ಭಾರತದಲ್ಲಿ ಹೈಡೋಸ್ ನೋವು ನಿವಾರಕ ಮಾತ್ರೆಗಳ ಬಳಕೆ ನಿಷೇಧ: ಅವುಗಳಿಂದ ಅಪಾಯವೇನು?
ನವದೆಹಲಿ: ಮನುಷ್ಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈಡೋಸ್ ನೋವು ನಿವಾರಕ ಮಾತ್ರೆಗಳ ಸೇವೆಯಿಂದ ಎದುರಾಗುವ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು 100 ಮಿಗ್ರಾಂಗಿಂತ ಹೆಚ್ಚಿನ ನೋವು ನಿವಾರಕ ನಿಮೆಸುಲೈಡ್ ಅನ್ನು ಹೊಂದಿರುವ ಮಾತ್ರೆಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ನಿಷೇಧಿಸಿದೆ.
ಭಾರತದ ಅತ್ಯುನ್ನತ ಆರೋಗ್ಯ ಸಂಶೋಧನಾ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶಿಫಾರಸಿನ ಮೇರೆಗೆ ಮತ್ತು ಔಷಧಗಳ ತಾಂತ್ರಿಕ ಸಲಹಾ ಮಂಡಳಿಯೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ ಈ ನಿರ್ಧಾರ ಕೈಗೊಂಡಿದೆ. ನಿಷೇಧಕ್ಕೆ ಸಂಬಂಧಿಸಿದ ಅಧಿಕೃತ ಆದೇಶ ಹೊರಡಿಸಿದೆ.

ಈ ನಿಷೇಧ ನಿರ್ಧಾರವು ತತ್‌ಕ್ಷಣದಿಂದಲೇ ದೇಶಾದ್ಯಂತ ಜಾರಿಗೆ ಬರುವಂತೆ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆ, 1940 ರ ಸೆಕ್ಷನ್ 26 ಎ ಅಡಿಯಲ್ಲಿ ನಿಷೇಧ ವಿಧಿಸಲಾಗಿದೆ. 100 ಮಿಗ್ರಾಂಗಿಂತ ಹೆಚ್ಚಿನ ನಿಮೆಸುಲೈಡ್ ಅನ್ನು ಹೊಂದಿರುವ ಎಲ್ಲಾ ಮಾತ್ರೆಗಳು ಡೋಸೇಜ್ ರೂಪದಲ್ಲಿನ ಬಳಕೆಯು ಮಾನವನ ಆರೋಗ್ಯದ ಮೇಲೆ ಗಂಭೀರ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಈ ಔಷಧ ವಿತರಣೆ ಮಾರಾಟಕ್ಕೆ ಬದಲಾಗಿ ಸುರಕ್ಷಿತ ಮಾತ್ರೆಗಳು, ಔಷಧ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ದೇಶದ ಜನರ ಆರೋಗ್ಯ ದೃಷ್ಟಿಯಿಂದ ಈ ನಿಷೇಧ ನಿರ್ಧಾರ ಸೂಕ್ತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಕೇಂದ್ರ ಸರ್ಕಾರ ಈ ಬಗ್ಗೆ 1940 ರ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 26ಎ ಅಡಿ ನೀಡಲಾದ ಅಧಿಕಾರ ಹಾಗೂ ಔಷಧ ತಾಂತ್ರಿಕ ಸಲಹಾ ಮಂಡಳಿಯೊಂದಿಗೆ ಸಮಾಲೋಚಿಸಿದೆ. ಔಷಧದ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದ್ದರ ಬಗ್ಗೆ ಸೂಕ್ತ ಮಾಹಿತಿಯನ್ನು ಅಧಿಸೂಚನೆಯಲ್ಲಿ ಹಂಚಿಕೊಂಡಿದೆ.
ಏನಿವು ಮಾತ್ರಗಳು? ಅವುಗಳ ಅಪಾಯವೇನು?
