ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಒಪ್ಪಿಗೆ, ನೀವು ತಿಳಿಯಬೇಕಾದ ಮಹತ್ವ ಮಾಹಿತಿ
ನವದೆಹಲಿ, ಸೆಪ್ಟೆಂಬರ್ 19: ಲೋಕಸಭೆ ಹಾಗೂ ದೇಶದ ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಒದಗಿಸುವ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕೊನೆಗೂ ಒಪ್ಪಿಗೆ ನೀಡಿದೆ. ಈ ಮೂಲಕ ದೇಶದ ಅರ್ಧದಷ್ಟು ಇರುವ ಮಹಿಳೆಯರಿಗೆ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
ದೇವೇಗೌಡ ಸರ್ಕಾರದಿಂದ ಮೊದಲ ಮಂಡನೆ:
ಸದ್ಯ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇಕಡ 14ರಷ್ಟಿದೆ. ಆದ್ದರಿಂದ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡಬೇಕು ಎಂಬುದು ಈ ಮಸೂದೆರ ಬಹುಮುಖ್ಯ ಉದ್ದೇಶವಾಗಿದೆ. ಈ ಮಹಿಳಾ ಮೀಸಲಾತಿ ಮಸೂದೆಗೆ ಸಾಕಷ್ಟು ವರ್ಷಗಳಿಂದ ಬೇಡಿಕೆ ಇತ್ತು. 1996ರಲ್ಲಿ ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಸರ್ಕಾರ ಮೊದಲ ಬಾರಿಗೆ ಈ ಮಸೂದೆ ಮಂಡಿಸಿತ್ತು. ಆದರೆ, ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆ ಕಾರಣ ಇದುವರೆಗೂ ಸಂಸತ್ತಿನಲ್ಲಿ ಈ ಕುರಿತ ಮಸೂದೆ ಅಂಗೀಕಾರ ಸಾಧ್ಯವಾಗಿರಲಿಲ್ಲ.

ಸಂಸತ್ತಿನ 5 ದಿನಗಳ ವಿಶೇಷ ಅಧಿವೇಶನದ ಪ್ರಯುಕ್ತ ಸೋಮವಾರ ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ದೊರೆತಿದೆ ಎನ್ನಲಾಗಿದೆ.
ಟ್ವೀಟರ್ ಖಾತೆಯಲ್ಲಿ ಮಾಹಿತಿ:
ಈ ಕುರಿತು ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, " ಮಹಿಳಾ ಮೀಸಲಾತಿಯ ಬೇಡಿಕೆಯನ್ನು ಈಡೇರಿಸುವ ನೈತಿಕ ಧೈರ್ಯ ಮೋದಿ ಸರ್ಕಾರಕ್ಕೆ ಮಾತ್ರ ಇತ್ತು, ಇದು ಸಂಪುಟದ ಅನುಮೋದನೆಯಿಂದ ಸಾಬೀತಾಗಿದೆ. ನರೇಂದ್ರ ಮೋದಿ ಜೀ ಮತ್ತು ಮೋದಿ ಸರ್ಕಾರಕ್ಕೆ ಅಭಿನಂದನೆಗಳು" ಎಂದು ತಿಳಿಸಿದ್ದರು. ಬಳಿಕೆ ಆ ಟ್ವೀಟ್ ಅಳಿಸಲಾಗಿತ್ತು.
ಮಸೂದೆ ಮಂಡಿಸಲು ಸರ್ಕಾರ ಉತ್ಸುಕ:
ಇತ್ತೀಚೆಗೆ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸರ್ಕಾರ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಸದ್ಯ ಹೊಸ ಸಂಸತ್ ಭವನದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಸರ್ಕಾರ ಉತ್ಸುಕವಾಗಿದೆ ಎಂದು ತಿಳಿದು ಬಂದಿದೆ.

