ಕಾಕ್ರೋಚ್ ಜನತಾ ಪಾರ್ಟಿಗೆ ರಮ್ಯಾ - ಪ್ರಕಾಶ್ ರಾಜ್ ಬೆಂಬಲ ಹೇಳಿದ್ದೇನು: ಜೆನ್‌ಜೀ ಅಭಿಯಾನ ರಾಜಕೀಯ ಸ್ವರೂಪ, ಎಎಪಿ ಗೇಮ್ ?
Cockroach Janata Party: ಭಾರತದಲ್ಲಿ ಕಳೆದ ಒಂದು ವಾರದಿಂದಲೂ ಕಾಕ್ರೋಚ್ ಜನತಾ ಪಾರ್ಟಿ ಭಾರೀ ಸದ್ದು ಮಾಡುತ್ತಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಬಹುದೊಡ್ಡ ಸೋಶಿಯಲ್ ಮೀಡಿಯಾ ಅಭಿಯಾನವಾಗಿ ಕಾಕ್ರೋಚ್ ಜನತಾ ಪಾರ್ಟಿಯ ಅಭಿಯಾನ ಬದಲಾಗಿದೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಹಾಗೂ ಜನ ಲೋಕಪಾಲ್ ಬಿಲ್ ಜಾರಿ ಮಾಡಬೇಕು ಎಂದು ಈ ಹಿಂದೆ ಯುವಕರು ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದರು. ಆಗ ಸೋಶಿಯಲ್ ಮೀಡಿಯಾದಲ್ಲಿ ಯುವಕರು ಸಕ್ರಿಯವಾಗುತ್ತಿದ್ದ ದಿನಗಳು. ಈಗ ಪ್ರಾರಂಭವಾಗಿರುವ ಜೆನ್‌ಜೀಗಳ ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನವು ಹಲವು ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ನಟಿ ಹಾಗೂ ರಾಜಕಾರಣಿ ರಮ್ಯಾ, ನಟ ಪ್ರಕಾಶ್ ರಾಜ್ ಅವರು ಸಹ ಈ ಅಭಿಯಾನಕ್ಕೆ ಬೆಂಬಲ ಕೊಟ್ಟಿದ್ದಾರೆ. ಅಲ್ಲದೆ ಆಮ್ ಆದ್ಮಿ ಪಾರ್ಟಿಯೂ ಸಹ ಸೋಶಿಯಲ್ ಮೀಡಿಯಾವನ್ನು ಹೆಚ್ಚೆಚ್ಚು ಬಳಸಿಕೊಂಡಿತ್ತು. ಈ ಅಭಿಯಾನದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆಮ್ ಆದ್ಮಿ ಪಾರ್ಟಿಯಲ್ಲಿ ಇದ್ದವರು. ಈ ಕಾರಣಕ್ಕೆ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು 2020 ಮತ್ತು 2023ರ ನಡುವೆ ಅವರು ಆಮ್ ಆದ್ಮಿ ಪಕ್ಷದಲ್ಲಿ ಕೆಲಸ ಮಾಡಿದ್ದರು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಚುನಾವಣಾ ಪ್ರಚಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿಯು ಹಿನ್ನಡೆ ಅನುಭವಿಸುತ್ತಿದೆ. ಎಎಪಿಯ ಭದ್ರಕೋಟೆಯಾದ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡಿದೆ. ಪಂಜಾಬ್‌ನಲ್ಲಿಯೂ ಎಎಪಿಗೆ ಅನುಕೂಲಕರ ವಾತಾವರಣ ಇಲ್ಲ. ಮುಂದಿನ ವರ್ಷ - 2027ರಲ್ಲಿ ಪಂಜಾಬ್‌ನ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಬಿಜೆಪಿ ಸೇರಿ ವಿವಿಧ ರಾಜಕೀಯ ಪಕ್ಷಗಳಿಗೆ ಟಕ್ಕರ್ ಕೊಡುವ ಕಾರ್ಯತಂತ್ರವೇ ಎನ್ನುವ ಬಗ್ಗೆಯೂ ಈಗ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಜೆನ್‌ಜೀ ಅಭಿಯಾನವಾಗಿ ಉಳಿಯದೆ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ದೇಶದ ಜನತೆ ಹಾಗೂ ಯುವಕರ ಸಮಸ್ಯೆಗಳನ್ನು ನೇರವಾಗಿ ಅಜೆಂಡಾದಲ್ಲಿ ರೂಪಿಸದೆ, ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿರುವುದು ಸಹ ಇದಕ್ಕೆ ಕಾರಣ ಎನ್ನಲಾಗಿದೆ.

