ಕೋಲೇಟು: ಕೊನೆಗೂ ತನಿಖೆಗೆ ಒಪ್ಪಿದ್ರಪ್ಪಾ ಪ್ರಧಾನಿ ಸಿಂಗ್
ನವದೆಹಲಿ, ಅ. 25: ದಿವ್ಯ ಮೌನಿ ಎಂದೇ ಹೆಸರಾದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಚೀನಾದಲ್ಲಿ ಜ್ಞಾನೋದಯವಾದಂತಿದೆ. ಚೀನಾ ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ವೇಳೆ ತಮ್ಮ ದೇಶದ ಕಾನೂನು ಬಗ್ಗೆ ಅರಿವಾದಂತಿರುವ ಪ್ರಧಾನಿ ಸಿಂಗ್ ಅವರು ತಾನು ನೆಲದ ಕಾನೂನಿಗಿಂತ ದೊಡ್ಡವನಲ್ಲ. ಸಿಬಿಐ ಅಥವಾ ಸಂಬಂಧಪಟ್ಟ ಯಾರಾದೂ, ತನ್ನನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ತನಿಖೆಗೆ ಆಹ್ವಾನಿಸಿದ್ದಾರೆ.
ಯುಪಿಎ-2 ಸರಕಾರವನ್ನು ತೀವ್ರವಾಗಿ ಭಾದಿಸುತ್ತಿರುವ ಸಾವಿರಾರು ಕೋಟಿ ಲೆಕ್ಕಾಚಾರದ ಲಂಚಾವತಾರಗಳ ಪೈಕಿ ಒಂದಾದ ಕಲ್ಲಿದ್ದಲು ಹಗರಣದ ಬಗ್ಗೆ ಬಾಯ್ಬಿಟ್ಟಿರುವ ಡಾ. ಮನಮೋಹನ್ ಸಿಂಗ್ ಅವರು 'ನಾನೇನು ಕಾನೂನಿಗಿಂತ ಅತೀತನಲ್ಲ, ಬಚ್ಚಿಟ್ಟುಕೊಳ್ಳುವುದು ಏನೂ ಇಲ್ಲ, ಕಲ್ಲಿದ್ದಲು ಹಗರಣ ಸಂಬಂಧ ಬೇಕಾದರೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ' ಎಂದು ಹೇಳಿಕೆ ನೀಡಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿ ಬಂದ ಬಳಿಕ ಪ್ರಧಾನಿ ನೀಡುತ್ತಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.

ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಮತ್ತು ಕಲ್ಲಿದ್ದಲು ಇಲಾಖೆಯ ನಿವೃತ್ತ ಕಾರ್ಯದರ್ಶಿ ಪಿಸಿ ಪಾರಖ್ ವಿರುದ್ಧ ಎಫ್ ಐಆರ್ ದಾಖಲಿಸಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪಾರಖ್, ಒಂದು ವೇಳೆ ನಾನು ಆರೋಪಿಯಾಗಿದ್ದರೆ, ಕಡತಗಳಿಗೆ ಸಹಿ ಹಾಕಿದ ಪ್ರಧಾನಿ ಕೂಡಾ ಆರೋಪಿಯೇ ಅಲ್ವಾ ಎಂದಿದ್ದರು. ಅವರ ಈ ಹೇಳಿಕೆ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು.
ಪ್ರಧಾನಿ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿಯವರನ್ನೇ ಪ್ರಶ್ನಿಸುವ ಅಧಿಕಾರ ಸಿಬಿಐಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್ ಇದನ್ನು ಕೋರ್ಟ್ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಗಮನಾರ್ಹವೆಂದರೆ ಒಡಿಶಾದಲ್ಲಿ ಗಣಿ ಗುತ್ತಿಗೆಯನ್ನು ಸರ್ಕಾರಿ ಕಂಪನಿಗೆ ಬದಲಾಗಿ ಕುಮಾರ ಮಂಗಲಂ ಬಿರ್ಲಾ ಒಡೆತನದ ಹಿಂಡಾಲ್ಕೋ ಕಂಪನಿಗೆ ನೀಡಿದ ವಿಚಾರದ ಬಗ್ಗೆ ಇತ್ತೀಚೆಗಷ್ಟೇ ಪ್ರತಿಕ್ರಿಯಿಸಿದ್ದ ಪ್ರಧಾನಿ ಕಾರ್ಯಾಲಯ ಅದರಲ್ಲಿ PMOದ್ದೇನೂ ತಪ್ಪಿಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ಸಮರ್ಥಿಸಿತ್ತು. ಹಗರಣದ ನಡೆದ ಅವಧಿಯಲ್ಲಿ ಪ್ರಧಾನಿ ಸಿಂಗ್ ಅವರೇ ಕಲ್ಲಿದ್ದಲು ಸಚಿವಾಲಯದ ಉಸ್ತುವಾರಿ ಹೊತ್ತಿದ್ದರು.
ಮೋದಿ ಮುಂದೆ ಕಾಂಗ್ರೆಸ್ಸೇನೂ ಮಂಕಾಗಿಲ್ಲ: ಯಪಿಎ-2 ಅವಧಿಯಲ್ಲಿ ಆದ ಅನೇಕ ಹಗರಣಗಳಿಂದ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುತ್ತಿದೆ ಹಾಗೂ ಕಾಂಗ್ರೆಸ್ ಚುನಾವಣೆ ಪ್ರಚಾರ ಮಂಕಾಗಿದೆ ಎಂಬುದನ್ನು ಸಿಂಗ್ ಇದೇ ವೇಳೆ ನಿರಾಕರಿಸಿದರು.












Click it and Unblock the Notifications