ನಿಮೆಸುಲೈಡ್ ನೋವು ಮತ್ತು ಜ್ವರ ನಿವಾರಣೆಗೆ ಸಾಮಾನ್ಯವಾಗಿ ಬಳಸುವ ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧ (NSAID) ಆಗಿವೆ. ಇವುಗಳ ಸೇವನೆಯಿಂದಾಗಿ ದೇಹದಲ್ಲಿ ಯಕೃತ್ತಿನ ವಿಷತ್ವ ಮತ್ತು ಇತರ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿಯೇ ಇಂತಹ ಮಾತ್ರೆಗಳು ಜಾಗತಿಕವಾಗಿ ಪರಿಶೀಲನೆಗೆ ಒಳಗಾಗಿದ್ದು, ಭಾರತದಲ್ಲಿ ನಿಷೇಧ ಹೇರಲಾಗಿದೆ. ಕೇಂದ್ರದ ಈ ನಿರ್ಧಾರಿಂದ ಔಷಧ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸಿದಂತಾಗುತ್ತದೆ. ಮಾನವರಿಗೆ ಈ ಮಾತ್ರೆಗಳ ಬದಲಾಗಿ ಬೇರೆ ಸುರಕ್ಷಿತ ಪರ್ಯಾಯ ಮಾರ್ಗಗಳು, ಔಷಧ ಲಭ್ಯವಿವೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಮಕ್ಕಳ ಸೇವನೆಯ ಔಷಧ ನಿಷೇಧ
ಮಾತ್ರೆಗಳ ಮೇಲಿನ ನಿಷೇಧ ನಿರ್ಧಾರ ಇದೇ ಮೊದಲೇನಲ್ಲ. 2011 ರಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನಿಮೆಸುಲೈಡ್ ಬಳಕೆ ಮೇಲೆ ನಿಷೇಧ ಹೇರಲಾಗಿತ್ತು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನಿಮೆಸುಲೈಡ್ ಸೇವನೆಯಿಂದ ಅಪಾಯ ಎದುರಾಗುವ ಕಾರಣಕ್ಕೆ ನಿಷೇಧಿಸಲಾಗಿತ್ತು. ಅವುಗಳ ಬಳಕೆಗೆ ಬೇರೆ ಬೇರೆ ದೇಶಗಳಲ್ಲಿ ಸಹ ಅನುಮತಿ ಇಲ್ಲ. ಈ ಔಷಧವು ಹೆಪಟೊಟಾಕ್ಸಿಕ್ ಎಂದು ಪರಿಗಣಿಸಲಾಗಿದೆ, ಅದು ಮಕ್ಕಳಿಗೆ ಮಾರಕವಾಗುವ ಕಾರಣಕ್ಕೆ ನಿಷೇಧಿಸಲಾಗಿತ್ತು. ಬೇರೆ ದೇಶಗಳಲ್ಲೂ ಅವುಗಳ ಬಳಕೆ ನಿಷೇಧಿಸಲಾಗಿದೆ.
ಗಂಭೀರ ಯಕೃತ್ತಿನ ಹಾನಿಗೆ ಔಷಧಗಳು ಕಾರಣವೆಂದು ವರದಿ ಸಲ್ಲಿಕೆ ಅದ ನಂತರ ಭಾರತಕ್ಕೂ ಮೊದಲು ಯುರೋಪ್‌ನಲ್ಲಿ, ಫಿನ್‌ಲ್ಯಾಂಡ್, ಸ್ಪೇನ್, ಐರ್ಲೆಂಡ್ ಮತ್ತು ಬೆಲ್ಜಿಯಂನಂತಹ ರಾಷ್ಟ್ರಗಳು ನಿಷೇಧಿಸಿವೆ. ಮಾರಾಟ, ಉತ್ಪಾಧನೆ ಎಲ್ಲಕ್ಕು ಅನ್ವಯಿಸುವಂತೆ ನಿಷೇಧಿಸಲಾಗಿದೆ. 2007 ರಲ್ಲಿ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ನಿಮೆಸುಲೈಡ್ ಅನ್ನು ಪರಿಶೀಲಿಸಿತ್ತು. ನಿಯಮಿತ ನೋವು ನಿವಾರಣೆಗಿಂತ ಇಂತಹ ಔಷಧ, ಮಾತ್ರೆಗಳಿಂದ ಅಪಾಯ ಹೆಚ್ಚು ಎಂಬುದು ಗೊತ್ತಾಗುತ್ತಿದ್ದಂತೆ ಯುರೋಪಿಯನ್ ಒಕ್ಕೂಟದ ಹೆಚ್ಚಿನ ಭಾಗಗಳಲ್ಲಿ ಅಮಾನತಿಗೆ ನಿರ್ಧರಿಸಲಾಯಿತು.












Click it and Unblock the Notifications