ಲಸಿಕೆ ಬಗ್ಗೆ ಪ್ರಶಾಂತ್ ಭೂಷಣ್ ಟ್ವೀಟ್, ಎನ್. ಕೆ. ಅರೋರಾ ಸ್ಪಷ್ಟನೆಗಳು
ನವದೆಹಲಿ, ಜೂನ್ 28; " ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. 32 ಕೋಟಿ ಜನರು ಭಾರತದ ಲಸಿಕೆ ಅಭಿಯಾನದಲ್ಲಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ" ಎಂದು ಕೊರೊನಾ ವೈರಸ್ ಕಾರ್ಯಪಡೆ ಮುಖ್ಯಸ್ಥ ಡಾ. ಎನ್. ಕೆ. ಅರೋರಾ ಹೇಳಿದ್ದಾರೆ.
ಸೋಮವಾರ ಸರಣಿ ಟ್ವೀಟ್‌ಗಳ ಮೂಲಕ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಕೋವಿಡ್ ಲಸಿಕೆಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಗಳ ಬಗ್ಗೆ ಪ್ರಶ್ನೆ ಮಾಡಿದ್ದರು.
ಪ್ರಶಾಂತ್ ಭೂಷಣ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಡಾ. ಎನ್. ಕೆ. ಅರೋರಾ, "ಸರ್ಕಾರ ಲಸಿಕೆ ತೆಗೆದುಕೊಳ್ಳಲು ಇರುವ ಹಿಂಜರಿಕೆಯನ್ನು ಕಡಿಮೆ ಮಾಡಲು ಪ್ರಯತ್ನ ಪಡುತ್ತಿರುವಾಗ ಪ್ರಶಾಂತ್ ಭೂಷಣ್ ಹೇಳಿಕೆಗಳು ಸಮಯ ಸಾಧುವಲ್ಲ" ಎಂದು ಹೇಳಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಪ್ರಶಾಂತ್ ಭೂಷಣ್, ಭಾರತದಲ್ಲಿ ತುರ್ತು ಬಳಕೆಗಾಗಿ ಒಪ್ಪಿಗೆ ನೀಡಲಾಗಿರುವ ಕೋವಿಡ್ ವಿರುದ್ಧದ ಲಸಿಕೆಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಪ್ರಶ್ನೆ ಮಾಡಿದ್ದರು. ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಉಲ್ಲೇಶಿಸಿ ಟ್ವೀಟ್ ಮಾಡಿದ್ದರು.
ಪ್ರಶಾಂತ್ ಭೂಷಣ್, "ಕೋವಿಡ್‌ನಿಂದ ಗುಣಮುಖಗೊಂಡ ಯುವಕರಲ್ಲಿ ನೈಸರ್ಗಿಕವಾಗಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಲಸಿಕೆ ನೀಡುವುದಕ್ಕಿಂತ ಹೆಚ್ಚಿನದನ್ನು ಅದು ಹೊಂದಿರುತ್ತದೆ. ಲಸಿಕೆ ನೈಸರ್ಗಿಕ ರೋಗನಿರೋಧಕ ಶಕ್ತಿಯಯೊಂದಿಗೆ ಹೊಂದಾಣಿಕೆ ಮಾಡಬಹುದು" ಎಂದು ಹೇಳಿದ್ದರು.
"ಲಸಿಕೆ ಹಿಂಜರಿತದ ಬಗ್ಗೆ ಮಾತನಾಡುವುದಕ್ಕೆ ಹಲವಾರು ಜನರು ಸ್ನೇಹಿತರು, ಕುಟುಂಬ ಸದಸ್ಯರು ನನ್ನನ್ನು ಆರೋಪಿಯಂತೆ ನೋಡುತ್ತಿದ್ದಾರೆ. ನಾನು ನನ್ನ ವಾದವರನ್ನು ಸ್ಪಷ್ಟಪಡಿಸುತ್ತೇನೆ. ನಾನು ಲಸಿಕೆ ವಿರೋಧಿಯಲ್ಲ. ಆದರೆ ಪರೀಕ್ಷೆಗೆ ಒಳಪಡದ, ಯುವಕರು ಮತ್ತು ಕೋವಿಡ್‌ನಿಂದ ಗುಣಮುಖಗೊಂಡವರ ಮೇಲೆ ಪ್ರಯೋಗ ಮಾಡದ ಲಸಿಕೆ ಬಗ್ಗೆ ಪ್ರಚಾರ ಮಾಡುವುದು ಬೇಜವಾಬ್ದಾರಿ" ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು.
