ಕೊರೊನಾ ಸೋಂಕು; ಮುಂದಿನ 3 ತಿಂಗಳು ನಿರ್ಣಾಯಕ ಎಂದ ಕೇಂದ್ರ
ನವದೆಹಲಿ, ಅಕ್ಟೋಬರ್ 8: ಕೊರೊನಾ ಸೋಂಕಿನ ವಿರುದ್ಧ ಭಾರತದ ಹೋರಾಟದ ಹಾದಿ ಇನ್ನೂ ದೂರವಿದೆ. ಕೊರೊನಾ ಲಸಿಕೆ ಅಭಿಯಾನದ ಹೊರತಾಗಿಯೂ ಹಲವು ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಸೋಂಕಿನ ಪಾಸಿಟಿವಿಟಿ ದರ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಪ್ರಕಟಿಸಿದೆ.
'ಕೊರೊನಾ ನೀಡಿರುವ ಸವಾಲು ಇನ್ನೂ ಮುಗಿದಿಲ್ಲ. ಕೊರೊನಾ ಎರಡನೇ ಅಲೆಯನ್ನೂ ನಾವು ಸೂಕ್ತವಾಗಿ ನಿಯಂತ್ರಿಸಿಲ್ಲ ಎಂದು ಹೇಳಬಹುದಾಗಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮುಂದುವರೆಸಬೇಕಿದೆ' ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ತಿಳಿಸಿದ್ದಾರೆ.
ಮುಂದಿನ ಕೆಲವು ತಿಂಗಳು ಭಾರತಕ್ಕೆ ನಿರ್ಣಾಯಕವಾಗಿವೆ ಹಾಗೂ ಕೊರೊನಾ ಸೋಂಕಿನ ಹಲವು ರೂಪಾಂತರಗಳು ಸೃಷ್ಟಿಯಾಗುತ್ತಿರುವುದರಿಂದ, ಜೊತೆಜೊತೆಗೆ ಹಬ್ಬಗಳು ಬರುತ್ತಿರುವುದು ಸೋಂಕಿನ ಆತಂಕವನ್ನು ಹೆಚ್ಚಿಸಿವೆ ಎಂದರು.

ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಮೇಲೆ ನಿಗಾ ಇಡಬೇಕು. ಪ್ರತಿಯೊಂದರಲ್ಲಿಯೂ ಎಚ್ಚರಿಕೆಯ ಹೆಜ್ಜೆ ಇಡಬೇಕು. ಜನಸಂದಣಿ ಇರುವ ಕಡೆಗಳನ್ನು ತಪ್ಪಿಸಿ. ಅನವಶ್ಯಕ ಪ್ರಯಾಣವನ್ನು ಕೈಗೊಳ್ಳಬೇಡಿ. ಆದಷ್ಟು ಆನ್‌ಲೈನ್‌ನಲ್ಲಿಯೇ ಶಾಪಿಂಗ್ ಮಾಡಿ. ಮನೆಯಲ್ಲಿಯೇ ಹಬ್ಬದ ಆಚರಣೆಯನ್ನು ಮಾಡಿ ಎಂದು ಅಗರ್‌ವಾಲ್ ಹೇಳಿದ್ದಾರೆ.
'ಕೊರೊನಾ ರೋಗಿಗಳಿಗೆಂದೇ 8.36 ಲಕ್ಷ ಆಸ್ಪತ್ರೆ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಒಂದು ಮಿಲಿಯನ್ ಐಸೊಲೇಷನ್ ಹಾಸಿಗೆಗಳ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.
'ಸೋಂಕು ಹೇಗೆ, ಯಾವಾಗ, ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಕೊರೊನಾ ಲಸಿಕೆಗಳನ್ನು ನೀಡಿದ ನಂತರವೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಎಲ್ಲರೂ ಸುರಕ್ಷಿತವಾಗಿರುವುದನ್ನು ಖಾತ್ರಿಪಡುವಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ದಿನನಿತ್ಯ 4.5 ಇಂದ 5 ಲಕ್ಷ ಕೊರೊನಾ ಪ್ರಕರಣಗಳು ದಾಖಲಾದರೂ ಅದಕ್ಕೆ ಸೂಕ್ತ ವ್ಯವಸ್ಥೆ ನೀಡುವ ಸಿದ್ಧತೆ ಮಾಡಿಕೊಂಡಿದ್ದೇವೆ. ಹೀಗೆಂದರೆ ಕೊರೊನಾ ಮೂರನೇ ಅಲೆ ಬಂದೇ ಬರುತ್ತದೆ ಎಂದರ್ಥವಲ್ಲ. ಆದರೂ ಸಿದ್ಧತೆ ನಡೆಸಲಾಗಿದೆ' ಎಂದು ಕೇಂದ್ರ ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ.

