ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಕೊಡುಗೆ ದೊಡ್ಡದು, ಆದರೆ, ಇತರರ ಪಾತ್ರವಿಲ್ಲ ಎಂದು ಪ್ರಚಾರ ಮಾಡಬಾರದು: ಅಮಿತ್ ಶಾ
ನವದೆಹಲಿ, ಜ. 11: ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಚಳವಳಿಯು ಭಾರತದ ಸ್ವಾತಂತ್ರ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಬುಧವಾರ ಒಪ್ಪಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆದರೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇತರರ ಪಾತ್ರವಿಲ್ಲ ಎಂದು ಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಲೇಖಕ ಸಂಜೀವ್ ಸನ್ಯಾಲ್ ಬರೆದ 'ರೆವಲ್ಯೂಷನರೀಸ್' ಭಾರತ ತನ್ನ ಸ್ವಾತಂತ್ರ್ಯವನ್ನು ಹೇಗೆ ಪಡೆದುಕೊಂಡಿತು ಎಂಬುದರ ಇನ್ನೊಂದು ಕಥೆ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಮಿತ್ ಶಾ ಮಾತನಾಡಿದ್ದಾರೆ.
ಪುಸ್ತಕದ ಶೀರ್ಷಿಕೆಯಲ್ಲಿರುವ 'ಇತರ ಕಥೆ' ಎಂಬ ಪದವು ಸ್ವಾತಂತ್ರ್ಯ ಹೋರಾಟದಲ್ಲಿ ಇತರರ ಕೊಡುಗೆಗಳ ಇತರ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ಪುಸ್ತಕದ ಸಾರಾಂಶವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

"ಇತಿಹಾಸ ಬರವಣಿಗೆ ಮತ್ತು ಶಿಕ್ಷಣದ ಮೂಲಕ ಸಾರ್ವಜನಿಕರ ಮೇಲೆ ಒಂದು ದೃಷ್ಟಿಕೋನವನ್ನು ಹೇರಲಾಗಿದೆ. ಜನರ ಮೇಲೆ ಹೇರಿರುವ ದೃಷ್ಟಿಕೋನದ ಬಗ್ಗೆ, ಅಹಿಂಸಾತ್ಮಕ ಹೋರಾಟವು ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ, ಇತಿಹಾಸದ ಭಾಗವಲ್ಲ ಎಂದು ನಾನು ಹೇಳುವುದಿಲ್ಲ. ಇದು ಇತಿಹಾಸದ ಒಂದು ಭಾಗ. ಜೊತೆಗೆ ದೊಡ್ಡ ಕೊಡುಗೆಯನ್ನು ನೀಡಿದೆ. ಹಾಗೆಯೇ ಹೋರಾಟದಲ್ಲಿ ವಿವಿಧ ವ್ಯಕ್ತಿಗಳು ಮತ್ತು ಸಂಘಟನೆಗಳ ಕೊಡುಗೆಗಳಿವೆ. ಸ್ವಾತಂತ್ರ್ಯವು ಪ್ರತಿಯೊಬ್ಬರ ಸಾಮೂಹಿಕ ಫಲಿತಾಂಶವಾಗಿದೆ" ಎಂದು ಅಮಿತ್ ಶಾ ತಿಳಿಸಿದ್ದಾರೆ.
"ಕಾಂಗ್ರೆಸ್ ನೇತೃತ್ವದ ಚಳವಳಿಯು ದೇಶದ ಸ್ವಾತಂತ್ರ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಆದರೆ ಬೇರೆ ಯಾರೂ ಕೊಡುಗೆ ನೀಡಿಲ್ಲ ಎಂಬ ಈ ನಿರೂಪಣೆ ಸರಿಯಲ್ಲ. ಏಕೆಂದರೆ ನಾವು ದೇಶದ ಸ್ವಾತಂತ್ರ್ಯವನ್ನು ವಿಶ್ಲೇಷಿಸಿದರೆ, ಹಲವಾರು ಜನರು, ಸಂಘಟನೆಗಳು, ಸಿದ್ಧಾಂತಗಳು ಮತ್ತು ಹಲವು ಮಾರ್ಗಗಳು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿವೆ. ಭಾರತದ ಸ್ವಾತಂತ್ರ್ಯವು ಈ ಎಲ್ಲದರ ಸಾಮೂಹಿಕ ಫಲಿತಾಂಶವಾಗಿದೆ" ಎಂದು ಅಮಿತ್ ಶಾ ಹೇಳಿದ್ದಾರೆ.












Click it and Unblock the Notifications