ದೆಹಲಿಯ ಇಂದಿರಾ ಭವನ ಉದ್ಘಾಟನೆಗೆ ರಾಜ್ಯ ಕಾಂಗ್ರೆಸ್ ಸಚಿವನಿಗೆ ನೋ ಎಂಟ್ರಿ
ನವದೆಹಲಿಯಲ್ಲಿ ಎಐಸಿಸಿ ನೂತನ ಪ್ರಧಾನ ಕಚೇರಿ ಇಂದಿರಾ ಭವನ ಇಂದು ಉದ್ಘಾಟನೆಗೊಂಡಿದೆ. ಕೋಟ್ಲಾ ರಸ್ತೆಯ 9A ನಲ್ಲಿರುವ ಪಕ್ಷದ ಹೊಸ ಪ್ರಧಾನ ಕಚೇರಿಯನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಿದ್ದ ಕಾಂಗ್ರೆಸ್ ಸಚಿವ ಬೈರತಿ ಸುರೇಶ್ ಅವರಿಗೆ ಪ್ರವೇಶ ನಿರ್ಬಂಧಿಸಿರುವ ಘಟನೆ ವರದಿಯಾಗಿದೆ. ಪಾಸ್ ಇಲ್ಲ ಎನ್ನುವ ಕಾರಣಕ್ಕೆ ಬೈರತಿ ಸುರೇಶ್ ಅವರನ್ನು ಅಲ್ಲಿನ ಸಿಬ್ಬಂದಿ ತಡೆದಿದ್ದಾರೆ ಎಂದು ಹೇಳಲಾಗಿದೆ.
ಎಐಸಿಸಿ ನೂತನ ಕೇಂದ್ರ ಕಚೇರಿಯಾಗಿ "ಇಂದಿರಾ ಭವನ"ವನ್ನು ಇಂದು ಧ್ವಜಾರೋಹಣದ ಮೂಲಕ ಲೋಕಾರ್ಪಣೆಗೊಳಿಸಲಾಯಿತು. ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ಈ ನೂತನ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಕೂಡ ತೆರಳಿದ್ದು, ಈ ವೇಳೆ ಬೈರತಿ ಸುರೇಶ್ ಅವರಿಗೆ ಸಿಬ್ಬಂದಿ ನೋ ಎಂಟ್ರಿ ಎಂದಿದ್ದಾರೆ.

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಡಲಾಗಿದೆ. ಇಂದಿರಾಗಾಂಧಿ ಅವರು ಪಕ್ಷಕ್ಕೆ ನೀಡಿದ ಕೊಡುಗೆಗಳ ಸ್ಮರಣಾರ್ಥ ಅವರ ಹೆಸರನ್ನೇ ನೂತನ ಕಚೇರಿಗೆ ಇಡಲಾಗಿದೆ. ಈ ಹಿಂದೆಯೇ ಈ ಕಚೇರಿ ಉದ್ಘಾಟನೆಗೆ ಎಲ್ಲ ತಯಾರಿ ನಡೆದಿತ್ತು. ಆದರೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಕಾರಣ ಇದು ವಿಳಂಬವಾಗಿತ್ತು. ಸದ್ಯ ಈ ಕಚೇರಿಯನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ.

47 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯನ್ನು ಅಕ್ಬರ್ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಹೊಸ ಕೇಂದ್ರ ಕಚೇರಿ ಸಾಮಾನ್ಯ ಕಟ್ಟಡವಲ್ಲ, ದೇಶದ ಮಣ್ಣಿನಿಂದ ಹುಟ್ಟಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಮೋಹನ್ ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಆರೆಸ್ಸೆಸ್ ಮುಖ್ಯಸ್ಥರಾದ ಭಾಗವತ್ ಅವರು ಸಂವಿಧಾನದ ಮೇಲೆ ದಾಳಿಯಾದಾಗ ನಮ್ಮ ಸ್ವಾತಂತ್ರ್ಯದ ಸಂಕೇತವಲ್ಲ ಎಂದರು. ಮೋಹನ್ ಭಾಗವತ್ ಅವರು ಸ್ವತಂತ್ರ ಚಳುವಳಿ, ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರತಿ ಎರಡು ಮೂರು ದಿನಗಳಿಗೊಮ್ಮೆ ರಾಷ್ಟ್ರಕ್ಕೆ ತಿಳಿಸುವ ದಿಟ್ಟತನವನ್ನು ಹೊಂದಿದ್ದಾರೆ.

ಸಂವಿಧಾನ ಅಸಿಂಧು, ಬ್ರಿಟಿಷರ ವಿರುದ್ಧದ ಹೋರಾಟ ಅಸಿಂಧು ಎಂದು ಅವರು ನಿನ್ನೆ ಹೇಳಿದ್ದು ದೇಶದ್ರೋಹ. ಇದನ್ನು ಸಾರ್ವಜನಿಕವಾಗಿ ಹೇಳುವ ಧೈರ್ಯವನ್ನು ಅವರು ಹೊಂದಿದ್ದಾರೆ. ಇದನ್ನೇ ಬೇರೆ ಯಾವುದೇ ದೇಶದಲ್ಲಿ ಮಾಡಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ ಎಂದು ಹೇಳುವುದು ಪ್ರತಿಯೊಬ್ಬ ಭಾರತೀಯ ವ್ಯಕ್ತಿಗೆ ಮಾಡಿದ ಅವಮಾನ ಎಂದು ರಾಹುಲ್ ಗಾಂಧಿ ದೂರಿದ್ದಾರೆ. ಅಲ್ಲದೆ ನಾವು ಈ ಅಸಂಬದ್ಧತೆಯನ್ನು ಕೇಳುವುದನ್ನು ನಿಲ್ಲಿಸುವ ಸಮಯ ಇದೀಗ ಬಂದಿದೆ ಎಂದೂ ರಾಹುಲ್ ಹೇಳಿದ್ದಾರೆ.












Click it and Unblock the Notifications