Chandrayaan 3: ಕಣ್ರೆಪ್ಪೆ ಮುಚ್ಚದೇ ಕಾಯುತ್ತಿದ್ದಾರಲ್ಲಾ, ಅದಿನ್ಯಾವ ರೇಂಜಿನ ಟೆನ್ಸನ್ ಇಸ್ರೋಗೆ ಇರಬಹುದು?
ನಾವು ಜಾತ್ರೇಲಿ ಜಸ್ಟ್ ಹತ್ತು ರುಪಾಯಿ ಕೊಟ್ಟು ತಗೊಂಡ ಬಲೂನೊಂದನ್ನು ಮನೆಗೆ ತಗೆದುಕೊಂಡು ಹೋಗುವಾಗಲೇ, ಎಲ್ಲಿ ನಡುದಾರೀಲೇ ಒಡೆದು ಹೋಗಿಬಿಡುತ್ತೋ ಅಂತೆಲ್ಲಾ ದಾರಿಯುದ್ದಕ್ಕೂ ಫುಲ್ ಟೆನ್ಷನ್ ಆಗುತ್ತಿರುತ್ತದೆ, ಅಂತಾದ್ರಲ್ಲಿ...
ನೂರಾರು ವಿಜ್ಞಾನಿಗಳ ತಂತ್ರಜ್ಞರ ತಂಡವೊಂದು, ನಾಲ್ಕು ವರ್ಷಗಳ ಕಾಲ ನೀರು ನಿದ್ರೆಯಿಲ್ಲದೆ, ಒಂದಲ್ಲ ಎರಡಲ್ಲ ಒಟ್ಟು ಸುಮಾರು 615 ಕೋಟಿ ರುಪಾಯಿಗಳನ್ನು ಖರ್ಚು ಮಾಡಿ, ತಯಾರಿಸಿದ ನೌಕೆಯೊಂದನ್ನು, ಬರೋಬ್ಬರಿ 3.84 ಲಕ್ಷ ಕಿಮೀ ದೂರದ ಮಹಾಯಾತ್ರೆಯೊಂದಕ್ಕೆ ಕಳುಹಿಸಿ, ಕಳೆದ ನಲವತ್ತು ದಿನದಿಂದ ಕಣ್ರೆಪ್ಪೆಯೂ ಮುಚ್ಚದೇ, ಯಾವುದೇ ಸಮಸ್ಯೆ ಆಗದಂತೆ ನೌಕೆಯು ತನ್ನ ಗಮ್ಯ ತಲುಪುವ ಕ್ಷಣಕ್ಕಾಗಿ ಕಾಯುತ್ತಾ ಕುಳಿತಿದ್ದಾರಲ್ಲಾ..

ಅದಿನ್ಯಾವ ರೇಂಜಿನ ಒತ್ತಡ, ಕಾತರ, ಟೆನ್ಷನ್ನು, ಭಯ, ಆತಂಕಗಳೆಲ್ಲಾ ಅವರೊಳಗೆ ಇರಬಹುದು ಜಸ್ಟ್ ಇಮ್ಯಾಜಿನ್? ಅದೂ ಅಲ್ಲದೇ.. ಎಲ್ಲವೂ ಅಂದುಕೊಂಡಂತೆಯೇ, ಚಂದ್ರನ ಮೇಲೆ ಸೇಫಾಗಿ ಹೋಗಿ ಲ್ಯಾಂಡ್ ಆದ ಮೇಲೂ ಕೂಡಾ, ಚಂದ್ರನ ನೆಲದಲ್ಲಿ ಸುತ್ತಾಡೋಕೆ ಸಿಗೋದಾದರೂ ಎಷ್ಟು ಸಮಯ ಗೊತ್ತಾ? ಕೇವಲ ಚಂದ್ರನಲ್ಲಿನ ಒಂದು ಹಗಲು ಅಷ್ಟೇ..
ಒಂದು ಸಲ ಚಂದ್ರನಲ್ಲಿ ಸೂರ್ಯಾಸ್ತವಾಯಿತೋ, ನಮ್ಮ ನೌಕೆಗಳ ಆಟಗಳು ಮುಗಿದುಬಿಡುತ್ತವೆ. ಯಾಕೆಂದರೆ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಉಷ್ಣಾಂಶ ಮೈನಸ್ -250 ರಿಂದ -300ರ ವರೆಗೂ ಹೋಗುತ್ತದೆ. ಇದರಿಂದಾಗಿ ಈ ವಾತಾವರಣದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಸರ್ವೈವ್ ಆಗುವ ಸಾಧ್ಯತೆ ಕಮ್ಮಿ.
ಖುಷಿಯ ವಿಚಾರ ಏನಂದರೆ, ಚಂದ್ರನ ಒಂದು ಹಗಲು ಭೂಮಿಯಲ್ಲಿನ 14 ದಿನಗಳಿಗೆ ಸಮ. ಹಾಗಾಗಿ ನಮಗೆ ಹದಿನಾಲ್ಕು ದಿನಗಳ ಕಾಲಾವಕಾಶವಿದೆ ಚಂದ್ರನಲ್ಲಿ ಹುಡುಕಾಟ ನಡೆಸೋಕೆ.
ಇಷ್ಟೊಂದೆಲ್ಲಾ ಖರ್ಚು ಮಾಡಿ, ಒಂದು ಸಲ ವಿಫಲವಾದರೂ ಛಲ ಬಿಡದೆ ಪ್ರಯತ್ನ ಮಾಡಿ, ನಲವತ್ತು ದಿನದಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಲ್ಲವೂ ಒಳ್ಳೆಯದಾಗ್ಲಿ ಅಂತ ಆಕಾಶ ನೋಡ್ತಾ ಕೂತಿದ್ದಾರೆ ಇಸ್ರೋ ವಿಜ್ಞಾನಿಗಳು.
ಬುಧವಾರ (ಆ 23) ಸಂಜೆ 5.20ರಿಂದ ನಮ್ಮ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವುದಕ್ಕೆ ಶುರುಮಾಡಲಿದ್ದು, ಸಂಜೆ 6.04ಕ್ಕೆ ಲ್ಯಾಂಡ್ ಆಗಲಿದೆ. ಇಳಿಯುತ್ತಿದ್ದಂತೆಯೇ, ಜಗತ್ತಿನ ಭೂಪಟದಲ್ಲಿ ನಮ್ಮ ಭಾರತ ಐತಿಹಾಸಿಕ ದಾಖಲೆಯೊಂದನ್ನು ಬರೆದು ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಜಗತ್ತಿನ ಮೊದಲ ದೇಶವಾಗಿ ಎದೆಯುಬ್ಬಿಸಿ ನಿಲ್ಲಲಿದೆ.
ಪರೀಕ್ಷೆಯಲ್ಲಿ ಇಸ್ರೋ ಗೆದ್ದು ಬೀಗಲಿ ಅಂತ ಇಷ್ಟದೈವಗಳಲ್ಲಿ ಬೇಡಿಕೊಳ್ಳೋಣ. ಒಳ್ಳೇ ಮನಸ್ಸಿಂದ ಏನೇ ಬೇಡಿಕೊಂಡ್ರೂ ಅಶ್ವಿನಿ ದೇವತೆಗಳು ಅಸ್ತು ಅಂತಾರಂತೆ. ಎಲ್ಲರೂ ಒಕ್ಕೊರಲಿನಿಂದ ಇಸ್ರೋ ಜೊತೆ ನಿಲ್ಲೋಣ.












Click it and Unblock the Notifications