ದ್ವೇಷ ಭಾಷಣಕ್ಕೆ ಕಡಿವಾಣ: ಬಿಜೆಪಿ ನಾಯಕರಿಗೆ ಬಂಡವಾಳವೇ ಇರದು- ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 22 : ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ವಿಚಾರದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕೆಂದು ಸುಪ್ರೀಂ ಕಟ್ಟುನಿಟ್ಟಾಗಿ ಆದೇಶಿಸಿದೆ. ಬಾಯಿ ತೆರೆದರೆ ದ್ವೇಷವನ್ನೇ ಉಗುಳುವ, ಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಸೇರಿದಂತೆ ಮುಂತಾದ ಬಿಜೆಪಿ ನಾಯಕರ ಮಾತಿಗೆ ಬಂಡವಾಳ ಇಲ್ಲದಂತಾಗುತ್ತದೆ' ಎಂದು ಛೇಡಿಸಿದೆ.
ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೊರ್ಟ್ ಸೂಚನೆ
ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಉತ್ತರಾಖಂಡ, ಉತ್ತರ ಪ್ರದೇಶ ಹಾಗೂ ದೆಹಲಿ ರಾಜ್ಯಗಳಲ್ಲಿ ದ್ವೇಷ ಭಾಷಣ ಮಾಡಲಾಗಿತ್ತು. ಈ ಮೂರು ರಾಜ್ಯಗಳ ಪೋಲಿಸ್ ವರಷ್ಠರು ದ್ವೇಷ ಹರಡುವ ಭಾಷಣ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಮುಸ್ಲಿಮರ ವಿರುದ್ಧ ಬಹಿಷ್ಕಾರದಂತಹ ಹೇಳಿಕೆಗಳು ಸಮಾಜದ ಸಾಮಾರಸ್ಯವನ್ನು ಹಾಳು ಮಾಡುತ್ತವೆ. ನಾವೀಗ ಜಾತ್ಯತೀತ ರಾಷ್ಟ್ರವನ್ನು ಉಳಿಸಬೇಕಿದೆ. ಸಂವಿಧಾನದ ಆಶಯಗಳನ್ನು ಗೌರವಿಸಬೇಕಿದೆ. 21 ಶತಮಾನದಲ್ಲೂ ಇಂತಹ ಬೆಳವಣಿಗೆಗಳನ್ನು ಸಹಿಸಿಕೊಳ್ಳಬಾರದು. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ಆರೋಪಿಗಳ ಮೇಲೆ ಕ್ರಮ ಜರುಗಿಸಲೇಬೇಕು. ಒಂದು ವೇಳೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ಅಂಥವರನ್ನು ಸಹಿಸಿಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನ್ಯಾಯಾಲಯ ನಿಬಾಯಿಸಬೇಕಿದೆ. ರಾಷ್ಟ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ದ್ವೇಷ ಹರಡುವವರ ವಿರುದ್ಧ ಈ ಕಟ್ಟುನಿಟ್ಟಿನ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ನಿರ್ದೇಶನ ಮಾಡುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.
ಉತ್ತರ ಪ್ರದೇಶ, ದೆಹಲಿ ಹಾಗೂ ಉತ್ತರಾಖಂಡದಲ್ಲಿ ನಡೆದಿದ್ದ ಧರ್ಮ ಸಂಸತ್‌ನಲ್ಲಿ ಮುಸ್ಲಿಮರನ್ನು ಉದ್ದೇಶಿಸಿ ದ್ವೇಷ ಭಾಷಣಗಳನ್ನು ಮಾಡಲಾಗಿತ್ತು. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಲಾಗಿತ್ತು. ಇದರ ವಿರುದ್ಧ ಶಹೀನ್ ಅಬ್ದುಲ್ಲಾ ಎಂಬುವವರು ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಋಷಿಕೇಶ್ ರಾಯ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ.
ದ್ವೇಷ ಭಾಷಣಕ್ಕೆ ಧರ್ಮ ಹಂಗಿಲ್ಲ: ಹಿರಿಯ ವಕೀಲ ಕಪಿಲ್ ಸಿಬಲ್
ಅರ್ಜಿದಾರರ ಪರ ವಾದಿಸಿದ ಕಪಿಲ್ ಸಿಬಲ್, ದ್ವೇಷ ಭಾಷಣ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಅರ್ಜಿ ಸಲ್ಲಿಸಿದ್ದೆವು. ಆದರೆ, ಕ್ರಮ ಜರುಗಿಸಬೇಕಾದವರು ಇದಕ್ಕೆ ಪ್ರತಿಕ್ರಿಯಿಸಲೇ ಇಲ್ಲ. ಆ ಕಾರಣ, ದೇಶದಲ್ಲಿ ಬಹಿಷ್ಕಾರ, ಕೊಲೆ, ಕತ್ತು ಸೀಳುವ ಬಗ್ಗೆ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ದ್ವೇಷ ಭಾಷಣ ಮಾಡುವವರು ಯಾವುದೇ ಧರ್ಮಕ್ಕೆ ಸೇರಿರಲಿ. ಅಂಥಹ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಕಾನೂನು ಅಡಿಯಲ್ಲಿ ಅವರಿಗೆ ಶಿಕ್ಷೆ ಆಗಬೇಕು ಎಂದು ವಾದಿಸಿದ್ದಾರೆ.
ಕರ್ನಾಟಕದಲ್ಲೂ ದ್ವೇಷಪೂರಿತ ಹೇಳಿಕೆ
ಕರ್ನಾಟಕದಲ್ಲೂ ದ್ವೇಷ ಭಾಷಣಗಳನ್ನು ಮಾಡಲಾಗಿದೆ. ಮುಸ್ಲಿಮರ ವ್ಯಾಪಾರಕ್ಕೆ ಬಹಿಷ್ಕಾರ, ಹಲಾಲ್ ಕಟ್, ಆಜಾನ್ ಹಾಗೂ ಟಿಪ್ಪು ವಿವಾದಗಳನ್ನು ಮುಂದಿಟ್ಟುಕೊಂಡು ಕೆಲ ಮುಖಂಡರು ದ್ವೇಷಪೂರಕ ಹೇಳಿಕೆಯನ್ನು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರಗಳು ಹಾಗೂ ಪೊಲೀಸ್ ಅಧಿಕಾರಿಗಳು ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications