ಕಾಂಗ್ರೆಸ್ 'ಕೇಂಬ್ರಿಡ್ಜ್ ಅನಾಲಿಟಿಕಾ'ದ ಗ್ರಾಹಕ: ಮಾಜಿ ಉದ್ಯೋಗಿ ಬಿಚ್ಚಿಟ್ಟ ಸತ್ಯ
ಲಂಡನ್, ಮಾರ್ಚ್ 28: 'ಕಾಂಗ್ರೆಸ್ ಕೇಂಬ್ರಿಡ್ಜ್ ಅನಾಲಿಟಿಕಾದ ಸಹಸಂಸ್ಥೆಯ ಗ್ರಾಹಕ ಎಂದು ನಂಬಿದ್ದೇನೆ' ಎಂಬುದಾಗಿ ಸಂಸ್ಥೆಯ ಮಾಜಿ ಉದ್ಯೋಗಿ, ದತ್ತಾಂಶ ಸೋರಿಕೆಯ ವಿಶಲ್ ಬ್ಲೋವರ್ ಕ್ರಿಸ್ಟೋಫರ್ ವೈಲಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕ್ರಿಸ್ಟೋಫರ್ ವೈಲಿ ಕೇಂಬ್ರಿಡ್ಜ್ ಅನಾಲಿಟಿಕಾದ ಮಾತೃ ಸಂಸ್ಥೆ ಎಸ್ ಸಿಎಲ್ ನಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದರು. 2013ರಿಂದ 14ರ ಅವಧಿಗೆ ಕಂಪನಿಯಲ್ಲಿದ್ದ ಅವರು ಬ್ರಿಟನ್ ನ ಹೌಸ್ ಆಫ್ ಕಾಮನ್ಸ್ ಗೆ ಮಂಗಳವಾರ ಪ್ರಕರಣದ ಬಗ್ಗೆ ಹಲವು ವಿವರಣೆ ನೀಡಿದ್ದಾರೆ. ಈ ವಿವರಣೆಗಳಲ್ಲಿ ಅವರು ಸ್ಪೋಟಕ ಸತ್ಯಗಳನ್ನೆಲ್ಲಾ ಬಾಯಿ ಬಿಟ್ಟಿದ್ದಾರೆ.
"ನಾನು ಕಾಂಗ್ರೆಸ್ ಸಂಸ್ಥೆಯ ಗ್ರಾಹಕ ಎಂದು ನಂಬಿದ್ದೇನೆ," ಎಂಬುದಾಗಿ ವೈಲಿ ಹೇಳಿದ್ದಾರೆ. "ಆದರೆ ಅವರು ಎಲ್ಲಾ ರೀತಿಯ ಪ್ರಾಜೆಕ್ಟ್ ಗಳನ್ನೂ ತೆಗೆದುಕೊಳ್ಳುತ್ತಿದ್ದರು. ಇದರಲ್ಲಿ ಸ್ಥಳೀಯ ಮತ್ತು.. ನನಗೆ ರಾಷ್ಟ್ರೀಯ ಯೋಜನೆಗಳು ಗೊತ್ತಿಲ್ಲ. ಆದರೆ ಸ್ಥಳೀಯ ಯೋಜನೆಗಳನ್ನು ಅವರು ತೆಗೆದುಕೊಳ್ಳುತ್ತಿದ್ದುದು ನನಗೆ ಗೊತ್ತು. ಭಾರತ ದೊಡ್ಡ ದೇಶ. ಇದು ಬ್ರಿಟನ್ ನಷ್ಟು ದೊಡ್ಡದಿದೆ. ಅಲ್ಲಿ ಅವರಿಗೆ ಕಚೇರಿಗಳಿವೆ. ಅಲ್ಲಿ ಸಿಬ್ಬಂದಿಗಳಿದ್ದಾರೆ. ನನ್ನ ಬಳಿಯಲ್ಲಿ ಭಾರತಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳಿವೆ, ನಾನದನ್ನು ಸಮಿತಿಗೆ ನೀಡುತ್ತೇನೆ," ಎಂದಿದ್ದಾರೆ.

ಇದೇ ವೇಳೆ ಇನ್ನೋರ್ವ ಐಟಿ ತಜ್ಞ ಪೌಲ್ ಒಲಿವರ್ ದೆಹಾಯೆ ಹೇಳಿಕೆ ನೀಡಿದ್ದು, ಕೇಂಬ್ರಿಡ್ಜ್ ಅನಾಲಿಟಿಕಾದಲ್ಲಿ ವೈಲಿಗೂ ಮುಂಚೆ ಡ್ಯಾನ್ ಮುರ್ಸೀನ್ ಎನ್ನುವವರು ಕೆಲಸ ಮಾಡುತ್ತಿದ್ದರು. ಅವರು ಕಾಂಗ್ರೆಸ್ ಗಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಕಾಂಗ್ರೆಸ್ ಬರಬಾರದು ಎಂದು ಬಯಸಿದ್ದ ಉದ್ಯಮಿಯೊಬ್ಬರಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು ಎಂಬುದಾಗಿ ಹೇಳಿದ್ದಾರೆ. ಮುಂದೆ ಇವರು ಕೀನ್ಯಾದಲ್ಲಿ ಸಾವನ್ನಪ್ಪಿದರು ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.
ಕೇಂಬ್ರಿಡ್ಜ್ ಅನಾಲಿಟಿಕಾ ಎನ್ನುವುದು ಒಂದು ಕಾನ್ಸೆಪ್ಟ್ ಮತ್ತು ಬ್ರ್ಯಾಂಡ್ ಮಾತ್ರ. ಉದ್ಯೋಗಿಗಳೆಲ್ಲಾ ಎಸ್ ಸಿಎಲ್ ಕಂಪನಿಗೆ ಸೇರಿದವರು ಎಂದು ಅವರು ಹೇಳಿದ್ದಾರೆ.
ವೈಲಿ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂಬ್ರಿಡ್ಜ್ ಅನಾಲಿಟಿಕಾ, ಅವರಿಗೆ ಕಂಪನಿಯ ಕಾರ್ಯಾಚರಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಕೇವಲ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಕಂಪನಿಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರು ಅಷ್ಟೇ ಎಂದು ಹೇಳಿದೆ.
ವೈಲಿ ನೀಡಿದ್ದ ಹಲವು ಹೇಳಿಕೆಗಳನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಅಲ್ಲಗಳೆದಿದೆ. ಆದರೆ ಕಾಂಗ್ರೆಸ್ ನಮ್ಮ ಗ್ರಾಹಕ ಅಲ್ಲ ಎಂದು ಎಲ್ಲೂ ಸಂಸ್ಥೆ ಹೇಳಿಲ್ಲ. ಪರೋಕ್ಷವಾಗಿ ಇದನ್ನು ಸಂಸ್ಥೆ ಒಪ್ಪಿಕೊಂಡಿದೆ.











Click it and Unblock the Notifications