ದೇಶದಲ್ಲಿ ಅರುಣಾಚಲಪ್ರದೇಶ ಹಾಗೂ ಅಸ್ಸಾಂ ಒಳಗೊಂಡಂತೆ ಸುಮಾರು 28 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ 5% ಇಂದ 10% ಇದೆ.
'ಈ ಅಂಕಿ ಸಂಖ್ಯೆಗಳು ಸೋಂಕಿನ ಹರಡುವಿಕೆ ಹೆಚ್ಚುತ್ತಿರುವುದನ್ನು ತೋರಿಸುತ್ತಿವೆ. ದೇಶದಲ್ಲಿ 34 ಜಿಲ್ಲೆಗಳಲ್ಲಿ ವಾರದ ಕೊರೊನಾ ಪಾಸಿಟಿವಿಟಿ ದರ 10%ಗೂ ಹೆಚ್ಚು ತೋರಿಸುತ್ತಿದೆ. ದೇಶದಲ್ಲಿ ಒಟ್ಟಾರೆ ಪಾಸಿಟಿವಿಟಿ ದರ 1.68% ಇದೆ. ಪ್ರತಿ ದಿನ ದೇಶದಲ್ಲಿ ಸುಮಾರು 20,000 ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಕಳೆದ ವಾರ ಕೇರಳವೊಂದರಲ್ಲೇ 56% ಪ್ರಕರಣಗಳು ದಾಖಲಾಗಿವೆ' ಎಂದು ತಿಳಿಸಿದರು.
ಕೇರಳ, ಮಹಾರಾಷ್ಟ್ರ, ತಮಿಳುನಾಡು, ಮಿಝೋರಾಂ ಹಾಗೂ ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳಿವೆ. ಲಕ್ಷದ್ವೀಪ, ಚಂಡೀಗಢ, ಗೋವಾ, ಹಿಮಾಚಲ ಪ್ರದೇಶ, ಅಂಡಮಾನ್, ನಿಕೋಬಾರ್ ದ್ವೀಪಗಳು, ಸಿಕ್ಕಂನಲ್ಲಿ 100% ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.
12-18 ವರ್ಷದ ಮಕ್ಕಳಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ಝೈಡಸ್ ಕ್ಯಾಡಿಲಾದ ಝೈಕೋವ್ -ಡಿ ಲಸಿಕೆಯ ವಿಳಂಬದ ಕುರಿತು ಪ್ರಶ್ನಿಸಿದಾಗ, 'ಈ ಲಸಿಕೆಯನ್ನು ಸಾಮಾನ್ಯ ಸಿರಿಂಜ್ ಬಳಸಿ ನೀಡಲಾಗುವುದಿಲ್ಲ. ಜೆಟ್ ಇಂಜೆಕ್ಟರ್ ಮೂಲಕ ನೀಡಲಾಗುತ್ತದೆ. ದೇಶದಲ್ಲಿ ಇದೇ ಮೊದಲ ಬಾರಿ ಇಂಥ ಲಸಿಕೆಯನ್ನು ನೀಡಲಾಗುತ್ತಿದೆ. ಹೀಗಾಗಿ ಮೊದಲು ಇದರ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ' ಎಂದು ಉತ್ತರಿಸಿದರು.
ಭಾರತದಲ್ಲಿ 22,431 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 24,602 ಜನರು ಗುಣಮುಖರಾಗಿದ್ದು, 318 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ, ಕೇಂದ್ರ ಸರ್ಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 93.94 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಿದೆ. 7.64 ಕೋಟಿ ಲಸಿಕೆ ಇನ್ನು ಸಂಗ್ರಹವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.












Click it and Unblock the Notifications