"ಸರ್ಕಾರದಿಂದ ಯಾರೂ ನಮ್ಮನ್ನು ಭೇಟಿ ಮಾಡಲು ಅಥವಾ ನನ್ನ ಹೆಂಡತಿಯ ಸಾವಿನ ಬಗ್ಗೆ ತನಿಖೆ ನಡೆಸಲು ಆದೇಶಿಸಿಲ್ಲ. ಲಸಿಕೆ ತೆಗೆದುಕೊಳ್ಳಲು ಹೆಂಡತಿಗೆ ಹೇಳಿದ್ದಕ್ಕಾಗಿ ನಾನು ಈಗಲೂ ಶಾಪ ಹಾಕಿಕೊಳ್ಳುತ್ತೇನೆ. ಲಸಿಕೆ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎಂದು ಭಾವಿಸಿದೆ. ಆದರೆ ಅದು ಅವಳನ್ನು ಕೊಂದಿತು. ಸರ್ಕಾರ ಲಸಿಕೆ ಅಡ್ಡ ಪರಿಣಾಮಗಳನ್ನು ಮೇಲ್ವಿಚಾರಣೆ ನಡೆಸುತ್ತಿಲ್ಲ. ದತ್ತಾಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ" ಎಂದು ಪ್ರಶಾಂತ್ ಭೂಷಣ್ ಟ್ವೀಟ್‌ನಲ್ಲಿ ಪತ್ರಿಕಾ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಜೂನ್ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದರು. ಅದರಲ್ಲಿ ಕೋವಿಡ್ ಲಸಿಕೆ ಬಗ್ಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದರು. "ಲಸಿಕೆ ಸುರಕ್ಷಿತವಾಗಿದೆ. ನನ್ನ ತಾಯಿ ಸಹ ಲಸಿಕೆ ಪಡೆದಿದ್ದಾರೆ. ವಿಜ್ಞಾನಿಗಳ ಶ್ರಮದ ಮೇಲೆ ನಂಬಿಕೆ ಇಡಿ, ಲಸಿಕೆ ಪಡೆಯಿರಿ" ಎಂದು ಕರೆ ನೀಡಿದ್ದರು.
"ದೊಡ್ಡ ವಿಜ್ಞಾನಿಗಳು ವರ್ಷವಿಡೀ, ಹಗಲಿರುಳು ಕೆಲಸ ಮಾಡಿದ್ದಾರೆ ಆದ್ದರಿಂದ ನಾವು ಅವರ ಮೇಲೆ ಭರವಸೆ ಇಡಬೇಕು ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಜನರಿಗೆ ಪದೇ ಪದೇ ಬುದ್ಧಿ ಹೇಳಬೇಕು" ಎಂದು ದೇಶದ ಜನರಿಗೆ ಕರೆಯನ್ನು ಕೊಟ್ಟಿದ್ದರು.
ಆದರೆ ಸೋಮವಾರ ಪ್ರಶಾಂತ್ ಭೂಷಣ್ ಕೋವಿಡ್ ಲಸಿಕೆಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಗಳ ಬಗ್ಗೆ ಪ್ರಶ್ನೆ ಮಾಡಿದ್ದರು. ಡಾ. ಎನ್. ಕೆ. ಅರೋರಾ ಪ್ರಶಾಂತ್ ಭೂಷಣ್ ಟ್ವೀಟ್‌ಗಳಿಗೆ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
A lot of people including friends & family have accused me of promoting Vaccine hesitancy, let me clarify my position.
— Prashant Bhushan (@pbhushan1) June 28, 2021
I am not anti Vaccine per se. But I believe it is irresponsible to promote universal vaccination of experimental&untested vaccines esp to young & Covid recovered https://t.co/SVHwgyZcvU
"ಕೇಂದ್ರ ಸರ್ಕಾರ ದೇಶದಲ್ಲಿ ಲಸಿಕೆ ಪಡೆದ ನಂತರ ಉಂಟಾಗುವ ಅಡ್ಡಪರಿಣಾಮಗಳ ಕುರಿತು ಪರಿಶೀಲಿಸಲು ರೋಗನಿರೋಧಕತೆ ಹೆಚ್ಚಳದ ನಂತರ ಸಂಭವಿಸುವ ಘಟನೆ (ಎಇಎಫ್ಐ) ಎಂಬ ವ್ಯವಸ್ಥೆಯನ್ನು ಹೊಂದಿದೆ. ದೇಶದ 700 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಕಾರ್ಯ ನಿರ್ವಹಣೆ ಮಾಡುತ್ತಿದೆ" ಎಂದುದ ಡಾ. ಎನ್. ಕೆ. ಅರೋರಾ ಹೇಳಿದ್ದಾರೆ.
"ಕೋವಿಡ್ ಲಸಿಕೆ ಪಡೆದ ನಂತರ ಉಂಟಾದ ಸಾವಿನ ಮಾಹಿತಿಯನ್ನು ಸಹ ಸಾರ್ವಜನಿಕವಾಗಿ ನೀಡಲಾಗಿದೆ. ಅಡ್ಡ ಪರಿಣಾಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರವೇ ತನಿಖೆ ನಡೆಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಮೊದಲ ಡೋಸ್ ಕೋವಿಡ್ ಲಸಿಕೆ ಪಡೆ ಕೆಲವು ಗಂಟೆಗಳಲ್ಲಿ ಕೆಲವರಿಗೆ ನೋವು, ಜ್ವರ ಕಾಣಿಸಿಕೊಳ್ಳಬಹುದು. ಆದರೆ ಇದರ ಬಗ್ಗೆ ಚಿಂತೆ ಮಾಡಬೇಕಿಲ್ಲ" ಎಂದು ಡಾ. ಎನ್. ಕೆ. ಆರೋರಾ ಹೇಳಿದ್ದಾರೆ.
"ಯಾವುದೇ ಹಿಂಜರಿಕೆ ಇಲ್ಲದೆ ಕೋವಿಡ್ ಲಸಿಕೆ ಪಡೆಯಿರಿ. ಲಸಿಕೆ ಪಡೆಯುವುದರಿಂದ ಐಸಿಯುಗೆ ದಾಖಲಾಗುವುದು, ಆಸ್ಪತ್ರೆ ಸೇರುವುದು ಮತ್ತು ಸೋಂಕಿನಿಂದ ಉಂಟಾಗುವ ಸಾವಿನಿಂದ ಸುರಕ್ಷಿತವಾಗಬಹುದು" ಎಂದು ತಿಳಿಸಿದ್ದಾರೆ.












Click it and Unblock the Notifications