ಚಳಿ ಇನ್ನಷ್ಟು ಹೆಚ್ಚಳ: ಈ ರಾಜ್ಯಗಳಲ್ಲಿ ಮಂಜು ಬೀಳುವ ಸಾಧ್ಯತೆ
ನವದೆಹಲಿ, ಡಿಸೆಂಬರ್ 17: ಈಗ ಚಳಿಗಾಲವು ಬಂದಿದೆ. ಈ ಹಿನ್ನೆಲೆಯಿಂದಾಗಿ ಮುಂದಿನ ಐದು ದಿನಗಳಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ, ಗುಜರಾತ್‌ನ ಕೆಲವು ಭಾಗಗಳು ಮತ್ತು ಉತ್ತರ ರಾಜಸ್ಥಾನ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಶೀತ ಗಾಳಿಯಿಂದಾಗಿ ಚಳಿ ಹೆಚ್ಚಳ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕೆಲವು ಪ್ರದೇಶಗಳಲ್ಲಿ ದಟ್ಟವಾದ ಮಂಜು ಬೀಳುವ ಸಾಧ್ಯತೆ ಇದೆ ಎಂದು ಕೂಡಾ ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಮಧ್ಯ ಭಾರತ ಮತ್ತು ಗುಜರಾತ್‌ಗೆ ಹೊಂದಿಕೊಂಡಿರುವ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ತಾಪಮಾನವು ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಯುವ ಮುನ್ಸೂಚನೆ ಇದೆ ಎಂದೂ ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಭಾರತೀಯ ಹವಾಮಾನ ಇಲಾಖೆ ಹವಾಮಾನದ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ಡಿಸೆಂಬರ್ 17 ರಿಂದ ಡಿಸೆಂಬರ್ 21 ರ ಅವಧಿಯಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಶೀತ ಗಾಳಿ/ತೀವ್ರವಾದ ಶೀತ ಗಾಳಿಗಳು ಉಂಟಾಗಲಿದೆ. ಡಿಸೆಂಬರ್ 18 ರಿಂದ ಡಿಸೆಂಬರ್ 21 ರ ಅವಧಿಯಲ್ಲಿ ಉತ್ತರ ರಾಜಸ್ಥಾನದಲ್ಲಿ, ಡಿಸೆಂಬರ್ 19 ರಿಂದ ಡಿಸೆಂಬರ್ 21 ರವರೆಗೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮತ್ತು ಡಿಸೆಂಬರ್ 19 ಮತ್ತು 20 ರಂದು ಗುಜರಾತ್ ಪ್ರದೇಶದಲ್ಲಿ ಶೀತ ಗಾಳಿ/ತೀವ್ರವಾದ ಶೀತ ಗಾಳಿ ಉಂಟಾಗಲಿದೆ," ಎಂದು ತಿಳಿಸಿದೆ.

ಮಂಜು ಆವರಿಸುವ ಸಾಧ್ಯತೆ
ಶುಕ್ರವಾರ ಮತ್ತು ಶನಿವಾರದಂದು ಪಂಜಾಬ್ ಮತ್ತು ಹರಿಯಾಣದ ಪ್ರತ್ಯೇಕ ಪ್ರದೇಶಗಳಲ್ಲಿ ಬೆಳಿಗ್ಗೆ ದಟ್ಟವಾದ ಮಂಜು ಆವರಿಸುವ ಮುನ್ಸೂಚನೆ ಇದೆ. "ಮುಂದಿನ ನಾಲ್ಕು ದಿನಗಳಲ್ಲಿ ಸೌರಾಷ್ಟ್ರ ಮತ್ತು ಕಚ್, ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತ್ಯೇಕವಾದ ಭಾಗಗಳಲ್ಲಿ ಬೆಳಗಿನ ಸಮಯದಲ್ಲಿ ಹೆಚ್ಚಾಗಿ ಮಂಜು ಬೀಳುವ ಸಾಧ್ಯತೆ ಇದೆ," ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇನ್ನು ಬಯಲು ಪ್ರದೇಶಗಳಲ್ಲಿ, ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ ಐಎಂಡಿ ಶೀತ ಗಾಳಿ ಸಾಧ್ಯತೆಯನ್ನು ಘೋಷಣೆ ಮಾಡುತ್ತದೆ. ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಅಥವಾ ಕಡಿಮೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕಡಿಮೆಯಾದಾಗ ಶೀತ ಗಾಳಿ ಬರುವ ಸಾಧ್ಯತೆ ಇದೆ ಎಂದು ಘೋಷಣೆ ಮಾಡಲಾಗುತ್ತದೆ. ಕನಿಷ್ಠ ತಾಪಮಾನವು ಎರಡು ಡಿಗ್ರಿ ಸೆಲ್ಸಿಯಸ್‌ಗೆ ಇಳಿದಾಗ ಅಥವಾ ಸಾಮಾನ್ಯದಿಂದ 6.4 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ತೀವ್ರ ಶೀತ ಗಾಳಿ ಬರುವ ಸಾಧ್ಯತೆಯನ್ನು ಘೋಷಣೆ ಮಾಡಲಾಗುತ್ತದೆ.
