ಪ್ರಧಾನಿ ಮೋದಿ ತಾಯಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 28: ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಶೀಘ್ರ ಗುಣಮುಖರಾಗಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾರೈಸಿದ್ದಾರೆ.
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿರುವ ಪ್ರಧಾನಿ ಮೋದಿ ಅವರ ತಾಯಿ ಇಂದು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಅವರ ತಾಯಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಮೋದಿ ಸಹೋದರನ ಕಾರು ಅಪಘಾತ
ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ ಮೋದಿ ಅವರ ಕಾರು ನಿನ್ನೆ ಮೈಸೂರು ಅಪಘಾತಕ್ಕೆ ಈಡಾಗಿತ್ತು. ಪ್ರಹ್ಲಾದ ಮೋದಿ, ಅವರ ಪುತ್ರ ಹಾಗೂ ಸೊಸೆ ಗಂಭೀರವಾಗಿ ಗಾಯಗೊಂಡಿದ್ದರು. ಇವರೊಂದಿಗೆ ಮಗುವೂ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಘಟನೆ ನಡೆದ ಬೆನ್ನಲ್ಲೇ ಮೋದಿ ತಾಯಿ ಅವರು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ಪ್ರಸ್ತುತ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ. ಯಾತ್ರೆಯು ಈಗಾಗಲೇ 2800 ಕಿಮೀಗಳಷ್ಟು ದೂರ ಕ್ರಮಿಸಿದೆ. ತಮಿಳು ನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಹಾಗೂ ದೆಹಲಿಯಲ್ಲಿ ಕ್ರಮಿಸಿದೆ. ಜನವರಿ 3 ರಂದು ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ಉತ್ತರ ಪ್ರದೇಶದ ರಾಜಕೀಯ ಮುಖಂಡರಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಅವರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಯಾತ್ರೆಯು ಕಾಶ್ಮೀರಕ್ಕೆ ಪ್ರವೇಶಿಸಿದಾಗ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಕುರಿತು ನಿನ್ನೆ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಗೊಂಡಿರುವ ಯಾತ್ರೆ ಕಾಶ್ಮೀರದ ಕನ್ಯಾಕುಮಾರಿಯಲ್ಲಿ ಅಂತ್ಯಗೊಳ್ಳಲಿದೆ. ಯಾತ್ರೆಗೆ ಈ ವರೆಗೂ ಭಾರೀ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು, ಕಲಾವಿದರು, ಸಿನಿಮಾ ನಟರು, ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ದೆಹಲಿಯ ಕೆಂಪುಕೋಟೆಯನ್ನು ಯಾತ್ರೆ ತಲುಪಿದಾಗ ಖ್ಯಾತ ನಟ ಕಮಲ್ ಹಾಸನ್ ಅವರು ಭಾಗವಹಿಸಿ, ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿದ್ದರು.












Click it and Unblock the Notifications