ಚೆನ್ನೈ: ಮುಂದಿನ 2 ವರ್ಷಗಳಲ್ಲಿ 300 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ 3 ಹೊಸ ಫ್ಲೈಓವರ್
ಈ ಹೊಸ ಯೋಜನೆಗಳಿಂದ ಎರಡು ಲಕ್ಷ ಜನರು ಪ್ರಯೋಜನ ಪಡೆಯುವ ನಿರೀಕ್ಷೆಯಿದ್ದು, ಪ್ರತಿದಿನ ಸುಮಾರು 40,000 ವಾಹನಗಳು ಈ ಮೇಲ್ಸೇತುವೆಗಳಲ್ಲಿ ಸಂಚರಿಸುವ ನಿರೀಕ್ಷೆಯಿದೆ
ಚೆನ್ನೈ, ಮಾರ್ಚ್ 10: ಮುಂದಿನ ಎರಡು ವರ್ಷಗಳಲ್ಲಿ ಚೆನ್ನೈನಲ್ಲಿ ಮೂರು ಹೊಸ ಮೇಲ್ಸೇತುವೆಗಳು ತಲೆ ಎತ್ತಲಿವೆ. 369.04 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಡಂಬಾಕ್ಕಂ, ತೊಂಡಿಯಾರ್‌ಪೇಟ್ ಮತ್ತು ತಿರು ವಿ ಕಾ ನಗರ ವಲಯಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ಯೋಜನೆಗಳಿಂದ ಎರಡು ಲಕ್ಷ ಜನರು ಪ್ರಯೋಜನ ಪಡೆಯುವ ನಿರೀಕ್ಷೆಯಿದ್ದು, ಪ್ರತಿದಿನ ಸುಮಾರು 40,000 ವಾಹನಗಳು ಈ ಮೇಲ್ಸೇತುವೆಗಳಲ್ಲಿ ಸಂಚರಿಸುವ ನಿರೀಕ್ಷೆಯಿದೆ. ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಪೌರಾಡಳಿತ ಸಚಿವ ಕೆ ಎನ್ ನೆಹರು ಇತ್ತಿಚೆಗೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.

*ಮೂರು ಹೊಸ ಮೇಲ್ಸೇತುವೆಗಳ ಮಾಹಿತಿ*
1. ಸಿಐಟಿ ನಗರದ ಮೂಲಕ ಟಿ ನಗರ ಮತ್ತು ಅಣ್ಣಾ ಸಲೈಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯನ್ನು ಅಂದಾಜು 131 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಪಿ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇಲ್ಸೇತುವೆಯ ಒಟ್ಟು ಉದ್ದ 1,200 ಮೀಟರ್ ಆಗಿದ್ದು, ಸುಮಾರು 8.40 ಮೀಟರ್ ಅಗಲವಿರಲಿದೆ.
ಎರಡು ಪಥಗಳ ಮೇಲ್ಸೇತುವೆಯು ಕೆಳಮುಖವಾದ ಇಳಿಜಾರು (ಸರವಣ ಸ್ಟೋರ್ಸ್ ಬಳಿ ಪೂರ್ವ ಭಾಗದಲ್ಲಿ) ಮತ್ತು ಪಾನಗಲ್ ಪಾರ್ಕ್ ಕಡೆಗೆ ಹೋಗುವವರಿಗೆ ಮೇಲ್ಮುಖವಾದ ರಾಂಪ್ ಅನ್ನು ಹೊಂದಿರುತ್ತದೆ. ನಗರದ ಶಾಪಿಂಗ್ ಹಬ್ ಎಂದು ಪರಿಗಣಿಸಲಾದ ಟಿ ನಗರದಲ್ಲಿ ಫ್ಲೈಓವರ್ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2. ತೊಂಡಿಯಾರ್‌ಪೇಟೆ - ತಿರುವಿ ಕಾ ನಗರ ವಲಯಗಳ ನಡುವೆ ಗಣೇಶಪುರಂ ಸಬ್‌ವೇ ಮೇಲೆ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ 142 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣವಾಗಲಿದೆ. 678 ಮೀಟರ್ ಉದ್ದ ಮತ್ತು 15.20 ಮೀಟರ್ ಅಗಲವನ್ನು ಹೊಂದಿರುತ್ತದೆ. ಗಣೇಶಪುರಂ ಸುರಂಗಮಾರ್ಗವು ಮಳೆಯ ಸಮಯದಲ್ಲಿ ಪ್ರವಾಹಕ್ಕೆ ಹೆಚ್ಚು ಹೆಸರಾಗಿದ್ದು, ದೊಡ್ಡ ಟ್ರಾಫಿಕ್ ಜಾಮ್ ಉಂಟಾಗುವ ನಗರ ಪ್ರದೇಶಗಳಲ್ಲಿ ಒಂದಾಗಿದೆ.
ಪೆರಂಬೂರ್, ಪುಲಿಯಾಂತೋಪ್, ಪುರಸಾವಲ್ಕಮ್ ಮತ್ತು ಎಗ್ಮೋರ್‌ನಂತಹ ಚೆನ್ನೈನ ಉತ್ತರ ಭಾಗದಿಂದ ಬರುವ ವಾಹನ ಚಾಲಕರಿಗೆ ಈ ಸುರಂಗಮಾರ್ಗವು ಮುಖ್ಯ ಮಾರ್ಗವಾಗಿದೆ. ಆರು ಪಥದ ರೈಲ್ವೆ ಮೇಲ್ಸೇತುವೆ ಅಗತ್ಯವಿದ್ದರೂ, ಸದ್ಯಕ್ಕೆ ನಾಲ್ಕು ಪಥದ ಮೇಲ್ಸೇತುವೆ ಕಾಮಗಾರಿ ಆರಂಭವಾಗಲಿದೆ ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3. ಕೊರುಕ್ಕುಪೇಟೆ ರೈಲು ನಿಲ್ದಾಣದ ಬಳಿಯ ಮನಾಲಿ ರಸ್ತೆಯಲ್ಲಿರುವ ರೈಲ್ವೆ ಜಂಕ್ಷನ್ ಮೇಲಿನ ಮೇಲ್ಸೇತುವೆಯನ್ನು 96.04 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಇದು 840 ಮೀಟರ್ ಉದ್ದ ಮತ್ತು 8.4 ಮೀಟರ್ ಅಗಲವನ್ನು ಹೊಂದಿರುತ್ತದೆ. ಎರಡು ಪಥಗಳ ಮೇಲ್ಸೇತುವೆಯು ಸುಮಾರು 1.5 ಲಕ್ಷ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಂದಾಜು ಮಾಡಲಾಗಿದೆ.
ಈ ಮೇಲ್ಸೇತುವೆಯ್ನನು 25,000 ಜನರು ಇದನ್ನು ಪ್ರತಿದಿನ ಬಳಸುವ ನಿರೀಕ್ಷೆಯಿದೆ. ಇಲ್ಲಿ ಮೇಲ್ಸೇತುವೆ ಬೇಕು ಎಂಬುದು ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿದೆ. ಈ ಪ್ರದೇಶದಲ್ಲಿ ವಾಹನ ಸವಾರರು ಪ್ರತಿದಿನ ಸುಮಾರು 30 ರಿಂದ 40 ನಿಮಿಷಗಳ ಕಾಲ ರೈಲ್ವೆ ಕ್ರಾಸಿಂಗ್‌ನಲ್ಲಿ ಕಾಯಬೇಕಾಗುತ್ತದೆ. ಹೀಗಾಗಿ ಮೇಲ್ಸೇತುವೆಗಾಗಿ ಬೇಡಿಕೆ ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications