ಏಪ್ರಿಲ್ 10ರಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್
ನವದೆಹಲಿ, ಏಪ್ರಿಲ್ 8: ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿರಿಸಲಾಗಿದೆ. ದೇಶದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 10 ರಿಂದ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಘೋಷಿಸಿದೆ.
ಇದರ ಮಧ್ಯೆ ಸರ್ಕಾರಿ ಲಸಿಕೆ ಕೇಂದ್ರಗಳ ಮೂಲಕ ಮೊದಲ ಮತ್ತು ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್‌ಗಳಿಗೆ ಲಸಿಕೆಯನ್ನು ವಿತರಿಸುವ ಕಾರ್ಯಕ್ರಮ ಮುಂದುವರಿಯಲಿದೆ. ದೇಶದಲ್ಲಿ 15 ವರ್ಷ ಮೇಲ್ಪಟ್ಟವರಲ್ಲಿ ಶೇ.96ರಷ್ಟು ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ 15 ವರ್ಷ ಮೇಲ್ಪಟ್ಟ ಶೇ.83ರಷ್ಟು ಫಲಾನುಭವಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿದೆ. ಕೊವಿಡ್-19 ಲಸಿಕೆ ವಿತರಣೆ ಪ್ರಾರಂಭವಾಗಿ 447 ದಿನಗಳೇ ಕಡೆದಿದ್ದು, ಇದುವರೆಗೂ 185 ಕೋಟಿ ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

14 ಲಕ್ಷ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 447 ದಿನಗಳಾಗಿವೆ. ಇದುವರೆಗೂ 185,36,60,641 ಡೋಸ್ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರ ರಾತ್ರಿ 7 ಗಂಟೆ ವೇಳೆಗೆ 14,53,719 ಡೋಸ್ ಲಸಿಕೆ ನೀಡಲಾಗಿದೆ. 12 ರಿಂದ 14 ವರ್ಷದ ಮಕ್ಕಳಿಗೆ 2,10,42,592 ಡೋಸ್ ಲಸಿಕೆ ಹಾಗೂ 2,40,42,041 ಬೂಸ್ಟರ್ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.

ದೇಶದಲ್ಲಿ ಒಂದು ದಿನದಲ್ಲಿ ಯಾರಿಗೆಷ್ಟು ಲಸಿಕೆ?
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಯ ವೇಗವನ್ನು ಕಾಯ್ದುಕೊಳ್ಳಲಾಗುತ್ತಿದೆ. ಮೊದಲ ಡೋಸ್, ಎರಡನೇ ಡೋಸ್ ಜೊತೆಗೆ ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಅನ್ನು ವಿತರಣೆ ಮಾಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 650851 ಮಂದಿಗೆ ಮೊದಲ ಡೋಸ್, 668814 ಮಂದಿಗೆ ಎರಡನೇ ಡೋಸ್ ಹಾಗೂ 134054 ಜನರಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗಿದೆ. ಒಟ್ಟು 1453719 ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ.

ದೇಶದಲ್ಲಿ ಈವರೆಗೂ ಎಷ್ಟು ಜನರಿಗೆ ಲಸಿಕೆ ವಿತರಣೆ?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗುತ್ತಿರುವುದರ ಮಧ್ಯೆ ಲಸಿಕೆ ವಿತರಣೆ ವೇಗ ಹೆಚ್ಚಿಸಲಾಗಿದೆ. ದೇಶದಲ್ಲಿ ಇದುವರೆಗೂ 185,36,60,641 ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಈ ನಡುವೆ 99,19,34,228 ಮಂದಿಗೆ ಮೊದಲ ಡೋಸ್, 83,76,84,372 ಜನರಿಗೆ ಎರಡನೇ ಡೋಸ್ ಹಾಗೂ 2,40,42,041 ಬೂಸ್ಟರ್ ಡೋಸ್ ವಿತರಣೆ ಮಾಡಲಾಗಿದೆ.

ದೇಶದಲ್ಲಿ ಒಂದೇ ದಿನ 1,109 ಮಂದಿಗೆ ಕೊವಿಡ್
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ತಗ್ಗಿದೆ. ಭಾರತದಲ್ಲಿ ಒಂದು ದಿನದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದು ಸಾವಿರಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,109 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 44 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 1,213 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,033,067ಕ್ಕೆ ಏರಿಕೆಯಾಗಿದೆ. ಈ ಪೈಕಿ 42,500,002 ಸೋಂಕಿತರು ಗುಣಮುಖರಾಗಿದ್ದರೆ, 521,604 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 11,461 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications