ಜನರನ್ನ ಬೀದಿ ನಾಯಿಗೆ ಹೋಲಿಸಿದ್ರಾ ನಟ ರಾಘವ ಲಾರೆನ್ಸ್; ಏನಿದು ವಿವಾದ?
ನಟ ಮತ್ತು ನಿರ್ದೇಶಕ ರಾಘವ ಲಾರೆನ್ಸ್ ಅವರು ರಾಜಕೀಯ ಪ್ರವೇಶದ ಬಗ್ಗೆ ಹಾಗೂ ನಟ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವನ್ನು ಬೆಂಬಲಿಸಿ ಮಾತನಾಡಿದ ಪತ್ರಿಕಾಗೋಷ್ಠಿಯ ವಿಡಿಯೋ ತುಣುಕುಗಳು ಭಾರಿ ವಿವಾದ ಸೃಷ್ಟಿಸಿವೆ. ಅವರು ಜನರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಅವರು ನೀಡಿದ ಹೇಳಿಕೆ, ಅದಕ್ಕೆ ವ್ಯಕ್ತವಾದ ಆಕ್ರೋಶ ಮತ್ತು ಅವರ ಸ್ಪಷ್ಟನೆಯ ಸಂಪೂರ್ಣ ವಿವರ ಇಲ್ಲಿದೆ.
ರಾಘವ ಲಾರೆನ್ಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಲಾರೆನ್ಸ್, ವಿಜಯ್ ನೇತೃತ್ವದ ನೂತನ ಸರ್ಕಾರದ ಆಡಳಿತ ವೈಖರಿಯನ್ನು ಶ್ಲಾಘಿಸಿದರು. ಹೊಸ ಸರ್ಕಾರಕ್ಕೆ ಸ್ವಲ್ಪ ಸಮಯಾವಕಾಶ ನೀಡಬೇಕು ಎಂಬುದನ್ನು ವಿವರಿಸಲು ಅವರು ಒಂದು ಉದಾಹರಣೆ ನೀಡಿದರು. "ಈ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಹೇಗೆ ಕೆಲಸ ಮಾಡಿದೆ ಎಂದು ನೀವು ಕೇಳಿದರೆ, ಅದು ಚೆನ್ನಾಗಿ ಮಾಡಿದೆ, ಸೂಪರ್ ಆಗಿ ಕಾಣುತ್ತಿದೆ ಎಂದು ನಾನು ಹೇಳುತ್ತೇನೆ. ನಾವು ಒಂದು ಹೊಸ ಮನೆಗೆ ಹೋಗುವ ಮುನ್ನ ಒಂದೆರಡು ಬಾರಿ ನೋಡಿರುತ್ತೇವೆ. ಆದರೆ, ಅಲ್ಲಿ ವಾಸಿಸಲು ಪ್ರಾರಂಭಿಸಿದಾಗಷ್ಟೇ ಅಲ್ಲಿನ ಪೈಪ್ ಅಥವಾ ಫ್ಯಾನ್‌ಗಳಲ್ಲಿ ಸಮಸ್ಯೆ ಇರುವುದು ನಮಗೆ ನಿಧಾನವಾಗಿ ತಿಳಿಯುತ್ತದೆ ಎಂದರು.

"ಅಷ್ಟೇ ಅಲ್ಲ, ಆ ಹೊಸ ಬಡಾವಣೆಯಲ್ಲಿರುವ ಬೀದಿ ನಾಯಿಯೂ ನಮ್ಮನ್ನು ನೋಡಿ ಮೊದಲು ಬೊಗಳುತ್ತದೆ. ಅದು ನಮ್ಮೊಂದಿಗೆ ಹೊಂದಿಕೊಳ್ಳಲು ನಾವು ಅದಕ್ಕೆ ಬಿಸ್ಕೆಟ್ ಅಥವಾ ಬಿರಿಯಾನಿ ಕೊಡಬೇಕಾಗುತ್ತದೆ. ಒಂದು ಸಣ್ಣ ಮನೆ ಮತ್ತು ನಾಯಿಯ ಪರಿಸ್ಥಿತಿಯೇ ಹೀಗಿರುವಾಗ, ಇಡೀ ರಾಜ್ಯವನ್ನು ಆಳಲು ಅವರಿಗೆ ಜವಾಬ್ದಾರಿ ನೀಡಲಾಗಿದೆ. ಹಾಗಾಗಿ ಅವರಿಗೆ ಸ್ವಲ್ಪ ಸಮಯ ಕೊಡಿ. ಸಕಾರಾತ್ಮಕವಾಗಿ ಯೋಚಿಸಿ. ನೀವು ಬದಲಾವಣೆ ಬಯಸಿದ್ದೀರಿ, ಈಗ ಬದಲಾವಣೆ ಬಂದಿದೆ. ಸಮಯ ಕೊಟ್ಟರೆ ಎಲ್ಲವೂ ಸರಿಯಾಗುತ್ತದೆ ಎಂದು ನನಗೆ ಅನಿಸುತ್ತದೆ" ಎಂದಿದ್ದರು.
