IMD Weather Forecast: ಹವಾಮಾನ ವೈಪರೀತ್ಯ, 7 ದಿನ ಈ ಭಾಗಗಳಲ್ಲಿ ತೀವ್ರ ಚಳಿ, ಶೀತ ಅಲೆ
ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ತೀವ್ರ ಚಳಿ, ದಟ್ಟ ಮಂಜು ಹಾಗೂ ತಾಪಮಾನ ಇಳಿಕೆಯ ವಾತಾವರಣ ಇವತ್ತು ಮುಂದುವರಿದಿದೆ. ಒಂದೆರಡು ಕಡೆಗಳಲ್ಲಿ ಸಮುದ್ರ ಮೇಲ್ಮೈನಲ್ಲಿ ಉಂಟಾದ ವೈಪರೀತ್ಯಗಳು ಸಹ ಹವಾಮಾನದ ಮೇಲೆ ಪ್ರಭಾವ ಬೀರಲಿವೆ. ಮುಂದಿನ ಏಳು ದಿನ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಶೀತದ ಅಲೆ ಮುಂದುವರಿಯಲಿದ್ದು, ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಮುನ್ಸೂಚನೆ ನೀಡಿದೆ.
ಪಶ್ಚಿಮ ಹಿಮಾಲಯ ಪ್ರದೇಶದ ಸುತ್ತ ಮುತ್ತ ಡಿಸೆಂಬರ್ 27ರಿಂದ ಹೊಸದಾಗಿ ಹವಾಮಾನ ಬದಲಾವಣೆ ಆಗುವ ನಿರೀಕ್ಷೆ ಇದೆ. ಇದರಿಂದಾಗಿ ಈ ಭಾಗಗಳಲ್ಲಿ ತಾಪಮಾನ ಇಳಿಕೆ ಹಾಗೂ ಚಳಿ ಹೆಚ್ಚಾಗಲಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ ಶೀತ ಅಲೆಯು ಮೇಲುಗೈ ಸಾಧಿಸಿದೆ. ಇಲ್ಲಿನ ಜನರ ಆರೋಗ್ಯದ ಮೇಲೆ ಪ್ರತಿಕೂಲ ಹವಾಮಾನದ ದುಷ್ಪರಿಣಾಮ ಉಂಟಾಗಿದೆ. ಉತ್ತರಾಖಂಡದ ಕೆಲವು ಭಾಗಗಳಲ್ಲಿ ತೀವ್ರ ಚಳಿ ದಾಖಲಾಗಿದೆ.

ದಟ್ಟ ಮಂಜು: ರೈಲು, ರಸ್ತೆ ಸಾರಿಗೆ ವ್ಯತ್ಯಯ ಸಾಧ್ಯತೆ
ಮುಂದಿನ ಐದು ದಿನ (ಡಿಸೆಂಬರ್ 29) ಸಿಕ್ಕಿಂ, ಅಸ್ಸಾಂ ಮತ್ತು ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಬಿಹಾರ, ಮಧ್ಯಪ್ರದೇಶ, ನಾಗಾಲ್ಯಾಂಡ್, ಒಡಿಶಾ ಹಾಗೂ ಪಶ್ಚಿಮ ಬಂಗಾಳ ಹಲವೆಡೆ ದಟ್ಟವಾದ ಮಂಜು ಆವರಿಸುವ ಸಂಭವವಿದೆ. ಇದರಿಂದ ರಸ್ತೆ ಮತ್ತು ರೈಲು ಸಂಚಾರ ವ್ಯತ್ಯಯವಾಗುವ ನಿರೀಕ್ಷೆ ಇದೆ. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ.
ಇನ್ನೂ ಹರಿಯಾಣ, ಚಂಡೀಗಢ ಮತ್ತು ದೆಹಲಿ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಲಡಾಖ್ ಗಿಲ್ಗಿಟ್ ಮುಜಫರಾಬಾದ್ ಭಾಗಗಳಲ್ಲಿ ಮತ್ತು ಪಂಜಾಬ್, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಅಥವಾ ಅತೀವ ಚಳಿ ಬಾಧಿಸಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ನಾಳೆ ಡಿಸೆಂಬರ್ 25ರಂದು ದೆಹಲಿ, ಜಾರ್ಖಂಡ್, ಪಂಜಾಬ್, ರಾಜಸ್ಥಾನದ ಕೆಲವು ಪ್ರದೇಶಗಳು, ಛತ್ತೀಸ್‌ಗಢ, ಹರಿಯಾಣ ಮತ್ತು ಚಂಡೀಗಢ ರಾಜ್ಯಗಳ ಪ್ರತ್ಯೇಕ ಕಡೆಗಳಲ್ಲಿ ತೀವ್ರ ಚಳಿ ಕಂಡು ಬರಲಿದೆ.
ಹವಾಮಾನ ವೈಪರೀತ್ಯ: ಚಂಡಮಾರುತ ಪರಿಚಲನೆ
ಸಮುದ್ರ ಮೇಲ್ಮೈನಲ್ಲಿ ಅಂದರೆ ಸೊಮಾಲಿಯಾ ಕರಾವಳಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸಮುದ್ರ ಭಾಗಗಳು, ಕೊಮೊರಿಯನ್ ಪ್ರದೇಶ ಮತ್ತು ಮನ್ನಾರ್ ಕೊಲ್ಲಿಯ ಕೆಲವು ಭಾಗಗಳಲ್ಲಿ ಗಂಟೆಗೆ 45 ರಿಂದ 55 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಈ ಗಾಳಿಯ ವೇಗ ಗಂಟೆಗೆ 65 ಕಿ.ಮೀ.ಗೆ ಹೆಚ್ಚಾಗುವ ನಿರೀಕ್ಷೆ ಇದೆ. ಈಶಾನ್ಯ ಭಾರತದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 12.6 ಕಿಲೋ ಮೀಟರ್ ಎತ್ತರದಲ್ಲಿ ಟ್ರಪ್ ಉಂಟಾಗಿದೆ.
ಕೇರಳದ ದಕ್ಷಿಣಕ್ಕೆ ಹೊಂದಿಕೊಂಡಿರುವ ಆಗ್ನೇಯ ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1.5 ಕಿಲೋ ಮೀಟರ್ ಎತ್ತರದವರೆಗೆ ವಾಯು ಚಂಡಮಾರುತ ಪರಿಚಲನೆ ವಿಸ್ತರಿಸಿದೆ. ಈ ವೈಪರೀತ್ಯಗಳು ದಕ್ಷಿಣ ಭಾರತದ ಹವಾಮಾನ ಸ್ಥಿತಿಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗೆ ಬಂಗಾಳಕೊಲ್ಲಿ ಒಂದೆರಡು ಕಡೆ, ಪಾಕಿಸ್ತಾನ ಕರಾವಳಿ ಭಾಗದ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಸಣ್ಣ ಪ್ರಮಾಣದಲ್ಲಿ ಸುಳಿಗಾಳಿ ಉಂಟಾಗಿದೆ.












Click it and Unblock the Notifications