ಕೊರೊನಾ ಎಫೆಕ್ಟ್: ಭಾರತದ ಗಡಿರೇಖೆಗಳೆಲ್ಲ ಬಂದ್ ಬಂದ್ ಬಂದ್!
ಕೋಲ್ಕತ್ತಾ, ಮಾರ್ಚ್.15: ಭಾರತಕ್ಕೆ ಕೊರೊನಾ ವೈರಸ್ ಲಗ್ಗೆ ಇಟ್ಟಿದ್ದೇ ತಡ ಕೇಂದ್ರ ಸರ್ಕಾರದ ಜೊತೆ ಜೊತೆಗೆ ರಾಜ್ಯ ಸರ್ಕಾರಗಳೂ ಕೂಡಾ ಫುಲ್ ಅಲರ್ಟ್ ಆಗಿ ಬಿಟ್ಟಿವೆ. ಬಹುತೇಕ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಪಶ್ಚಿಮ ಬಂಗಾಳ ಸರ್ಕಾರವು ಇದರಿಂದ ಒಂದು ಹೆಜ್ಜೆ ಮುಂದೆ ಹೋಗಿದೆ. ಭೂಪಾನ್ ಜೊತೆಗಿನ ಗಡಿ ಸಂಪರ್ಕಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬ್ರೇಕ್ ಹಾಕಿದ್ದಾರೆ. ಅಲಿಪುರದೌರ್ ಜಿಲ್ಲೆಯ ಜೈಗಾನ್ ಗಡಿ ಪ್ರದೇಶದಲ್ಲಿನ ಎಲ್ಲ ಸಂಚಾರಕ್ಕೂ ಕಡಿವಾಣ ಹಾಕಲಾಗಿದೆ.
ಭೂತಾನ್ ಗಡಿಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶದಲ್ಲಿ ಯಾವುದೇ ರೀತಿ ಸರಕು ಮತ್ತು ಸೇವೆಗಳ ಸಂಚಾರ ನಡೆಸದಂತೆ ಅಧಿಕಾರಿಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಗಡಿರೇಖೆಗಳಲ್ಲಿ ವಹಿವಾಟು ಬಂದ್:
ಪಶ್ಚಿಮ ಬಂಗಾಳ ಮತ್ತು ಭೂತಾನ್ ನಡುವಿನ ವ್ಯಾಪಾರ ವಹಿವಾಟು ಸಂಚಾರವಷ್ಟೇ ಬಂದ್ ಆಗಿಲ್ಲ. ಬದಲಿಗೆ ಭಾರತದ ಜೊತೆಗೆ ಗಡಿರೇಖೆಯನ್ನು ಹೊಂದಿಕೊಂಡಿರುವ ಪ್ರದೇಶಗಳ ಪೈಕಿ 18 ಗಡಿಗಳಲ್ಲಿ ಸಂಚಾರವನ್ನು ತಡೆ ಹಿಡಯಲಾಗಿದೆ. ಭೂತಾನ್ ಜೊತೆಗೆ ನೇಪಾಳ, ಬರ್ಮಾ ಗಡಿಯಲ್ಲಿ ಸರಕು ಅಥವಾ ಜನ ಪ್ರವಾಸಕ್ಕೆ ಬ್ರೇಕ್ ಹಾಕಲಾಗುತ್ತದೆ ಎಂದು ಸ್ವತಃ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ.
ದೇಶದಲ್ಲಿ ಇದುವರೆಗೂ ಒಟ್ಟು 107 ಜನರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಇದುವರೆಗಿನ ವೈದ್ಯಕೀಯ ತಪಾಸಣೆಯಿಂದ ತಿಳಿದು ಬಂದಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನರಿಗೆ ಸೋಂಕು ಇರುವುದು ಸ್ಪಷ್ಟವಾಗಿದೆ. ಮಹಾರಾಷ್ಟ್ರದಲ್ಲಿ 31, ಕೇರಳದಲ್ಲಿ 22, ಉತ್ತರ ಪ್ರದೇಶದಲ್ಲಿ 11, ದೆಹಲಿಯಲ್ಲಿ 7, ಜನರಿಗೆ ಸೋಂಕು ಇರುವುದು ಸ್ಪಷ್ಟವಾಗಿದೆ. ಹರಿಯಾಣದಲ್ಲಿ 14 ಮಂದಿಗೆ ಸೋಂಕು ತಗಲಿದ್ದು, ಎಲ್ಲರೂ ವಿದೇಶಿಗರು ಎಂದು ಹೇಳಲಾಗುತ್ತಿದೆ.












Click it and Unblock the Notifications