PM-SHRI Scheme: ಭಾರತದಲ್ಲಿ 14000 ಶಾಲೆಗಳ ಪುನರಾಭಿವೃದ್ಧಿಗೆ ಕೇಂದ್ರ ಸಂಪುಟ ಅಸ್ತು
ನವದೆಹಲಿ, ಸೆಪ್ಟೆಂಬರ್ 7: ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ "ಉದಯೋನ್ಮುಖ ಭಾರತಕ್ಕಾಗಿ ಪ್ರಧಾನಮಂತ್ರಿ ಶಾಲೆಗಳು(PM-SHRI) ಯೋಜನೆ"ಗೆ ಕೇಂದ್ರ ಸಂಪುಟವು ಬುಧವಾರ ಅನುಮೋದನೆ ನೀಡಿದೆ.
ಭಾರತದಲ್ಲಿ 27,360 ಕೋಟಿ ರೂಪಾಯಿ ವೆಚ್ಚದಲ್ಲಿ PM SHRI ಯೋಜನೆ ಅಡಿಯಲ್ಲಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತದೆ. ದೇಶದ ಹಲವೆಡೆ ಒಟ್ಟು 14000 ಶಾಲೆಗಳನ್ನು ಪ್ರಾರಂಭಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯಡಿಯಲ್ಲಿ, ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳು ಸೇರಿದಂತೆ 14,000ಕ್ಕೂ ಹೆಚ್ಚು ಶಾಲೆಗಳನ್ನು PM-SHRI ಶಾಲೆಗಳಾಗಿ ಬಲಪಡಿಸಲಾಗುವುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಶಿಕ್ಷಣ ಸಚಿವಾಲಯದ ಪ್ರಕಾರ, ಈ ಯೋಜನೆಯನ್ನು ಪ್ರಧಾನಮಂತ್ರಿ SHRI ಶಾಲೆಗಳು (PM ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಮುಖ ಲಕ್ಷಣಗಳನ್ನು ಪ್ರತಿಬಿಂಬಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 14,000 ಶಾಲೆಗಳನ್ನು ಪುನರಾಭಿವೃದ್ಧಿಪಡಿಸಲಾಗುತ್ತದೆ.

ಹೊಸ ಯೋಜನೆ ಘೋಷಿಸಿದ್ದ ಪ್ರಧಾನಮಂತ್ರಿ ಮೋದಿ
ಶಿಕ್ಷಕರ ದಿನದ ಹಿನ್ನೆಲೆ ಸೆಪ್ಟೆಂಬರ್ 5ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತದೆ. ಈ ಶಾಲೆಗಳ ಮೂಲಕ ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಬಲಪಡಿಸುವುದಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದರು.

ಪ್ರಧಾನಿ SHRI ಶಾಲೆಗಳು ಎಂಬುದರ ಅರ್ಥವೇನು?
ಗುಜರಾತ್‌ನ ಗಾಂಧಿನಗರದಲ್ಲಿ ಜೂನ್‌ನಲ್ಲಿ ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ಸಮ್ಮೇಳನದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರೊಂದಿಗೆ ಈ ಯೋಜನೆ ಬಗ್ಗೆ ಮೊದಲು ಚರ್ಚಿಸಲಾಯಿತು. ರಾಜ್ಯಗಳೊಂದಿಗೆ ಸಮಾಲೋಚಿಸಿ ಉಪಕ್ರಮವನ್ನು ಮುಂದುವರಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಂದೇ ಹೇಳಿದ್ದರು." ನವೋದಯ ವಿದ್ಯಾಲಯಗಳು, ಕೇಂದ್ರೀಯ ವಿದ್ಯಾಲಯಗಳು ಮತ್ತು ಪ್ರಧಾನಮಂತ್ರಿ SHRI ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಗಾಲಯಗಳು ಇದ್ದಂತೆ," ಎಂದಿದ್ದರು.