ನಟ ಪ್ರಕಾಶ್ ರಾಜ್ ಹೇಳಿದ್ದೇನು
ಇನ್ನು ಈ ಅಭಿಯಾನದ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಟ ಪ್ರಕಾಶ್ ರಾಜ್ ಅವರು, ದೇಶದ ಯುವಕರೇ ಎದ್ದೇಳಿ, ಹೋರಾಡಿ ನಿಮ್ಮ ಹಕ್ಕನ್ನು ಮರಳಿ ಪಡೆಯುವ ದಿನ ಬರಲಿ ಎಂಬ ಆಶಯ ನನದು. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ ಎಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಗಿಂತಲೂ ಕಾಕ್ರೋಚ್ ಜನತಾ ಪಾರ್ಟಿ ಫಾಲೋವರ್ಸ್ಸ್ ಸಂಖ್ಯೆ ಹೆಚ್ಚಾದ ಮೇಲೆ "ಮ್ಯಾಚ್ ಆನ್.. ಕಾಕ್ರೋಚಸ್ ಜನತಾ ಪಾರ್ಟಿ Vs ಬಿಗೋಟ್ ಜನತಾ ಪಾರ್ಟಿ" ಎಂದು ನಟ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ. ಮಾವಿನ ಹಣ್ಣಿನೊಂದಿಗೆ ಐಸ್‌ಕ್ರೀಮ್ ಸೇರಿಸಿ ತಿನ್ನುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್,
ಮೋದಿ ಜೀ... ಜಿರಳೆಗಳು ಮಾವಿನ ಹಣ್ಣಿನೊಂದಿಗೆ ಐಸ್‌ಕ್ರೀಮ್ ಸೇರಿಸಿ ತಿನ್ನುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾವಿನ ಹಣ್ಣು ತಿನ್ನುವ ಜಿರಳೆ.. ರುಚಿಕರ ಎಂದು ಬರೆದುಕೊಂಡಿದ್ದಾರೆ.
ನಟಿ - ಕಾಂಗ್ರೆಸ್ ಮುಖಂಡೆ ರಮ್ಯಾ ಬೆಂಬಲ
ದೇಶದಲ್ಲಿ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಗೆ (ಸಿಜೆಪಿ) ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ 'ಸಿಜೆಪಿ'ಗೆ ತಮ್ಮ ಪರೋಕ್ಷ ಬೆಂಬಲ ಸೂಚಿಸಿದ್ದಾರೆ. ವ್ಲಾಗರ್ ಹಾಗೂ ನಟ ಅಲೆನ್ ಗೊನ್ಸಾಲ್ವೆಸ್ ಅವರು, "ನಾನು ಕಾಕ್ರೋಚ್ ಜನತಾ ಪಾರ್ಟಿಯ ಮೊದಲ ಶಾಸಕನಾಗುತ್ತೇನೆ" ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ನಟಿ ರಮ್ಯಾ ಅವರು "ನನ್ನ ಮತ ನಿಮಗೆ" ಎಂದು ಕಮೆಂಟ್ ಮಾಡಿದ್ದು, ಅವರ ಪ್ರತಿಕ್ರಿಯೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ.
ಶಶಿ ತರೂರ್ ಹೇಳಿದ್ದೇನು
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, CJP ಅಭಿಯಾನವು ದೇಶದ ಯುವಕರ ಮನಸ್ಥಿತಿಯನ್ನು ತೋರಿಸುತ್ತಿದೆ. ಮುಖ್ಯ ರಾಜಕೀಯ ಪಕ್ಷಗಳಿಂದ ತಮ್ಮ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಭಾವನೆ ಯುವಕರಲ್ಲಿ ಇದೆ. ಅದರಿಂದಲೇ ಅವರು ತಮ್ಮ ಅಭಿಪ್ರಾಯ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಲು ಈ ರೀತಿಯ ವೇದಿಕೆಗಳನ್ನು ಬಳಸುತ್ತಿದ್ದಾರೆ. CJP ಈಗ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಪಡೆದುಕೊಂಡಿರುವುದು ಜನರ ಅತೃಪ್ತಿ ಮತ್ತು ಹತಾಶೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾರೆಲ್ಲ ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ಕೊಟ್ಟಿದ್ದಾರೆ ?
ನಟ ಪ್ರಕಾಶ್ ರಾಜ್, ನಟಿ ರಮ್ಯಾ, ನಟಿ ಉರ್ಫಿ ಜಾವೇದ್, ಗಾಯಕಿ ಚಿನ್ಮಯಿ ಶ್ರೀಪಾದ, ನಿರ್ದೇಶಕ ಅನುರಾಗ್ ಕಶ್ಯಪ್, ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಸೇರಿದಂತೆ ಸಿನಿಮಾ ಕ್ಷೇತ್ರದ ಹಲವರು ಈ ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ತೃಣಮೂಲ ಕಾಂಗ್ರೆಸ್‌ನ ಮುಖಂಡರಾದ ಮಹುವಾ ಮೊಯಿತ್ರಾ, ಕೀರ್ತಿಅಜಾದ್, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಯೂಟ್ಯೂಬರ್ ಧ್ರುವರಾಠಿ ಸಹ ಈ ಜೆನ್‌ಜೀ ಆಂದೋಲನಕ್ಕೆ ಬೆಂಬಲ ಘೋಷಿಸಿದ್ದಾರೆ.














Click it and Unblock the Notifications