ಮನೆ ಕೆಲಸದಾಕೆಯ ಸೇವಿಂಗ್ಸ್ ಸಿಸ್ಟಮ್‌ಗೆ ದಂಗಾದ ಕಾರ್ಪೊರೇಟ್ ಉದ್ಯೋಗಿ: ಆಕೆಯ ಗಳಿಕೆ ಉಳಿಕೆಯ ಶಿಷ್ಟಾಚಾರಕ್ಕೆ ಫುಲ್ ಫಿದಾ
ಎಲ್ಲರಿಗೂ ಹಣ ಮಾಡಬೇಕು, ಗಳಿಸುವ ಹಣವನ್ನು ಉಳಿಸಬೇಕು. ಆದರೆ ಹೇಗೆ? ಅದೇ ಗೊತ್ತಿರುವುದಿಲ್ಲ. ಹಣ ಉಳಿಸಬೇಕು, ಗಳಿಸಬೇಕು ಎಂದು ಬರೀ ಮಾತಿನಲ್ಲೇ ಕಾಲ ಕಳೆದರೆ ಏನು ಪ್ರಯೋಜನ? ಇದಕ್ಕಾಗಿ ಬಜೆಟ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತೇವೆ, ಹೂಡಿಕೆ ಪಾಡ್‌ಕ್ಯಾಸ್ಟ್‌ಗಳನ್ನು ನೋಡುತ್ತೇವೆ, ಫೈನಾನ್ಸ್ ಪುಸ್ತಕಗಳನ್ನು ಓದುತ್ತೇವೆ. ಇವೆಲ್ಲದರ ಮೂಲಕ ಹೆಚ್ಚು ಉಳಿಸುವುದು ಮತ್ತು ಕಡಿಮೆ ಖರ್ಚು ಮಾಡುವುದು ಹೇಗೆ ಎಂಬುದರ ಕುರಿತು ಲೆಕ್ಕಕ್ಕೆ ಸಿಗದಷ್ಟು ಸಲಹೆ ತಗೋತೇವೆ.
ಆದರೆ ಇದರಿಂದ ನೂರಕ್ಕೆ ನೂರರಷ್ಟು ಪ್ರಯೋಜನವಾಗುತ್ತದೆ ಎಂದು ಹೇಳುವುದು ಕಷ್ಟವೇ? ಕೆಲವೊಮ್ಮೆ, ಸುಮ್ಮನೇ ಹೀಗೆಯೇ ಮಾತನಾಡುತ್ತಿರುವಾಗಲೂ ಹಣಕ್ಕೆ ಸಂಬಂಧಿಸಿದ ಕೆಲವೊಂದು ಮುಖ್ಯ ವಿಚಾರಗಳು ಗೊತ್ತಾಗಬಹುದು.

ಮಾರ್ಕೆಟಿಂಗ್ ಉದ್ಯೋಗಿಯ ಪೋಸ್ಟ್ ವೈರಲ್ :
ಗುರುಗ್ರಾಮ್ ಮೂಲದ ಮಾರ್ಕೆಟಿಂಗ್ ಉದ್ಯೋಗಿ ಶಿವ ಮಿತ್ತಲ್ ಅವರು ಅವರ ಮನೆ ಕೆಲಸದಾಕೆಯ ಜೊತೆ ಮಾತಿಗಿಳಿದಾಗ ಆಕೆಯ ಹಣ ಗಳಿಕೆ ಮತ್ತು ಅದರ ನಿರ್ವಹಣೆ ಮಾಡುವ ಪರಿ ನೋಡಿ ದಂಗಾಗಿದ್ದಾರೆ. ಮಿತ್ತಲ್ ಪ್ರಕಾರ, ಅವರ ಮನೆಯ ಕೆಲಸದವರು ಪ್ರತಿದಿನ ಐದರಿಂದ ಆರು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಇದಕ್ಕಾಗಿ ತಿಂಗಳಿಗೆ ಸುಮಾರು 60,000 ರೂ. ಆದಾಯ ಗಳಿಸುತ್ತಾರೆ. ಪ್ರತಿ ತಿಂಗಳು ಮೂರರಿಂದ ನಾಲ್ಕು ದಿನಗಳ ರಜೆ ಬೇರೆ ಇದೆ. ಇಲ್ಲಿ ಅವರಿಗೆ ಕುತೂಹಲ ಅನ್ನಿಸಿದ್ದು ಆಕೆ ಗಳಿಸುವ ಸಂಬಳವೂ ಅಲ್ಲ, ಆಕೆಯ ರಜೆಯೂ ಅಲ್ಲ. ಅವಳು ಪಡೆಯುವ ಸಂಬಳವನ್ನು ಖರ್ಚು ಮಾಡುವ, ಉಳಿತಾಯ ಮಾಡುವ ರೀತಿ. ಈ ಬಗ್ಗೆ ಅವರು ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಕೆಲಸದಾಕೆಯ ಸಿಂಪಲ್ ಲೆಕ್ಕ:
ಮಿತ್ತಲ್ ವಿವರಿಸುವುದನ್ನು ಗಮನಿಸಿದರೆ ಅವರ ಆದ್ಯತೆಗಳು ತುಂಬಾ ಸರಳವಾಗಿದೆ. ಕೆಲಸದಾಕೆ ತಿಂಗಳಿಗೆ 10,000 ರೂ. ಬಾಡಿಗೆ ಕೊಡ್ತಾರೆ. ಮನೆಯ ಖರ್ಚುಗಳನ್ನು ನಿರ್ವಹಿಸುತ್ತಾರೆ. ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ. ಇದರ ಜೊತೆಗೆ ಊರಿನಲ್ಲಿ ಖರೀದಿ ಮಾಡಿರುವ ಜಮೀನಿನ ಇಎಂಐ ಕೂಡಾ ಕಟ್ತಾರೆ. ಈ ಮಹಿಳೆಗೆ ತಾನು ಸಂಪಾದಿಸುವ ಹಣ ಎಲ್ಲಿಗೆ ಎಷ್ಟು ಖರ್ಚು ಆಗಬೇಕು ಎನ್ನುವ ಸ್ಪಷ್ಟತೆ ಇದೆ. ಇದು ಮಿತ್ತಲ್ ಅವರನ್ನು ಆಶ್ಚರ್ಯಗೊಳಿಸಿರುವ ವಿಚಾರವಂತೆ. ಆಕೆಯ ಲೆಕ್ಕಾಚಾರ ತುಂಬಾ ಸಿಂಪಲ್. ನೀವು ಖರ್ಚು ಮಾಡದೇ ಉಳಿಸಿರುವುದು ನಿಮ್ಮ ಸೇವಿಂಗ್ಸ್. ಇದರ ಹಿಂದೆ ದೊಡ್ಡ ದೊಡ್ಡ ಬಜೆಟ್ ಸಿಸ್ಟಮ್ ಇಲ್ಲ. ಸಂಕೀರ್ವಾದ ಇನ್‌ವೆಸ್ಟ್‌ಮೆಂಟ್ ಸ್ಕೀಮ್ ಇಲ್ಲ. ಅವಶ್ಯಕತೆಗಳು ಮತ್ತು ಅವಳ ಮಗಳ ಭವಿಷ್ಯದ ಮೇಲೆ ಗಮನ ಸ್ಪಷ್ಟವಾಗಿದೆಯಷ್ಟೇ.