ಸಾರ್ವಜನಿಕರಿಂದ ಆಕ್ರೋಶ
ಪತ್ರಿಕಾಗೋಷ್ಠಿಯ ಈ ಹೇಳಿಕೆಯ ಸಣ್ಣ ಸಣ್ಣ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಲಾರೆನ್ಸ್ ಅವರು ಸರ್ಕಾರವನ್ನು ಪ್ರಶ್ನಿಸುವ ಜನರನ್ನು ಅಥವಾ ಸಾರ್ವಜನಿಕರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ದಾರೆ ಎಂದು ಹಲವರು ಅರ್ಥೈಸಿಕೊಂಡರು. ಇದರಿಂದ ಆಕ್ರೋಶಗೊಂಡ ನೆಟ್ಟಿಗರು, "ಸರ್ಕಾರವನ್ನು ಪ್ರಶ್ನಿಸುವುದು ಎಂದರೆ ಬೊಗಳುವುದಲ್ಲ, ಅದು ಪ್ರಜಾಪ್ರಭುತ್ವದ ಹಕ್ಕು. ಲಾರೆನ್ಸ್ ಅವರ ಮಾತುಗಳು ಅಧಿಕಾರದ ಅಹಂಕಾರದಂತೆ ಕಾಣುತ್ತಿವೆ" ಎಂದು ಒಬ್ಬರು ಬರೆದಿದ್ದಾರೆ.
"ಒಂದು ವೇಳೆ ಅವರು ಜನರನ್ನು ನಾಯಿಗಳಿಗೆ ಹೋಲಿಸಿದ್ದರೆ ಅದು ತುಂಬಾ ತಪ್ಪು, ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು. ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಅವರು ಇದಕ್ಕಿಂತ ಉತ್ತಮವಾದ ಉದಾಹರಣೆ ನೀಡಬಹುದಿತ್ತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಘವ ಲಾರೆನ್ಸ್ ನೀಡಿದ ಸ್ಪಷ್ಟನೆಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ರಾಘವ ಲಾರೆನ್ಸ್ ಅವರು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಂಪೂರ್ಣ ವಿಡಿಯೋವನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.
ಸಾರ್ವಜನಿಕರು ನನ್ನ ತಾಯಿ ಸಮಾನ
"ಎಲ್ಲರಿಗೂ ನಮಸ್ಕಾರ, ನನ್ನ ಇತ್ತೀಚಿನ ಪತ್ರಿಕಾಗೋಷ್ಠಿಯ ಬಗ್ಗೆ ಉಂಟಾಗಿರುವ ತಪ್ಪು ಗ್ರಹಿಕೆ ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಅಭಿಮಾನಿಗಳು ಮತ್ತು ಸಾರ್ವಜನಿಕರು ನನಗೆ ತಾಯಿಗೆ ಸಮಾನ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಾನು ಜನರನ್ನು ನಾಯಿಗಳಿಗೆ ಹೋಲಿಸಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ, ಇದು ಸಂಪೂರ್ಣವಾಗಿ ಸುಳ್ಳು ಮತ್ತು ದಾರಿ ತಪ್ಪಿಸುವ ಪ್ರಯತ್ನ. ನಾನು ಅಷ್ಟು ನಿರ್ದಯಿಯಲ್ಲ, ನಾವು ಹೊಸ ಮನೆಗೆ ಹೋದಾಗ ಅಲ್ಲಿನ ವಾತಾವರಣ, ಅಲ್ಲಿನ ನಾಯಿಗಳ ಸ್ವಭಾವ ಮತ್ತು ಅವುಗಳ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಮಯ ಹಿಡಿಯುತ್ತದೆ ಎಂದು ಮಾತ್ರ ನಾನು ಹೇಳಿದ್ದೆ. ನನ್ನನ್ನು ಹೆತ್ತ ತಾಯಿಗೆ ಸಮಾನವಾಗಿ ನಾನು ಗೌರವಿಸುವ ಜನರನ್ನು ನಾಯಿ ಎಂದು ಕರೆಯುವಷ್ಟು ನಾನು ನಿರ್ದಯಿ ಅಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂಬ ಅರ್ಥದಲ್ಲಿ ಮಾತ್ರ ತಾವು ಮಾತನಾಡಿದ್ದಾಗಿ ಹೇಳಿರುವ ಅವರು, ಯಾರೂ ಕೇವಲ ಸಣ್ಣ ತುಣುಕುಗಳನ್ನು ನೋಡಿ ನಿರ್ಧಾರಕ್ಕೆ ಬರಬೇಡಿ, ಸಂಪೂರ್ಣ ವಿಡಿಯೋ ನೋಡಿ ಸತ್ಯಾಂಶವನ್ನು ಅರ್ಥಮಾಡಿಕೊಳ್ಳಿ ಎಂದು ವಿನಂತಿಸಿದ್ದಾರೆ. ಸದ್ಯ ಲಾರೆನ್ಸ್ ಅವರು ತಮ್ಮ ನಿರ್ದೇಶನ ಮತ್ತು ನಿರ್ಮಾಣದ ಹಾರರ್ ಕಾಮಿಡಿ ಚಿತ್ರ 'ಕಾಂಚನಾ 4' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಲೋಕೇಶ್ ಕನಗರಾಜ್ ಸಿನಿಮಾಟಿಕ್ ಯೂನಿವರ್ಸ್ (LCU) ಭಾಗವಾಗಿರುವ 'ಬೆಂಜ್' ಚಿತ್ರದ ಮೂಲಕವೂ ಅವರು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.













Click it and Unblock the Notifications