ಸ್ಲಂನಿಂದ ಗೂಗಲ್ ಉದ್ಯೋಗದವರೆಗೆ! ಐಐಟಿ, ಐಐಎಂ ಇಲ್ಲದಿದ್ದರೂ 30 ಲಕ್ಷ ರೂ. ಪ್ಯಾಕೇಜ್ ಬೆನ್ನತ್ತಿದ ಬೆಂಗಳೂರು ಟೆಕ್ಕಿ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸುವುದು ಸುಲಭವಲ್ಲ. ಅದರಲ್ಲಿಯೂ ಬಡತನದ ಹಿನ್ನೆಲೆಯಿಂದ ಬಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಅಸಾಮಾನ್ಯ ಸಾಧನೆಯೇ ಸರಿ. 'ಮನಸ್ಸಿದ್ದರೆ ಮಾರ್ಗ' ಎಂಬ ಮಾತಿಗೆ ಈ ಯುವಕನ ಕಥೆಯೇ ಅತ್ಯುತ್ತಮ ಉದಾಹರಣೆ. ಬಡತನ ಹಾಗೂ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರವೇರಿದ ಟೆಕ್ ಉದ್ಯಮಿ ರಾಜ್ ವಿಕ್ರಮಾದಿತ್ಯ ಅವರ ಜೀವನಗಾಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ವಿಕಾಸ್ ಎಂಬ ಎಕ್ಸ್ ಬಳಕೆದಾರರು ರಾಜ್ ಅವರ ಈ ರೋಚಕ ಪ್ರಯಾಣದ ಕಥೆಯನ್ನು ಹಂಚಿಕೊಂಡಿದ್ದಾರೆ. ಮುಂಬೈನ ಕೊಳೆಗೇರಿಯಲ್ಲಿ ಬೆಳೆದು, ಗೂಗಲ್‌ನಂತಹ ದೈತ್ಯ ಕಂಪನಿಯಲ್ಲಿ ಕೆಲಸ ಮಾಡಿ, ಇದೀಗ ಸ್ವಂತ ಕಂಪನಿ ಕಟ್ಟಿ ಬೆಳೆಸಿರುವ ಇವರ ಸಾಧನೆ ಯುವಜನತೆಗೆ ದೊಡ್ಡ ಸ್ಪೂರ್ತಿಯಾಗಿದೆ.

Raj Vikramaditya

ರಾಜ್ ವಿಕ್ರಮಾದಿತ್ಯ ಜನಿಸಿದ ನಂತರ ಅವರ ಕುಟುಂಬವು ಮುಂಬೈಗೆ ವಲಸೆ ಬಂದಿತ್ತು. ಅಲ್ಲಿ ಅವರು ಅತ್ಯಂತ ಕಡು ಬಡತನವನ್ನು ಎದುರಿಸಬೇಕಾಯಿತು. ಮುಂಬೈನ ದಟ್ಟ ಜನದಟ್ಟಣೆಯ ಕೊಳೆಗೇರಿಯೊಂದರ ಅತ್ಯಂತ ಚಿಕ್ಕದಾದ ಒಂದು ಕೋಣೆಯ ಮನೆಯಲ್ಲಿ ಇಡೀ ಕುಟುಂಬ ವಾಸಿಸುತ್ತಿತ್ತು. ಅಲ್ಲಿನ ಜೀವನ ಪರಿಸ್ಥಿತಿ ಎಷ್ಟು ಕಷ್ಟಕರವಾಗಿತ್ತು ಅಂದರೆ, ಸುಮಾರು ಐವತ್ತು ಕುಟುಂಬಗಳು ಕೇವಲ ಒಂದೇ ಒಂದು ಶೌಚಾಲಯವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ರಾಜ್ ತಮ್ಮ ಕನಸುಗಳನ್ನು ಕೈಬಿಡಲಿಲ್ಲ.

ರಾಜ್ ಅವರು ಕಲ್ಕತ್ತಾ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ತಮ್ಮ ಶೈಕ್ಷಣಿಕ ಗುರಿಗಳತ್ತ ಕಠಿಣ ಶ್ರಮ ವಹಿಸಿದರು. ಎಂಜಿನಿಯರಿಂಗ್ ಓದುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಐಐಟಿ ಅಥವಾ ಎನ್‌ಐಟಿಗಳಲ್ಲಿ ಓದಬೇಕು ಎಂಬ ಕನಸಿರುತ್ತದೆ. ಶಾಲಾ ಶಿಕ್ಷಣದ ನಂತರ, ರಾಜ್ ಕೂಡ ಎಂಜಿನಿಯರಿಂಗ್ ಪ್ರವೇಶಕ್ಕಾಗಿ ಜಂಟಿ ಪ್ರವೇಶ ಪರೀಕ್ಷೆ ಬರೆದರು. ಆದರೆ, ಅದರಲ್ಲಿ ಅರ್ಹತಾ ರ್‍ಯಾಂಕ್ ಪಡೆಯಲು ವಿಫಲರಾದರು.