ಹಣ ಉಳಿಯದಿರಲು ಇರುವ ಮುಖ್ಯ ಕಾರಣ :
ಕಾರ್ಪೊರೇಟ್ ಉದ್ಯೋಗಗಳಲ್ಲಿರುವ ಅನೇಕ ಜನರು ತಮ್ಮ ಸಂಬಳವನ್ನು ನಿರ್ವಹಿಸುವ ವಿಧಾನದೊಂದಿಗೆ ಮಿತ್ತಲ್ ತಮ್ಮ ಕೆಲಸದಾಕೆಯ ವಿಧಾನವನ್ನು ಹೋಲಿಸಿದ್ದಾರೆ. ಕೈ ತುಂಬಾ ಹಣ ಗಳಿಸಿದರೂ ಕಾರಿಗೆ ಹೊಸ ಇಎಂಐ ಸೇರಿಸುವುದು, ಫೋನ್ ಅಪ್‌ಗ್ರೇಡ್ ಮಾಡುವುದು, ಯಾವಾಗಲೂ ಹೊರಗಿನಿಂದ ಫುಡ್ ಆರ್ಡರ್ ಮಾಡುವುದು, ಟೂರ್ ಆಂಡ್ ಟ್ರಾವೆಲ್ ಹೀಗೆ ಹಣ ಖರ್ಚಾಗುತ್ತಲೇ ಇರುತ್ತದೆ. ಇನ್ನು ಕೆಲವರಿಗೆ ಪ್ರತಿ ಸಂಬಳ ಹೆಚ್ಚಳದೊಂದಿಗೆ ಜೀವನಶೈಲಿ ಕೂಡಾ ಬದಲಾಗುತ್ತಾ ಹೋಗುತ್ತದೆ. ಇಷ್ಟಾದ ಮೇಲೆ ಅಕೌಂಟ್ ಹೇಗೆ ಖಾಲಿಯಾಗುತ್ತದೆ ಎನ್ನುವ ಸುಳಿವೇ ಸಿಗುವುದಿಲ್ಲ. ಇದಕ್ಕಾಗಿ ಯಾವ ಫೈನಾನ್ಸ್ ಪುಸ್ತಕ ಓದಿದರೂ ಅಷ್ಟೇ, ಬಜೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದರೂ ಅಷ್ಟೇ.
ಬರೀ ಸಂಬಳದಲ್ಲಿಯೇ ಭವಿಷ್ಯಕ್ಕೂ ಭದ್ರ ಬುನಾದಿ :
ಮಿತ್ತಲ್ ಅವರು ತನ್ನ ಮನೆ ಕೆಲಸದವರ ಸ್ಥಿತಿಯನ್ನು ವಿಶೇಷವಾಗಿ ಗಮನಿಸಿದಾಗ ಅವರಿಗೆ ಆರ್ಥಿಕ ಸಂಕಷ್ಟದ ಕೊರತೆ ಕಾಡುವುದಕ್ಕೆ ಶುರುವಾಯಿತಂತೆ. ಅವರ ಪೋಸ್ಟ್ ಪ್ರಕಾರ, ಸಂಬಳ ಪಡೆಯುವ ಉದ್ಯೋಗಿಗಳು ಲಘುವಾಗಿ ಪರಿಗಣಿಸುವ ಕಾರ್ಪೊರೇಟ್ ಪ್ರಯೋಜನಗಳು ಆಕೆಗೆ ಇಲ್ಲ, ಉದ್ಯೋಗಿ ವಿಮೆ ಇಲ್ಲ ಕೆಲಸಕ್ಕೆ ಸಿಗುವ ಸಂಬಳ ಬಿಟ್ಟರೆ ಬೇರೆ ಯಾವ ಲಾಭವೂ ಇಲ್ಲ. ಆದರೂ, ಅವರು ಬೆಳಿಗ್ಗೆ 7 ಗಂಟೆಗೆ ಮುಂಚೆಯೇ ಎದ್ದು ಕೆಲಸ ಪ್ರಾರಂಭಿಸುತ್ತಾರೆ. ತನ್ನ ಮನೆ ನಡೆಸಲು ಮತ್ತು ಮಗಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ತುಂಬಾ ಮನೆಗಳಲ್ಲಿ ಕೆಲಸ ಮಾಡುತ್ತಾಳೆ.
