ಗುಜರಾತ್ ಕರಾವಳಿಗೆ ಬಂದೇ ಬಿಡ್ತು ಡೆಡ್ಲಿ ಸೈಕ್ಲೋನ್ ‘ಬಿಪರ್‌ಜಾಯ್’!
ಅಹಮದಾಬಾದ್: ನೋಡ ನೋಡುತ್ತಿದ್ದಂತೆ ಡೆಡ್ಲಿ ಸೈಕ್ಲೋನ್ 'ಬಿಪರ್‌ಜಾಯ್' ನುಗ್ಗಿ ಬಂದಿದೆ. ಇನ್ನೇನು ಕೆಲವೇ ನಿಮಿಷದಲ್ಲಿ ಗುಜರಾತ್ ಕರಾವಳಿಗೆ ಬಂದು ಅಪ್ಪಳಿಸಲಿದೆ ಈ ಚಂಡಮಾರುತ. ಇದೀಗ ಈ ಸೈಕ್ಲೋನ್ ಗುಜರಾತ್ ಕರಾವಳಿಯಿಂದ ಕೇವಲ 100 ಕಿಲೋ ಮೀಟರ್ ದೂರದಲ್ಲಿದೆ ಎಂದಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಇದರ ಜೊತೆಗೆ ಮತ್ತೊಂದು ಮುನ್ನೆಚ್ಚರಿಕೆ ನೀಡಲಾಗಿದೆ!
ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡಿರುವ ಭೀಕರ ಚಂಡಮಾರುತಗಳ ಪೈಕಿ ಬಿಪರ್‌ಜಾಯ್ ಕೂಡ ಒಂದು. ಅದರಲ್ಲೂ ಅರಬ್ಬಿ ಸಮುದ್ರವನ್ನೇ ಅಲ್ಲಾಡಿಸಿರುವ ಈ ಚಂಡಮಾರುತ, ಗುಜರಾತ್‌ನಲ್ಲಿ ವಿನಾಶ ಸೃಷ್ಟಿಸುವುದು ಬಹುತೇಕ ಗ್ಯಾರಂಟಿ. ಮಾಂಡವಿ & ಕರಾಚಿ ಮಧ್ಯೆ ಬಿಪರ್‌ಜಾಯ್ ಸೈಕ್ಲೋನ್ ಅಪ್ಪಳಿಸಲಿದೆ. ಹೀಗಾಗಿ ಮುಂದಿನ 24 ಗಂಟೆ ಕಾಲ ಗುಜರಾತ್ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಭೀಕರ ಮಳೆ ಪಕ್ಕಾ ಎನ್ನಲಾಗಿದೆ. ಹಾಗೇ ಸೌರಾಷ್ಟ್ರದ ಕಚ್ಛ್ ಭಾಗದಲ್ಲಿ ಭಾರಿ ಮಳೆಯಿಂದ ಪ್ರವಾಹದ ಭೀತಿ ಕೂಡ ಎದುರಾಗಿದೆ. ಈ ನಡುವೆ ಗುಜರಾತ್ ಕರಾವಳಿಯಲ್ಲಿ ಒಂದೊಂದೇ ಮನೆಗಳು ಕುಸಿದು ಬೀಳುತ್ತಿವೆ.

