ತಂಜಾವೂರು, ತಿರುವಾರೂರ್, ನಾಗಪಟ್ಟಣಂ ಮತ್ತು ಮೈಲಾಡುತುರೈ ಮತ್ತು ಕಾರೈಕಾಲ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಎಚ್ಚರಿಕೆ ನೀಡಿದೆ. ಹೀಗಾಗಿ ಇಂದೂ ಕೂಡ ಚೆನ್ನೈ, ಕಾಂಚೀಪುರಂ, ಚೆಂಗಲ್ಪೇಟ್, ಅರಿಯಲೂರ್, ಶಿವಗಂಗೈ ಮತ್ತು ಪುದುಕೊಟ್ಟೈನಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ.












Click it and Unblock the Notifications