ಪುದುಚೇರಿ ಚುನಾವಣಾ ಪ್ರಚಾರಕ್ಕೆ ಫೆ.17ರಂದು ರಾಹುಲ್ ಗಾಂಧಿ ಹಸಿರು ನಿಶಾನೆ
ಪುದುಚೇರಿ, ಫೆಬ್ರವರಿ.14: ಪುದುಚೇರಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಫೆಬ್ರವರಿ.17ರಂದು ಹಸಿರು ನಿಶಾನೆ ತೋರಲಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ. ವಿ ಸುಬ್ರಮಣಿಯನ್ ತಿಳಿಸಿದ್ದಾರೆ.
ಮುಂದಿನ ಕೆಲವು ತಿಂಗಳಿನಲ್ಲೇ ತಮಿಳುನಾಡು ವಿಧಾನಸಭಾ ಚುನಾವಣೆಯ ಜೊತೆಗೆ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲೂ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಫೆಬ್ರವರಿ.17ರಂದು ಪುದುಚೇರಿಯ ಎಎಫ್ ಟಿ ಮಿಲ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿಯವರು ಭಾಷಣ ಮಾಡಲಿದ್ದಾರೆ.
ಪುದುಚೇರಿಯಲ್ಲಿ ಡಿಎಂಕೆ ಪರೋಕ್ಷ ಬೆಂಬಲ ಪಡೆದಿರುವ ಕಾಂಗ್ರೆಸ್ ಕೇಂದ್ರಾಡಳಿತ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದೆ. ಕಳೆದ 2016ರಲ್ಲಿ ನಡೆದ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ 30 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಸರ್ಕಾರವನ್ನು ರಚಿಸಿತ್ತು.

ಪುದುಚೇರಿಯಲ್ಲಿ ರಾಜಕೀಯ ಮೇಲಾಟ:
2016ರಲ್ಲಿ ನಡೆದ ಪುದುಚೇರಿ ವಿಧಾನಸಭಾ ಚುನಾವಣೆ ನಂತರದಲ್ಲಿ ಕಾಂಗ್ರೆಸ್ 15 ಶಾಸಕರ ಪೈಕಿ ಜನವರಿ.25ರಂದು ಶಾಸಕ ಎ. ನಮಸ್ಸಿವಾಯಮ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೇ ದಿನ ಮತ್ತೊಬ್ಬ ಕಾಂಗ್ರೆಸ್ ಶಾಸಕ ಇ ಥಿಪ್ಪಾಇಂಥನ್ ಕೂಡಾ ಶಾಸಕ ಸ್ಥಾನವನ್ನು ತೊರೆದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕಾಂಗ್ರೆಸ್ ಶಾಸಕ ಧನವೇಲುರನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು. ಇದರಿಂದ ಸ್ಪೀಕರ್ ಸೇರಿದಂತೆ 13 ಕಾಂಗ್ರೆಸ್ ಶಾಸಕರಷ್ಟೇ ಇದ್ದು ಸರ್ಕಾರಕ್ಕೆ ಕುತ್ತು ಎದುರಾಗಿತ್ತು.
ಪುದುಚೇರಿಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಸರ್ಕಾರಕ್ಕೆ ಮೂವರು ಡಿಎಂಸಿ ಶಾಸಕರು ಪರೋಕ್ಷ ಬೆಂಬಲ ಸೂಚಿಸಿದರು. ಆರ್. ಸಿವಾ ಮತ್ತು ಎಂ. ಗೀತಾ ಬೆಂಬಲದಿಂದ ಸರ್ಕಾರವು ಸ್ಥಿರವಾಗಿ ಉಳಿಯಿತು.












Click it and Unblock the Notifications