ಗುಜರಾತ್ ಚುನಾವಣೆಗೆ ಘೋಷಣೆಯಾಗದ ದಿನಾಂಕ; ಆಶ್ಚರ್ಯವಿಲ್ಲ ಎಂದ ಕಾಂಗ್ರೆಸ್!
ನವದೆಹಲಿ, ಅ. 14: ಶುಕ್ರವಾರ ಘೋಷಣೆಯಾಗುವ ನಿರೀಕ್ಷೆಯಿದ್ದ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ಆರೋಪಿಸಿದ್ದಾರೆ.
ಈ ಬೆಳವಣಿಗೆಯಿಂದ ತಮ್ಮ ಪಕ್ಷಕ್ಕೆ ಆಶ್ಚರ್ಯವಿಲ್ಲ ಎಂದಿರುವ ಕಾಂಗ್ರೆಸ್ ಸಂಸದ, "ನಿಸ್ಸಂಶಯವಾಗಿ, ಕೆಲವು ದೊಡ್ಡ ಭರವಸೆಗಳನ್ನು ನೀಡಲು ಮತ್ತು ಹೆಚ್ಚಿನ ಉದ್ಘಾಟನೆಗಳನ್ನು ಮಾಡಲು ಪ್ರಧಾನಿಗೆ ಹೆಚ್ಚಿನ ಸಮಯವನ್ನು ನೀಡಲು ಇದನ್ನು ಮಾಡಲಾಗಿದೆ. ಇದರಲ್ಲಿ ಆಶ್ಚರ್ಯವೇನಿಲ್ಲ" ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ದಿನಾಂಕಗಳನ್ನು ಶುಕ್ರವಾರ ಪ್ರಕಟಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಈ ಹಿಂದೆ ತಿಳಿಸಿತ್ತು. ಆದರೆ, ಎಲ್ಲರ ನಿರೀಕ್ಷೆಗಳನ್ನೂ ಹುಸಿಗೊಳಿಸಿ ಕೇವಲ ಹಿಮಾಚಲ ಪ್ರದೇಶ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಗುಜರಾತ್ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿಲ್ಲ.
obviously this has been done to give more time to the PM to make some mega promises & carry out more inaugurations. Not at all surprising. https://t.co/LF1Vhw4WAw
— Jairam Ramesh (@Jairam_Ramesh) October 14, 2022
ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸದಿರುವ ಚುನಾವಣಾ ಸಮಿತಿಯು ಹಿಂದಿನ ಅಭ್ಯಾಸದ ಪ್ರಕಾರ ಆಯೋಗವು ಹಾಗೆ ಮಾಡುತ್ತಿದೆ ಎಂದು ಹೇಳಿದೆ.

'2017 ರಲ್ಲಿ ಎರಡೂ ರಾಜ್ಯಗಳಿಗೆ ಪ್ರತ್ಯೇಕ ದಿನಾಂಕಗಳಂದು ಚುನಾವಣೆ ನಡೆಸಲಾಗಿತ್ತು. ಅದರಂತೆಯೇ ಈ ಬಾರಿಯೂ ನಡೆಸಲಾಗುವುದು' ಎಂದು ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಗುಜರಾತ್ ವಿಧಾನಸಭೆಯ ಅವಧಿ ಫೆಬ್ರವರಿ 18, 2023 ರಂದು ಕೊನೆಗೊಳ್ಳುತ್ತದೆ. ಹಿಮಾಚಲ ಪ್ರದೇಶ ವಿಧಾನಸಭೆ ಜನವರಿ 8ರಂದು ಅಂತ್ಯವಾಗಲಿದೆ.
ಹಿಮಾಚಲ ಪ್ರದೇಶದ ಹವಾಮಾನವನ್ನು ಉಲ್ಲೇಖಿಸಿ ಅಲ್ಲಿ ಮೊದಲು ಚುನಾವಣೆ ನಡೆಸಲಾಗುತ್ತಿದೆ ಎಂದು ಆಯೋಗದ ಮುಖ್ಯಸ್ಥ ತಿಳಿಸಿದ್ದಾರೆ.
"ಹವಾಮಾನದಂತಹ ಹಲವಾರು ಅಂಶಗಳಿವೆ. ಹಿಮಪಾತವಾಗುವ ಮುನ್ನವೇ ಹಿಮಾಚಲ ಚುನಾವಣೆಗಳನ್ನು ನಡೆಸಲು ನಾವು ನಿರ್ಧರಿಸಿದ್ದೇವೆ. ಅದರಲ್ಲೂ ವಿಶೇಷವಾಗಿ ಹಿಮ ಬೀಳುವ ಮೇಲ್ಭಾಗದಲ್ಲಿ" ಎಂದು ರಾಜೀವ್ ಕುಮಾರ್ ವಿವರಿಸಿದರು.
ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಹಿಮಾಚಲ ಪ್ರದೇಶ ವಿಧಾನಸಭೆಯ ಅವಧಿ 2023 ರ ಜನವರಿ 8 ರಂದು ಕೊನೆಗೊಳ್ಳಲಿದೆ.












Click it and Unblock the Notifications