ಮುಸ್ಲಿಂ ಮಹಿಳೆಯರ ಜತೆ 'ರಕ್ಷಾ ಬಂಧನ' ಆಚರಿಸಲು ಎನ್‌ಡಿಎ ಸಂಸದರಿಗೆ ಪ್ರಧಾನಿ ಸೂಚನೆ
ನವದೆಹಲಿ, ಆಗಸ್ಟ್ 02: ಮುಸ್ಲಿಂ ಮಹಿಳೆಯರಲ್ಲಿ ಭದ್ರತೆಯ ಭಾವನೆ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮೇಲೆ ನಿಷೇಧ ಹೇರಿದ ನಿರ್ಧಾರ ವಿಚಾರವನ್ನು 'ರಕ್ಷಾ ಬಂಧನ' ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ತಲುಪಿಸಬೇಕು. ಅವರೊಂದಿಗೆ ಈ ಬಾರಿಯ ರಕ್ಷಾ ಬಂಧನ ಹಬ್ಬವನ್ನು ಆಚರಿಸುವಂತೆ ಎನ್‌ಡಿಎ ಸಂಸದರಿಗೆ ಪ್ರಧಾನಿ ನರೆಂದ್ರ ಮೋದಿಯವರು ತಿಳಿಸಿದ್ದಾರೆ.
ಕಳೆದ ಸೋಮವಾರ ರಾತ್ರಿ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ನ ಸೇರಿದಂತೆ ಒಟ್ಟು 338 ಎನ್‌ಡಿಎ ಸಂಸದರ ಜೊತೆಗಿನ ಎಂದಿನಂತೆ ನಡೆದ ಸರಣಿ ಸಭೆಯಲ್ಲಿ ಪ್ರಧಾನಮಂತ್ರಿಗಳು ಮಾತನಾಡಿದರು. ಸಭೆ ಮೂಲಕ ಪ್ರಧಾನಿ ಮೋದಿ 2024ರ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮೈತ್ರಿಕೂಟದೊಳಗೆ ಸಿನರ್ಜಿ (ಸಹಕಾರ) ಹೆಚ್ಚಿಸುವ ಪ್ರಯತ್ನದಲ್ಲಿದ್ದಾರೆ. ಈ ಸಂಬಂಧ ಸಭೆಯನ್ನು ಎಲ್ಲ 38 ಪಕ್ಷಗಳ ನಾಯಕರವರೆಗೆ ವಿಸ್ತರಿಸಿದ್ದಾರೆ.

ಸಮಾಜದ ಎಲ್ಲ ವರ್ಗಗಳೊಂದಿಗೆ ಸಂಪರ್ಕ ಸಾಧಿಸುವ ಅಗತ್ಯತೆ ಇದೆ. ಕಳೆದ ವಾರ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಬಿಜೆಪಿ ಸರ್ಕಾರದ ತಲಾಖ್ ನೀರ್ಧಾರವು ಪಾಸ್ಮಾಂಡ ಮುಸ್ಲಿಮ್ ಮಹಿಳೆಯರನ್ನು ತಲುಪಿಸಲು ಒತ್ತು ನೀಡಬೇಕು ಎಂದು ಅವರು ಸಂಸದರಿಗೆ ಹೇಳಿದರು.
2019 ರಲ್ಲಿ ಮಸೂದೆ ಸಂಸತ್ ಅಂಗೀಕಾರ
ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರವು ಮುಸ್ಲಿಂ ಮಹಿಳೆಯರ ಪರವಾಗಿ ಉತ್ತೇಜನ ನೀಡುತ್ತದೆ. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಸಂಕೇತವಾದ ಈ ರಕ್ಷಾ ಬಂಧನ ಹಬ್ಬವು ಇದೇ ಆಗಸ್ಟ್ 30 ನಡೆಯಲಿದೆ. ಈ ಹಬ್ಬದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಕೆಲವು ಕಾರ್ಯಕ್ರಮ ಆಯೋಜಿಸಬೇಕಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.

ಇನ್ನೂ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಯನ್ನು 2019 ರಲ್ಲಿ ಸಂಸತ್ ಅಂಗೀಕರಿಸಿತ್ತು. ತ್ವರಿತ ತ್ರಿವಳಿ ತಲಾಖ್ ಅಭ್ಯಾಸವನ್ನು ಕಾನೂನುಬಾಹಿರ ಮತ್ತು ಪತಿಗೆ ಜೈಲು ಶಿಕ್ಷೆ ವಿಧಿಸುವ ಅಪರಾಧ ಎಂದು ಅಂದು ಸರ್ಕಾರ ಘೋಷಿಸಿತು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಬಿಜೆಪಿಯು ಎನ್‌ಡಿಎ ಸಂಸದರನ್ನು ಪ್ರದೇಶವಾರು ಒಂದಕ್ಕೆ 40 ಸದಸ್ಯರಂತೆ ಹಲವು ಗುಂಪುಗಳಾಗಿ ವಿಂಗಡಿಸಿದೆ. ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಪ್ರಧಾನಮಂತ್ರಿ ಈ ಕುರಿತು ಪ್ರತ್ಯೇಕವಾಗಿ ಮಾತನಾಡುವ ಸಾಧ್ಯತೆಗಳ ಇವೆ ಎನ್ನಲಾಗಿದೆ.












Click it and Unblock the Notifications