ಮಲ್ಲಿಕಾರ್ಜುನ್ ಖರ್ಗೆ ನಮ್ಮ ನಾಯಕ ಎಂದಿದ್ದೇಕೆ ಶಶಿ ತರೂರ್!?
ಮುಂಬೈ, ಅಕ್ಟೋಬರ್ 15: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಂಸದ ಶಶಿ ತರೂರ್ ತಾವು ನೀಡಿದ ಈ ಹಿಂದಿನ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ್ ಖರ್ಗೆ ಹೆಸರನ್ನು ಉಲ್ಲೇಖಿಸಿದಂತೆ ಪಕ್ಷದಿಂದ ಅಧಿಕೃತ ಅಭ್ಯರ್ಥಿಯೊಬ್ಬರು ಇದ್ದಾರೆ ಎಂದು ಭಾವಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಶಶಿ ತರೂರ್ ಶನಿವಾರ ಸ್ಪಷ್ಟನೆ ನೀಡಿದ್ದಾರೆ.
"ಖರ್ಗೆ ಸರ್ ನನ್ನ ನಾಯಕರೂ ಹೌದು. ನಾವು ಶತ್ರುಗಳಲ್ಲ. ನಾನು ಕಾಂಗ್ರೆಸ್ ಬದಲಾವಣೆಯ ಅಭ್ಯರ್ಥಿ" ಎಂದು ತರೂರ್ ಅವರು ಅಸ್ಸಾಂನ ಗುವಾಹಟಿಯಲ್ಲಿ ತಮ್ಮ ಉಮೇದುವಾರಿಕೆಗೆ ಬೆಂಬಲ ಸೂಚಿಸುವಂತೆ ಕೋರಲು ತೆರಳಿದ್ದರು. ಈ ವೇಳೆ ತಮ್ಮ ಹಿಂದಿನ ಹೇಳಿಕೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ನನ್ನನ್ನು ಬೆಂಬಲಿಸಿದವರು ಬಂಡಾಯಗಾರರಲ್ಲ
"ನನ್ನನ್ನು ಬೆಂಬಲಿಸಿದವರು ಬಂಡಾಯಗಾರರಲ್ಲ ಅಥವಾ ಗಾಂಧಿಯವರ ವಿರುದ್ಧ ಅಲ್ಲ...ಇದು ತಪ್ಪು ಕಲ್ಪನೆ. ಗಾಂಧಿಯವರು ಯಾವಾಗಲೂ ಕಾಂಗ್ರೆಸ್ ಜೊತೆಗಿದ್ದೇವೆ, ನಾವೂ ಕೂಡ ಈ ಚುನಾವಣೆಯಲ್ಲಿ ಯಾರೇ ಗೆದ್ದರೂ ಕಾಂಗ್ರೆಸ್‌ನ ಗೆಲುವು ಎಂಬ ಮನೋಭಾವದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ," ಎಂದು ತರೂರ್ ಹೇಳಿದರು.

ತಮ್ಮ ಸುತ್ತ ಸದಾ ನಾಗರಿಕರು ಇರುವರು ಎಂದ ತರೂರ್
ಮಲ್ಲಿಕಾರ್ಜುನ್ ಖರ್ಗೆ ಹಿರಿಯ ಅಭ್ಯರ್ಥಿಯಾಗಿದ್ದು, ಹಿರಿಯ ನಾಯಕರು ಅವರ ಸುತ್ತಲೂ ಒಟ್ಟುಗೂಡುತ್ತಾರೆ ಎಂದು ನಾನು ಯಾವಾಗಲೂ ನಿರೀಕ್ಷಿಸಿದ್ದೆ. ಅದು ಖರ್ಗೆಯವರ ನಾಮನಿರ್ದೇಶನ ನಮೂನೆ ಮತ್ತು ಅಲ್ಲಿನ ಸಹಿ ಮತ್ತು ಅವರ ಪ್ರಚಾರದ ಹಾದಿಯಿಂದ ಸ್ಪಷ್ಟವಾಗಿದೆ. ಅವರು ಎಲ್ಲಿಗೆ ಹೋದರೂ ಸುತ್ತಲೂ ಅನುಭವಿಗಳು ಇರುತ್ತಾರೆ. ಆದರೆ ನಾನು ಎಲ್ಲಿಗೆ ಹೋದರೂ ಅಲ್ಲಿ ಸರಳ ನಾಗರಿಕರಿದ್ದಾರೆ," ಎಂದು ಶಶಿ ತರೂರ್ ಹೇಳಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆಯಿಂದ ಸಾಮೂಹಿಕ ನಾಯಕತ್ವ ಜಪ
ತಾವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟಿದ್ದು, ಎಲ್ಲರೊಂದಿಗೆ ಸೇರಿಕೊಂಡು ಕೆಲಸ ಮಾಡುವುದರ ಮೂಲಕ ಪಕ್ಷವನ್ನು ಮತ್ತಷ್ಟು ಎತ್ತರಕ್ಕೆ ತಗೆದುಕೊಂಡು ಹೋಗುವುದಾಗಿ ಈ ಹಿಂದೆ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದರು.
"ನನಗೆ ಸಮಾಲೋಚನೆ ಮತ್ತು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಜನರು ನನ್ನನ್ನು ಹಿಂಬಾಲಿಸುವುದರಲ್ಲಿ ನನಗೆ ನಂಬಿಕೆ ಇಲ್ಲ, ಆದರೆ ಅವರು ನನ್ನ ಪಕ್ಕದಲ್ಲಿ ನಡೆಯಬೇಕೆಂದು ನಾನು ಬಯಸುತ್ತೇನೆ. ಒಟ್ಟಾಗಿ ನಾವು ಪಕ್ಷದ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುತ್ತೇವೆ," ಎಂದು ಎಐಸಿಸಿ ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದರು.

ಅಕ್ಟೋಬರ್ 19ರಂದು ಎಐಸಿಸಿ ಅಧ್ಯಕ್ಷರ ಭವಿಷ್ಯ ನಿರ್ಧಾರ
ಭಾರತದಲ್ಲಿ ಬರೋಬ್ಬರಿ 26 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಒಲಿದು ಬರುತ್ತಿದೆ. ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಅಥವಾ ಕೇರಳದ ಶಶಿ ತರೂರ್ ನಡುವೆೆ ಪೈಪೋಟಿ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಹೈಕಮಾಂಡ್ ಬೆಂಬಲಿತ ಅಭ್ಯರ್ಥಿ ಆಗಿ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸಿದರೆ, ಕೇರಳದ ಶಶಿ ತರೂರ್ ಪ್ರತಿಸ್ಪರ್ಧಿ ಆಗಿ ಕಣಕ್ಕೆ ಇಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯು ಅಕ್ಟೋಬರ್ 17ರಂದು ನಡೆಯಲಿದ್ದು, ಫಲಿತಾಂಶವು ಅಕ್ಟೋಬರ್ 19ರಂದು ಹೊರ ಬೀಳಲಿದೆ. ಒಟ್ಟು 9100 ಕಾಂಗ್ರೆಸ್ ನಾಯಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.












Click it and Unblock the Notifications