ಈ ಹಿನ್ನಡೆಯಿಂದ ಎದೆಗುಂದದ ಅವರು, ಪಶ್ಚಿಮ ಬಂಗಾಳ ಜಂಟಿ ಪ್ರವೇಶ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗುವ ಮೂಲಕ ಜಲ್ಪೈಗುರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದರು.

"ಕಾಲೇಜಿನ ಮೊದಲ ವರ್ಷದಿಂದಲೇ ಅವರು ಕೋಡಿಂಗ್, ಬ್ಲಾಗಿಂಗ್ ಮತ್ತು ಕಂಟೆಂಟ್ ರೈಟಿಂಗ್ ಕೆಲಸ ಮಾಡಲು ಪ್ರಾರಂಭಿಸಿದರು. ಎರಡನೇ ವರ್ಷದ ಹೊತ್ತಿಗೆ, ಅವರು ತಮ್ಮ ಪೋಷಕರ ಬಳಿ ಹಣ ಕೇಳುವುದನ್ನು ನಿಲ್ಲಿಸಿ ಸಂಪೂರ್ಣವಾಗಿ ಸ್ವಾವಲಂಬಿಯಾದರು. ಮೂರನೇ ವರ್ಷದಲ್ಲಿ, ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್‌ಶಿಪ್ ಅವಕಾಶಕ್ಕಾಗಿ ಪ್ರಯತ್ನಿಸಿ ತಿರಸ್ಕರಿಸಲ್ಪಟ್ಟರು. ಆದರೂ ಅವರು ಛಲ ಬಿಡಲಿಲ್ಲ. ನಾಲ್ಕನೇ ವರ್ಷದಲ್ಲಿ ಅವರು ಅಮೆಜಾನ್ ಇಂಟರ್ನ್‌ಶಿಪ್ ಪಡೆಯುವಲ್ಲಿ ಯಶಸ್ವಿಯಾದರು" ಎಂದು ವಿಕಾಸ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಲೇಜಿನ ಕ್ಯಾಂಪಸ್ ಪ್ಲೇಸ್‌ಮೆಂಟ್ ಸಮಯದಲ್ಲಿ, ಕಾಲೇಜಿನ ಸರಾಸರಿ ಪ್ಯಾಕೇಜ್ ಕೇವಲ 4 ಲಕ್ಷ ರೂಪಾಯಿಗಳಿದ್ದಾಗ, ರಾಜ್ ಬರೋಬ್ಬರಿ 30 ಲಕ್ಷ ರೂಪಾಯಿಗಳ ವಾರ್ಷಿಕ ವೇತನದ ಉದ್ಯೋಗ ಗಿಟ್ಟಿಸಿಕೊಂಡರು. ತದನಂತರ, ಅವರು ಜಗತ್ತಿನ ಟಾಪ್ ಟೆಕ್ ಕಂಪನಿಯಾದ ಗೂಗಲ್ ಸೇರಿದರು. ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ಅವರು ಐದು ವರ್ಷಗಳ ಕಾಲ ಅತ್ಯುತ್ತಮವಾಗಿ ಕೆಲಸ ಮಾಡಿ, ಅಪಾರ ಅನುಭವ ಗಳಿಸಿದರು.

ಇದೀಗ ಅವರು ಗೂಗಲ್ ಕೆಲಸವನ್ನು ಬಿಟ್ಟು, 'ಟೇಕ್ ಯು ಫಾರ್ವರ್ಡ್' ಎಂಬ ಪ್ಲಾಟ್‌ಫಾರ್ಮ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಬಯಸುವ ಆಕಾಂಕ್ಷಿಗಳಿಗೆ ಇದೊಂದು ಒನ್-ಸ್ಟಾಪ್ ಪ್ಲಾಟ್‌ಫಾರ್ಮ್ ಆಗಿದೆ. "ಇಂದು ಆ ಕಂಪನಿಯು 1.5 ಮಿಲಿಯನ್‌ಗೂ ಹೆಚ್ಚು (15 ಲಕ್ಷ) ಸೈನ್-ಅಪ್ ಬಳಕೆದಾರರನ್ನು ಮತ್ತು ತಿಂಗಳಿಗೆ 5 ಮಿಲಿಯನ್ (50 ಲಕ್ಷ) ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದೀಗ ಬೆಂಗಳೂರಿನಲ್ಲಿ ಅವರು ತಮ್ಮದೇ ಆದ ಸ್ವಂತ ಕಚೇರಿಯನ್ನು ಹೊಂದಿದ್ದಾರೆ" ಎಂದು ವಿಕಾಸ್ ತಿಳಿಸಿದ್ದಾರೆ. ತಾವು ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸುತ್ತಿರುವ ರಾಜ್ ವಿಕ್ರಮಾದಿತ್ಯ ಅವರ ಕಠಿಣ ಪರಿಶ್ರಮದ ಕಥೆ ನಿಜಕ್ಕೂ ಶ್ಲಾಘನೀಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+