ಜನರಿಂದ ಹರಿದು ಬರುತ್ತಿದೆ ಕಾಮೆಂಟ್ :
ಮಿತ್ತಲ್ ಅವರ ಪೋಸ್ಟ್‌ಗೆ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡ್ತಾ ಇದ್ದಾರೆ. ಕೆಲವರು ಆಕೆಯ ಶಿಸ್ತು ಮತ್ತು ಸಮಯ ನಿರ್ವಹಣೆಯನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಮನೆ ಕೆಲಸದವರು ಮತ್ತು ಕಾರ್ಪೊರೇಟ್ ವೃತ್ತಿಪರರ ನಡುವಿನ ಹಣಕಾಸಿನ ಹೋಲಿಕೆ ಸರಿಯೇ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಯಾರು ಎಷ್ಟು ಸಂಪಾದಿಸ್ತಾರೆ ಅನ್ನೋದು ಮುಖ್ಯ ಅಲ್ಲ, ನಿಮ್ಮ ಗಳಿಕೆಗೆ ತಕ್ಕಂತೆ ಅಗತ್ಯವನ್ನು ಅರ್ಥ ಮಾಡಿಕೊಂಡು ಖರ್ಚು ಮಾಡುವುದು ಮುಖ್ಯ ಎಂದು ಬರೆದಿದ್ದಾರೆ. ಇನ್ನು ಯಾರು ಯಾವ ಜಾಗದಲ್ಲಿ ವಾಸ ಮಾಡ್ತಾ ಇದ್ದಾರೆ, ಅವರ ಜೀವನ ಪರಿಸ್ಥಿತಿಗಳು ಏನು ಎನ್ನುವುದನ್ನು ಅವಲಂಬಿಸಿ ಕೂಡಾ ಜೀವನ ವೆಚ್ಚಗಳು ಬದಲಾಗಬಹುದು ಎಂದು ಬರೆದಿದ್ದಾರೆ.
ಗಳಿಸುವುದು ಮಾತ್ರವಲ್ಲ ಉಳಿಸುವುದೂ ಗೊತ್ತಿರಬೇಕು :
ಮಿತ್ತಲ್ ಅವರು ಶೇರ್ ಮಾಡಿರುವ ಈ ಕಥೆಯ ಅತ್ಯಂತ ಗಮನಾರ್ಹ ಭಾಗವೆಂದರೆ ಅವರ ಮನೆಯ ಕೆಲಸದವರು ಅವರ ಆದ್ಯತೆಗಳನ್ನು ಎಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದು. ಅವರಿಗೆ ಒಬ್ಬ ಮಗಳಿದ್ದಾಳೆ, ಅವಳಿಗೆ ಶಿಕ್ಷಣ ಮುಖ್ಯ. ಅವಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರವಾಗಿಸುವುದು ಮುಖ್ಯ. ಮುಂದೊಂದು ದಿನ ಆಸ್ತಿಯಾಗಬಹುದಾದ ಒಂದು ತುಂಡು ಭೂಮಿಗೆ ಅವಳು ಹಣ ಪಾವತಿಸುತ್ತಿದ್ದಾಳೆ. ಗಳಿಸುವ ಹಣದಲ್ಲಿ ಮೊದಲು ಉಳಿಸಿ, ಉಳಿದದ್ದನ್ನು ಖರ್ಚು ಮಾಡಿ, ಅನಗತ್ಯ ಸಾಲ ಮಾಡಬೇಡಿ, ಮಕ್ಕಳ ಭವಿಷ್ಯಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಹೂಡಿಕೆ ಮಾಡಿ ಎನ್ನುವುದು ಹೊಸ ಆರ್ಥಿಕ ತತ್ವಶಾಸ್ತ್ರವಲ್ಲ. ಆದರೆ ಅದನ್ನು ಎಷ್ಟು ಜನ ಅನುಸರಿಸುತ್ತಾರೆ ಅನ್ನುವುದು ಬಹಳ ಮುಖ್ಯವಾಗುತ್ತದೆ.


Click it and Unblock the Notifications