NEP-2020ರ ವೈಶಿಷ್ಟ್ಯತೆಗಳೇನು?
ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪಠ್ಯಕ್ರಮದ ರಚನೆ ಮತ್ತು ಬೋಧನಾ ಶೈಲಿಯನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಧ್ಯಮ ಮತ್ತು ಪ್ರೌಢ ಎಂದು ವಿಭಾಗಿಸಲಾಗಿದೆ.
ಪ್ರಿ-ಸ್ಕೂಲ್ ಆಗಿರುವ 1 ರಿಂದ 2ನೇ ತರಗತಿಯು ಕ್ರೀಡೆಯನ್ನು ಆಧರಿಸಿದ ಕಲಿತಾ ಶೈಲಿಯನ್ನು ಒಳಗೊಂಡಿರುತ್ತದೆ. ಪ್ರಾಥಮಿಕ ಅಂದರೆ 3 ರಿಂದ 5ನೇ ತರಗತಿವರೆಗೂ ಕೆಲವು ಔಪಚಾರಿಕ ಬೋಧನೆಯೊಂದಿಗೆ ಲಘು ಪಠ್ಯಪುಸ್ತಕಗಳನ್ನು ಪರಿಚಯಿಸಲಾಗುತ್ತದೆ. ವಿಷಯ ಶಿಕ್ಷಕರನ್ನು ಮಧ್ಯಮ ಹಂತದಲ್ಲಿ ಅಂದರೆ 6 ರಿಂದ 8ನೇ ತರಗತಿಯಲ್ಲಿ ಪರಿಚಯಿಸಲಾಗುತ್ತದೆ. 9 ಮತ್ತು 10ನೇ ತರಗತಿ ಸಂದರ್ಭದಲ್ಲಿ ಕಲೆ ಮತ್ತು ವಿಜ್ಞಾನ ಅಥವಾ ಇತರ ವಿಭಾಗಗಳ ನಡುವೆ ಯಾವುದೇ ಪ್ರತ್ಯೇಕತೆಯಿಲ್ಲದೆ ಬಹುಶಿಸ್ತಿನ ಪಠ್ಯಕ್ರಮವನ್ನು ಹೊಂದಿರುತ್ತದೆ.

ಒಟ್ಟು ಯೋಜನೆಯ ವೆಚ್ಚದಲ್ಲಿ ಕೇಂದ್ರದ ಪಾಲು?
ಉದಯೋನ್ಮುಖ ಭಾರತಕ್ಕಾಗಿ ಪ್ರಧಾನಮಂತ್ರಿ ಶಾಲೆಗಳು(PM-SHRI) ಯೋಜನೆಯ ಒಟ್ಟು ಮೌಲ್ಯವು 27360 ಕೋಟಿ ರೂಪಾಯಿ ಆಗಿರಲಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ಪಾಲು 18128 ಕೋಟಿ ರೂಪಾಯಿ ಆಗಿರುತ್ತದೆ. ಇದಕ್ಕಾಗಿ ಆಯ್ಕೆ ಮಾಡಿರುವ ಶಾಲೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಇನ್ನೂ ಬಿಡುಗಡೆ ಮಾಡಿಲ್ಲ. ಆದಾಗ್ಯೂ ಪ್ರಧಾನಿ SHRI ಶಾಲೆಗಳು ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೆ "ಮಾರ್ಗದರ್ಶನ" ನೀಡುತ್ತವೆ ಎಂದು ಘೋಷಿಸಿದೆ.
ಈ ಶಾಲೆಗಳಲ್ಲಿ ಲ್ಯಾಬ್‌ಗಳು, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಲೈಬ್ರರಿಗಳು, ಕ್ರೀಡಾ ಉಪಕರಣಗಳು, ಕಲಾ ಕೊಠಡಿ ಇತ್ಯಾದಿಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿರುತ್ತವೆ. ನೀರಿನ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಇಂಧನ-ಸಮರ್ಥ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ಸಾವಯವ ಜೀವನಶೈಲಿಯ ಏಕೀಕರಣದೊಂದಿಗೆ ಹಸಿರು ಶಾಲೆಗಳಾಗಿ ಅಭಿವೃದ್ಧಿಗೊಳ್ಳುತ್ತವೆ ಎಂದು ಉಲ್ಲೇಖಿಸಲಾಗಿದೆ.












Click it and Unblock the Notifications