ಮನೆ ಕಳೆದುಕೊಂಡು ಬೀದಿಗೆ ಬಿದ್ದ ಜನ
ಮೊದಲೇ ಚಂಡಮಾರತ ಭೀತಿಯಲ್ಲಿ ಬೆಚ್ಚಿರುವ ಜನರಿಗೆ ಭೂಕುಸಿತ ಶಾಕ್ ಕೊಡುತ್ತಿದೆ. ಹೀಗಾಗಿ ಕಚ್ಛ್ ಕಡಲ ತೀರದಿಂದ 10 ಕಿಲೋ ಮೀಟರ್ ಪ್ರದೇಶಗಳಲ್ಲಿ 74,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ಒಟ್ಟು 120 ಹಳ್ಳಿಗಳ ಜನರು ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಕೆಲವೇ ಕಿಲೋ ಮೀಟರ್ ದೂರದಲ್ಲಿ ಇರುವ ಚಂಡಮಾರುತ ಇನ್ನೇನು 5 ಗಂಟೆ ಒಳಗೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ. ಆಗ ಗಾಳಿ ವೇಗ ಗಂಟೆಗೆ ಗರಿಷ್ಠ 150 ಕಿಲೋಮೀಟರ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜನರು ಹೊರಗಡೆ ಬಾರದಂತೆ ಸೂಚಿಸಲಾಗಿದೆ. ಈಗಾಗಲೇ ಹತ್ತಾರು ಮನೆ ಕುಸಿದಿದ್ದು, ಕುಟುಂಬಗಳು ಬೀದಿಗೆ ಬಿದ್ದಿವೆ.
ಸನ್ನದ್ಧವಾಗಿ ನಿಂತ ರಕ್ಷಣಾ ಪಡೆ!
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು ಸಂಜೆ ಹೊತ್ತಿಗೆಲ್ಲಾ 'ಬಿಪರ್‌ಜಾಯ್' ಚಂಡಮಾರುತ ಗುಜರಾತ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಎನ್‌ಡಿಆರ್‌ಎಫ್‌ನ 18, ಎಸ್‌ಡಿಆರ್‌ಎಫ್‌ನ 13 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 45,000 ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರದ ಬಳಿ ಯಾರನ್ನೂ ಬಿಡುತ್ತಿಲ್ಲ. ಗುಜರಾತ್ ಮಾತ್ರವಲ್ಲದೆ ಅರಬ್ಬಿ ಸಮುದ್ರದ ಕರಾವಳಿಯ ಹಲವು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇರಲಿದೆ. ಹೀಗಾಗಿ ಮುಂದಿನ ಕೆಲವು ದಿನಗಳ ಕಾಲ ಸಮುದ್ರದ ಬಳಿ ಯಾರೂ ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ.

ಅಗತ್ಯವಿದ್ದರೆ ಸೇನೆ ಕೂಡ ಎಂಟ್ರಿ
ತವರು ರಾಜ್ಯಕ್ಕೆ ಭೀಕರ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಪಿಎಂ ಮೋದಿ & ಅಮಿತ್ ಶಾ ಕೂಡ ಸೂಕ್ಷ್ಮವಾಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ಕೇಂದ್ರದ ಪಿಎಂ ಮೋದಿ ಸರ್ಕಾರ ಈಗಾಗಲೇ ಗುಜರಾತ್ ಜನರಿಗೆ ಪೂರ್ಣ ನೆರವು ನೀಡಲು ಸಜ್ಜಾಗಿದೆ. ಸಾವಿರಾರು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ನೇಮಕವಾಗಿದ್ದಾರೆ. ಅಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಸೇನಾ ಪಡೆ ಕರೆಸಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಬಗ್ಗೆ ನಿನ್ನೆಯೇ ಮಾಹಿತಿ ನೀಡಿದ್ದರು.
ಹೀಗೆ ಭೀಕರ ಪ್ರಾಕೃತಿಕ ವಿಕೋಪ ಎದುರಿಸಲು ಗುಜರಾತ್ ಸನ್ನದ್ಧವಾಗಿದೆ. ಇನ್ನೇನು ಕೆಲ ಗಂಟೆಗಳಲ್ಲಿ ಎಲ್ಲಾ ಸಂಕಷ್ಟಗಳು ಮುಗಿದು ಹೋಗಲಿವೆ. ಇಂದು ರಾತ್ರಿಯ ವೇಳೆ ಡೆಡ್ಲಿ ಚಂಡಮಾರುತ 'ಬಿಪರ್‌ಜಾಯ್' ಅಬ್ಬರ ತಗ್ಗುವ ನಿರೀಕ್ಷೆ ಇದೆ. ಹೀಗಾಗಿ ಜನರು ಕೂಡ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಆದರೆ ಗುಜರಾತ್ ಕರಾವಳಿ ಭಾಗದ ಜನರಲ್ಲಿ ಈ ಪರಿಸ್ಥಿತಿ ಭೀತಿ ಹುಟ್ಟುಹಾಕಿದೆ. ಈ ಕಾರಣಕ್ಕೆ ಸರ್ಕಾರ ಕೂಡ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇದ್ದು, ಚಂಡಮಾರುತ ಅಪ್ಪಳಿಸಿದ ತಕ್ಷಣ ಕಾರ್ಯಾಚರಣೆ ಶುರುವಾಗಲಿದೆ.












Click it and Unblock the Notifications