2023ರಿಂದ 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಣೆ
ಬೆಂಗಳೂರು, ಡಿಸೆಂಬರ್ 26: ಮುಂದಿನ ವರ್ಷದಿಂದ ಒಂದು ವರ್ಷವರೆಗೆ ದೇಶದ 81.35 ಕೋಟಿ ಫಲಾನುಭವಿಗಳು ಕೇಂದ್ರ ಸರ್ಕಾರದಿಂದ ಉಚಿತ ಆಹಾರ ಧಾನ್ಯಗಳನ್ನು ಪಡೆಯಲಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು, ಮುಂದಿನ ವರ್ಷ 2023 ಜನವರಿ 1 ರಿಂದ ಒಂದು ವರ್ಷದವರೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎಣ್‌ಎಫ್‌ಎಸ್‌ಎ) ಅಡಿಯಲ್ಲಿ ಸುಮಾರು 81.35 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಉಚಿತ ಆಹಾರ ಧಾನ್ಯಗಳನ್ನು ನೀಡುವ ಯೋಜನೆಗೆ ಒಪ್ಪಿಗೆ ಸೂಚಿಸಿದೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪೀಯೂಷ್ ಗೋಯಲ್ ಅವರು, ಕೇಂದ್ರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಆಹಾರ ಸಬ್ಸಿಡಿಯಾಗಿ ರೂ.2 ಲಕ್ಷ ಕೋಟಿಗಿಂತ ಹೆಚ್ಚು ಹಣವನ್ನು ಮೀಸಲಿಟ್ಟಿದೆ. ಬಡತನ ಮತ್ತು ಬಡವರ ಆರ್ಥಿಕ ಹೊರೆಯನ್ನು ತೆಗೆದುಹಾಕಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಉಚಿತ ಆಹಾರ ಧಾನ್ಯಗಳ ವಿತರಣೆಗೆ ತೀರ್ಮಾನಿಸಿದೆ ಎಂದು ಪೀಯೂಷ್ ಗೋಯಲ್ ತಿಳಿಸಿದ್ದಾರೆ.

ಕಲ್ಯಾಣ ಯೋಜನೆಗಳ ಫಲಾನುಭವಿಗಳ ಬಗ್ಗೆ ಪ್ರಧಾನ ಮಂತ್ರಿಗಳ ಸಂವೇದನಾಶೀಲತೆಯನ್ನು ಪ್ರತಿಬಿಂಬಿಸುವ ಐತಿಹಾಸಿಕ ನಿರ್ಧಾರ ಇದಾಗಿದೆ. ಪಡಿತರ ಆದ್ಯತಾ ಕುಟುಂಬಗಳ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಆಹಾರ ಧಾನ್ಯಗಳು ಮತ್ತು ಅಂತ್ಯೋದಯ ಅನ್ನ ಯೋಜನೆ ಫಲಾನುಭವಿಗಳಿಗೆ ಪ್ರತಿ ಮನೆಗೆ 35 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗುವುದು ಎಂದರು.
ಕಾಯ್ದೆಯಡಿಲ್ಲಿ ಪ್ರತಿ ಕೆ.ಜಿ ಅಕ್ಕಿಗೆ 3 ರೂಪಾಯಿ, ಗೋಧಿಗೆ ಕೆಜಿಗೆ 2 ರೂಪಾಯಿ ಮತ್ತು 1 ಕೆಜಿ ಒರಟಾದ ಧಾನ್ಯಗಳನ್ನು ಫಲಾನುಭವಿಗಳಿಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಇದೀಗ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನೀರ್ಣಯ ಕೈಗೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ 28 ತಿಂಗಳ ಕಾಲ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮಾಡಲಾಗಿತ್ತು ಎಂದು ವಿವರಿಸಿದರು.












Click it and Unblock the Notifications