ವಿರೋಧ ಪಕ್ಷಗಳ ಒಕ್ಕೂಟ ನಿರ್ಣಯ:
ಇದಲ್ಲದೆ ಹೈದರಾಬಾದ್‌ನಲ್ಲಿ ನಡೆದ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾದ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುವಂತೆ ಕೂಡ ನಿರ್ಣಯ ಕೈಗೊಂಡಿತ್ತು. ಕೇಂದ್ರ ಸಚಿವ ಸಂಪುಟವು ಮಹಿಳಾ ಮೀಸಲಾತಿ ಮಸೂದೆಗೆ ನಿರ್ಧಾರ ಕೈಗೊಂಡಿರುವುದರ ಬಗ್ಗೆ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಬಹುದಿನಗಳ ಬೇಡಿಕೆಯಾಗಿದೆ. ನಾವು ಕೇಂದ್ರ ಸಚಿವ ಸಂಪುಟದ ವರದಿ ನಿರ್ಧಾರವನ್ನು ಸ್ವಾಗತಿಸುತ್ತೇವೆ ಮತ್ತು ಮಸೂದೆಯ ವಿವರಗಳಿಗಾಗಿ ಕಾಯುತ್ತಿದ್ದೇವೆ. ವಿಶೇಷ ಅಧಿವೇಶನದ ಮೊದಲು ಸರ್ವಪಕ್ಷಗಳ ಸಭೆಯಲ್ಲಿ ಇದನ್ನು ಚೆನ್ನಾಗಿ ಚರ್ಚಿಸಬಹುದಿತ್ತು ಮತ್ತು ಗೌಪ್ಯತೆಯ ಮುಸುಕಿನಡಿಯಲ್ಲಿ ಕಾರ್ಯನಿರ್ವಹಿಸುವ ಬದಲು ಒಮ್ಮತವನ್ನು ನಿರ್ಮಿಸಬಹುದಿತ್ತು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಸಂಸತ್ ಅಧಿವೇಶನದಲ್ಲಿ "ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು, ಇದು ಅಲ್ಪಾವಧಿಯದ್ದಾಗಿರಬಹುದು ಆದರೆ ಸಂದರ್ಭಕ್ಕೆ ದೊಡ್ಡದಾಗಿದೆ ಎಂದು ಹೇಳಿದ್ದರು. ಲೋಕಸಭೆಯಲ್ಲಿ 75 ವರ್ಷಗಳ ಸಂಸತ್ತಿನ ಚರ್ಚೆಯಲ್ಲಿ ಮಾತನಾಡಿದ ಅವರು, ವರ್ಷಗಳಿಂದ ಮಹಿಳಾ ಸಂಸದಿಯರ ಕೊಡುಗೆ ಹೆಚ್ಚುತ್ತಿದೆ ಎಂದು ಮಸೂದೆ ಬಗ್ಗೆ ಸುಳಿವು ನೀಡಿ ಮಾತನಾಡಿದ್ದರು.
ಮಹಿಳಾ ಸಂಸದರು ಲೋಕಸಭೆಯ 15% ಗಿಂತ ಕಡಿಮೆ ಪಾಲನ್ನು ಹೊಂದಿದ್ದಾರೆ. ಮಹಿಳೆಯರ ಪ್ರಾತಿನಿಧ್ಯವು ಅನೇಕ ರಾಜ್ಯಗಳ ವಿಧಾನಸಭೆಗಳಲ್ಲಿ 10% ಗಿಂತ ಕಡಿಮೆಯಾಗಿದೆ. ಈ ಮಸೂದೆಯನ್ನು ಆರಂಭದಲ್ಲಿ ಸೆಪ್ಟೆಂಬರ್ 12, 1996 ರಂದು ಸಂಸತ್ತಿನಲ್ಲಿ ಪರಿಚಯಿಸಲಾಗಿತ್ತು.
ಯಾವ ರಾಜ್ಯ ವಿಧಾನಸಭೆಯು ಇಲ್ಲಿಯವರೆಗೆ ಈ ನಿಬಂಧನೆಯನ್ನು ಹೊಂದಿಲ್ಲ. ಆದರೆ 20 ರಾಜ್ಯಗಳಾದ ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳಗಳು ತಮ್ಮ ರಾಜ್ಯ ಪಂಚಾಯತ್ ರಾಜ್ ಕಾಯಿದೆಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿಯನ್ನು ಒದಗಿಸಿವೆ.












Click it and Unblock the Notifications