ಇಲ್ಲಿದೆ ರಾಜ್ಯವಾರು ಹವಾಮಾನ ಮುನ್ಸೂಚನೆ
* ಮುಂದಿನ 3 ದಿನಗಳಲ್ಲಿ ಉತ್ತರ ರಾಜಸ್ಥಾನದಲ್ಲಿ ತೀವ್ರ ಶೀತ ಗಾಳಿ ಹೆಚ್ಚಳವಾಗುವ ಸಾಧ್ಯತೆ ಇದೆ. 19ನೇ ಮತ್ತು 20ನೇ ಡಿಸೆಂಬರ್, 2021 ರಂದು ಪಂಜಾಬ್ ಮತ್ತು ಹರಿಯಾಣ ಮತ್ತು ಚಂಡೀಗಢದಲ್ಲಿಯೂ ತೀವ್ರ ಶೀತ ಗಾಳಿ ಹೆಚ್ಚಳವಾಗುವ ಸಾಧ್ಯತೆ ಇದೆ.
* ಮುಂದಿನ 4 ದಿನಗಳಲ್ಲಿ ಜಮ್ಮು, ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ಹಿಮಾಚಲ ಪ್ರದೇಶ ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಶೀತ ಗಾಳಿ ಸಾಧ್ಯತೆ ಇದೆ.
* ಗುಜರಾತ್‌ನಲ್ಲಿ ಮುಂದಿನ 3 ದಿನಗಳಲ್ಲಿ ಶೀತ ಗಾಳಿ ಸಾಧ್ಯತೆ ಇದೆ. 19ನೇ-21ನೇ ಡಿಸೆಂಬರ್‌ನಲ್ಲಿ ಪಶ್ಚಿಮ ಯುಪಿಯಲ್ಲಿ ಶೀತ ಗಾಳಿ ಸಾಧ್ಯತೆ ಇದೆ.
* ವಾಯುವ್ಯ ಭಾರತ ಮತ್ತು ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2-3 °C ರಷ್ಟು ಕ್ರಮೇಣ ಕುಸಿತ, ಮುಂದಿನ 4 ದಿನಗಳಲ್ಲಿ ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ 3-5°C ಕುಸಿತ ಸಾಧ್ಯತೆ
* 18ನೇ-20ನೇ ಡಿಸೆಂಬರ್‌ನಲ್ಲಿ ಪಂಜಾಬ್‌ನ ಮೇಲೆ ದಟ್ಟವಾದ/ಅತ್ಯಂತ ದಟ್ಟವಾದ ಮಂಜು ಆವರಿಸುವ ಸಾಧ್ಯತೆ ಇದೆ. 18ನೇ-19ನೇ ಡಿಸೆಂಬರ್‌ನಲ್ಲಿ ಹರಿಯಾಣ ಮತ್ತು ಚಂಡೀಗಢದಲ್ಲಿ, 18 ರಂದು ಉತ್ತರ ರಾಜಸ್ಥಾನದಲ್ಲಿ, 18 ಮತ್ತು 19 ರಂದು ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ದಟ್ಟವಾದ/ಅತ್ಯಂತ ದಟ್ಟವಾದ ಮಂಜು ಆವರಿಸುವ ಸಾಧ್ಯತೆ ಇದೆ.
* ಮುಂದಿನ 3 ದಿನಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢ ಮತ್ತು ಉತ್ತರ ರಾಜಸ್ಥಾನದ ಪ್ರತ್ಯೇಕ ಭಾಗಗಳಲ್ಲಿ ಬೆಳಗಿನ ಸಮಯದಲ್ಲಿ ಹಿಮ ಆವರಿಸಲಿದೆ.











Click it and Unblock the Notifications