ಬೆಂಗಳೂರಿನಿಂದ ಚೆನ್ನೈಗೆ ಕೇವಲ 4 ಗಂಟೆ 30 ನಿಮಿಷ! ಮಜಾ ನೀಡುತ್ತೆ ಈ ಹೊಸ ಎಕ್ಸ್ಪ್ರೆಸ್ವೇ ಪ್ರಯಾಣ
ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಉಪಯುಕ್ತ ಮಾಹಿತಿಯೊಂದು ಹೊರಬಿದ್ದಿದೆ. ಬಿಎಚ್ಪಿಯನ್ ಸದಸ್ಯ ರವಿಬ್ ಅವರು ತಮ್ಮ ಇತ್ತೀಚಿನ ಚೆನ್ನೈ-ಬೆಂಗಳೂರು ರಸ್ತೆ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ, ಹೊಸ ಎಕ್ಸ್ಪ್ರೆಸ್ವೇ ಮಾರ್ಗದ ವೇಗದ ಅನುಕೂಲತೆಗಳ ಜೊತೆಗೆ ಆತಂಕಕಾರಿ ಸುರಕ್ಷತಾ ಸಮಸ್ಯೆಯ ಕಹಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಅವರು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಪಿಎಸ್4 ತಿರುನಿನ್ರವೂರಿನಿಂದ ಸಂಜೆ 3.45ಕ್ಕೆ ಪ್ರಯಾಣ ಆರಂಭಿಸಿದ್ದರು.
ಮೊದಲನೆಯದಾಗಿ, ಈ ನೂತನ ಹೆದ್ದಾರಿ ಮಾರ್ಗದಲ್ಲಿ ಸದ್ಯ ಟೋಲ್ ಸಂಗ್ರಹ ಆರಂಭವಾಗಿದ್ದು, ಚಿತ್ತೂರುವರೆಗಿನ ಸುಮಾರು 100 ಕಿಲೋಮೀಟರ್ ವ್ಯಾಪ್ತಿಗೆ ಸರಿಸುಮಾರು 225 ಟೋಲ್ ದರವನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ವಾಹನ ಸವಾರರು ಪ್ರಯಾಣಿಸುವ ಮುನ್ನ ಈ ನಿಖರವಾದ ಶುಲ್ಕದ ದರವನ್ನು ಅಧಿಕೃತ ಟೋಲ್ ಪ್ರಕಟಣೆಯ ಮೂಲಕ ಮತ್ತೊಮ್ಮೆ ಖಚಿತಪಡಿಸಿಕೊಳ್ಳುವುದು ಉತ್ತಮ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.

ಎರಡನೆಯದಾಗಿ, ಎಕ್ಸ್ಪ್ರೆಸ್ವೇನಲ್ಲಿ ಟೋಲ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ, ಕೆಲವು ಗ್ರಾಮಸ್ಥರು ನಿಯಮಬಾಹಿರವಾಗಿ ವೇಗದ ಲೇನ್ಗಳಲ್ಲೇ ವಿರುದ್ಧ ದಿಕ್ಕಿನಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿರುವುದು ಸವಾರರಲ್ಲಿ ಆತಂಕ ಮೂಡಿಸಿದೆ. ಈ ತರಹದ ನಡೆಯಿಂದ ದೊಡ್ಡ ಮಟ್ಟದ ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದು, ಮುನ್ನೆಚ್ಚರಿಕೆಯಾಗಿ ವಾಹನ ಸವಾರರು ರಸ್ತೆಯ ಮಧ್ಯದ ಲೇನ್ ಆಶ್ರಯಿಸುವುದೇ ಸುರಕ್ಷಿತ ಎನ್ನಲಾಗಿದೆ. ದುರದೃಷ್ಟವಶಾತ್, ಈ ಆತಂಕಕಾರಿ ಬೆಳವಣಿಗೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಸಿಬ್ಬಂದಿಗೆ ದೂರು ನೀಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿಲ್ಲಾ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಪ್ರಯಾಣದ ಮಧ್ಯೆ ಸಂಜೆ 5.30ಕ್ಕೆ ಬಂಗಾರುಪಾಳ್ಯದ ನಂದಿ ಫುಡ್ ಪ್ಲಾಜಾದಲ್ಲಿ ಅವರು ಚಹಾ ಸೇವಿಸಲು ಸುಮಾರು 20 ನಿಮಿಷಗಳ ವಿರಾಮ ಪಡೆದು, ನಂತರ ಪಾಲಮನೇರು ಬೈಪಾಸ್ ಮೂಲಕ ಬೈರೆಡ್ಡಿಪಳ್ಳಿಯಿಂದ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ (BCE) ಪ್ರವೇಶಿಸಿ, ಬೈಪಾಸ್ ಮೂಲಕ ವಿ.ಕೋಟಾ ಪಟ್ಟಣವನ್ನು ದಾಟಿಕೊಂಡು ಸುಂದರಪಾಳ್ಯ ಟೋಲ್ ಮೂಲಕ ಮತ್ತೆ ಎಕ್ಸ್ಪ್ರೆಸ್ವೇಗೆ ಸೇರಿದರು.
ಎಕ್ಸ್ಪ್ರೆಸ್ವೇಯಲ್ಲಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ಕ್ರೂಸ್ ಕಂಟ್ರೋಲ್ ಬಳಸಿ ಪ್ರಯಾಣ ಮುಂದುವರಿಸಿದ ಅವರು ಸಂಜೆ 7.45ಕ್ಕೆಲ್ಲಾ ಹೊಸಕೋಟೆ ತಲುಪಿದರು. ಆದರೆ ಬೆಂಗಳೂರಿನ ವಾಹನ ಸವಾರರಿಗೆ ಪರಿಚಿತವಾಗಿರುವ ಬತ್ತರಹಳ್ಳಿ ಸಿಗ್ನಲ್ ಟ್ರಾಫಿಕ್ ಜಾಮ್ ಅವರ ಪ್ರಯಾಣದ ಕೊನೆಯ ಹಂತದಲ್ಲಿ ಅಡ್ಡಿಯಾಯಿತು. ಪರಿಣಾಮ, ಹೊಸಕೋಟೆಯಿಂದ ಕೆಲವೇ ದೂರದಲ್ಲಿದ್ದ ತಮ್ಮ ಮನೆ ತಲುಪಲು ಅವರಿಗೆ ಕೊನೆಗೆ ರಾತ್ರಿ 8.15 ಆಯಿತು!
20 ನಿಮಿಷ ಚಹಾ ಬ್ರೇಕ್ಗೂ ಸಮಯ ಕೊಟ್ಟು, ಕೇವಲ 4 ಗಂಟೆ 30 ನಿಮಿಷಗಳಲ್ಲಿ ಪ್ರಯಾಣ!
ಈ ಪ್ರಯಾಣದ ವಿಶೇಷವೆಂದರೆ, 20 ನಿಮಿಷಗಳ ಚಹಾ ವಿರಾಮ ಸೇರಿದ್ದರೂ ಚೆನ್ನೈಯಿಂದ ಬೆಂಗಳೂರಿಗೆ ಕೇವಲ 4 ಗಂಟೆ 30 ನಿಮಿಷಗಳಲ್ಲಿ ತಲುಪಿರುವುದು. ಹೊಸ ಎಕ್ಸ್ಪ್ರೆಸ್ವೇ ಮಾರ್ಗಗಳು ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ವಾಹನ ಸವಾರರ ಸಮಯವನ್ನು ಉಳಿಸುತ್ತಿದೆ ಎಂಬುದಕ್ಕೆ ಈ ಪ್ರಯಾಣವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.














Click it and Unblock the Notifications